ಮೂಢನಂಬಿಕೆ ವಿರುದ್ಧ ಜಾಗೃತಿ ಕಾರ್ಯಕ್ರಮ, ಅಭಿಯಾನಗಳು ನಡೆಯುತ್ತಲೇ ಇವೆ. ಆದರೂ, ಮೌಢ್ಯಕ್ಕೆ ಕಡಿವಾಣ ಬಿದ್ದಿಲ್ಲ. ಮಾಟಮಂತ್ರಗಳಂತಹ ಅಪಾಯಕಾರಿ ಮೂಢನಂಬಿಕೆಗೆ ಜನರು ಬಲಿಯಾಗುತ್ತಲೇ ಇದ್ದಾರೆ. ಅಂತದ್ದೇ ಆಘಾತಕಾರಿ ಘಟನೆಯಲ್ಲಿ, ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷದ ಮಗಳನ್ನು ‘ಬಲಿ’ ಕೊಟ್ಟು, ಆಕೆಯ ದೇಹವನ್ನು ಕತ್ತರಿಸಿ, ಪ್ರಸಾದವೆಂದು ಮಗುವಿನ ಲಿವರ್ (ಯಕೃತ್ತು)ಅನ್ನು ತಿಂದಿರುವ ದುರ್ಘಟನೆ ಜಾರ್ಖಂಡ್‌ನ ಪಲಾಮುದಲ್ಲಿ ನಡೆದಿದೆ. ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪಲಾಮು ಜಿಲ್ಲೆಯ ಖಾರದ್ ಗ್ರಾಮದ ನಿವಾಸಿ ಗೀತಾ ದೇವಿ ಎಂಬಾಕೆಯನ್ನು ‘ನರಬಲಿ’ಯ ಭಾಗವಾಗಿ ತನ್ನ ಸ್ವಂತ ಮಗಳನ್ನೇ ಕೊಂದಿದ್ದಾರೆ. ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ, ದೇವರ ಮುಂದಿಟ್ಟು, ಯಕೃತ್ತನ್ನು ತಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಸೇನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಮಹಿಳೆಯು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. “ಆರೋಪಿ ಮಹಳೆ ಹತ್ತಿರದ ಮಾರುಕಟ್ಟೆಗೆ ಹೋಗಿ ಬಳೆಗಳು, ಬಟ್ಟೆಗಳು ಮತ್ತು ಪೂಜೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಾರೆ. ಸಂಜೆ ವೇಳೆಗೆ, ತನ್ನ ಒಂದೂವರೆ ವರ್ಷದ ಮಗಳನ್ನು ತನ್ನ ಮನೆಯಿಂದ 1-2 ಕಿ.ಮೀ ದೂರದಲ್ಲಿರುವ ಸಿಕ್ನಿ ಬರ್ವಧೋರಾ ಕಾಡಿಗೆ ಕರೆದೊಯ್ದಿದ್ದಾಳೆ. ಅಲ್ಲಿ, ತನ್ನ ಮತ್ತು ಮಗುವಿನ ಬಟ್ಟೆಗಳನ್ನು ತೆಗೆದು, ಪೂಜೆ ಮಾಡಿದ್ದಾರೆ. ಬಳಿಕ, ಚಾಕುವಿನಿಂದ ಮಗುವಿನ ಕತ್ತು ಸೀಳಿ ಕೊಂದಿದ್ದಾಳೆ. ಬಲಿಯ ಪ್ರಸಾದವಾಗಿ ಮಗುವಿನ ಯಕೃತ್ತನ್ನು ತಿಂದಿದ್ದಾಳೆ” ಎಂದು ತನಿಖೆ ನಡೆಸಿರುವ ಪೊಲೀಸರು ತಿಳಿಸಿದ್ದಾರೆ.
ಮನೆಗೆ ತೆರಳಿದ ಮಹಿಳೆಯನ್ನು ಅಕೆಯ ಅತ್ತೆ ಗಮನಿಸಿದ್ದು, ಮಗುವಿನ ಬಗ್ಗೆ ವಿಚಾರಿಸಿದ್ದಾರೆ. ಮಹಿಳೆಯು ಮಗುವನ್ನು ಕೊಂದಿರುವುದಾಗಿ ಕೇಳಿದ್ದಾಳೆ. ಆತಂಕಗೊಂಡ ಮಹಿಳೆಯ ಅತ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಮಹಳೆಯು ತಾನು ಮಾಟ-ಮಂತ್ರವನ್ನು ಕಲಿತಿರುವುದಾಗಿ ಹೇಳಿಕೊಂಡಿದ್ದಾಳೆ. ತನ್ನ ಮಗಳು ಅಥವಾ ಗಂಡನನ್ನು ಬಲಿ ಕೊಟ್ಟರೆ, ಪವಾಡದ ಮಂತ್ರ ಕಲಿಯುವಲ್ಲಿ ಯಶಸ್ಸಾಗಬಹುದು ಎಂದು ಆಕೆ ನಂಬಿದ್ದಳು. ಅದಕ್ಕಾಗಿ, ಮಗುವನ್ನು ಬಲಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾಳೆ.