ಬ್ರಿಟಿಷರು ಭಾರತೀಯರ ಮೇಲೆ ದಬ್ಬಾಳಿಕೆ ಮಾಡಲು ಶುರು ಮಾಡಿದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಒಬ್ಬ ಬುಡಕಟ್ಟು ಜನಾಂಗದ ವ್ಯಕ್ತಿಯೇ ಭಗವಾನ್ ಬಿರ್ಸಾ ಮುಂಡಾರವರು ಎಂದು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಣ್ಣಹನುಮಂತಪ್ಪ ಜಿ ತಿಳಿಸಿದರು.
ಶಿವಮೊಗ್ಗದ ನೆಹರು ಯುವ ಕೇಂದ್ರ, ಭಾರತ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಾಗರ್ ಯೂತ್ ಫೋರ್ಸ್ ಅಸೋಸಿಯೇಷನ್‌ನೊಂದ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಭಾರತ ಆಳಿಸಿಕೊಳ್ಳುವ ದೇಶವೇ ಹೊರತು ಆಳುವ ದೇಶವಲ್ಲವೆಂದು ತಿಳಿದ ಬ್ರಿಟಿಷರು ಭಾರತದ ಮೇಲೆ ದಬ್ಬಾಳಿಕೆ ನಡೆಸಲು ಆರಂಭಿಸಿದಾಗ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಲಕ್ಷಾಂತರ ಮಂದಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅದರಲ್ಲಿ ವಿಶೇಷವಾಗಿ ಬುಡಕಟ್ಟು ಜನಾಂಗದವರು ಮತ್ತು ಅಲೆಮಾರಿ ಜನಾಂಗದವರು ಕಾಡಿನಲ್ಲಿ ಕಾಡುಪಾಪಗಳಂತೆ ಜೀವನ ನಡೆಸುತ್ತಿದ್ದರು. ಪರಿಸರದ ಜತೆಗೆ ತಮ್ಮ ಜೀವನ ಕಳೆಯುತ್ತಿದ್ದರು. ಇಂತಹ ಜನಾಂಗದವರ ಮೇಲೆ ಮೇಲೆ ಬ್ರಿಟಿಷರು ನಡೆಸುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಭಗವಾನ್ ಬಿರ್ಸಾ ಮುಂಡಾ ಅವರು ಒಂದು ಗುಂಪುಕಟ್ಟಿಕೊಂಡು ಬ್ರಿಟಿಷರ ಅಟ್ಟಹಾಸ ಮುರಿಯಲು ಮುಂದಾದರು” ಎಂದು ಹೇಳಿದರು.
“ಬಿರ್ಸಾ ಮುಂಡಾ ಅವರು ಅಕ್ಷರಶಃ ಯಾವುದೇ ಹೆಸರಿಗಾಗಲಿ, ಕೀರ್ತಿಗಾಗಲಿ ಹೋರಾಟ ಮಾಡಿದವರಲ್ಲ. ತಮ್ಮ ಬುಡಕಟ್ಟು ಜನಾಂಗದ ಮೇಲೆ ಮಿತಿಮೀರಿದ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಸಿಡಿದೆದ್ದು, ಬ್ರಿಟಿಷರಿಗೆ ಕ್ರಾಂತಿಯ ಕಿಡಿ ಹೇಗಿರುತ್ತೆ ಎಂಬುದನ್ನು ಈ ನಾಯಕ ತೋರಿಸಿಕೊಟ್ಟಿದ್ದಾರೆ. ಇಂತಹ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರನ ಫೋಟೋ ಕೂಡಾ ಇಂದಿಗೂ ಪಾರ್ಲಿಮೆಂಟ್‌ನಲ್ಲಿದೆ. ಇಂತಹ ಆದರ್ಶ ವ್ಯಕ್ತಿಗಳ ಬದುಕನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ರೂಢಿಸಿಕೊಳ್ಳೋಣ” ಎಂದು ಕರೆ ನೀಡಿದರು.
ಇತಿಹಾಸ ಪ್ರಾಧ್ಯಾಪಕರಾದ ರಾಜು ಮಾತನಾಡಿ, “ಪ್ರಪಂಚದ ಅನೇಕ ದೇಶಗಳಲ್ಲಿ ಭಾರತವೂ ಸೇರಿದಂತೆ ತಳಸಮುದಾಯದ ಜನಾಂಗದವರು ಅಂದರೆ ಬುಡುಕಟ್ಟು, ಅಲೆಮಾರಿ ಹಾಗೂ ಆದಿವಾಸಿಗಳು ಮೊದಲಿಂದಲೂ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾದಂತಹ ಸಮುದಾಯಗಳಾಗಿವೆ. ಈ ಜನಾಂಗದವರು ಅಂದಿನಿಂದಲೂ ಕೂಡಾ ತಮ್ಮ ಅಸ್ತಿತ್ವಕ್ಕಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಶೋಷಣೆ, ದೌರ್ಜನ್ಯಗಳನ್ನು ಅಂತ್ಯಗೊಳಿಸಲು ಭಾರತದಲ್ಲಿಯೂ ಕೂಡಾ ಬುಡಕಟ್ಟು ಜನಾಂಗದ ನಾಯಕ ಭಗವಾನ್ ಬಿರ್ಸಾ ಮುಂಡಾ ಅವರು ಹೋರಾಟಕ್ಕೆ ಇಳಿಯುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳದ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರೆಗೆ ಖ್ಯಾತ ನಟ ಅಮಿತಾಭ್ ಬಚ್ಚನ್‌ಗೆ ಆಹ್ವಾನ
ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಎರಡರ ಸಂಯೋಜನಾಧಿಕಾರಿ ಮಮತಾ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಸಾಗರ್ ಯೂತ್ ಫೋರ್ಸ್ ಅಸೋಸಿಯೇಷನ್ ಮುಖ್ಯಸ್ಥರಾದ ಪುಷ್ಪಲತಾ, ಭಾರತಿ ಸೇರಿದಂತೆ ಇತರರು ಇದ್ದರು.
ವರದಿ : ಅಮಿತ್ ಆರ್, ಆನಂದಪುರ