ತಮ್ಮ ಸಿನಿಮಾದ ದೃಶ್ಯಗಳನ್ನು ಬಳಸಿಕೊಂಡಿದ್ದಾರೆಂದು ಆರೋಪಿಸಿ ನಟಿ ನಯನತಾರಾ ಅವರಿಗೆ ನಟ ಧನುಷ್ ಲೀಗಲ್ ನೋಟಿಸ್ ಕಳಿಸಿದ್ದಾರೆ. ಪರಿಹಾರವಾಗಿ 10 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ತಮಗೆ ನೋಟಿಸ್ ಕಳಿಸಿರುವ ಧನುಷ್ ವಿರುದ್ಧ ನಯನತಾರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟಿ ನಯನತಾರಾ ನಿರ್ಮಾಣ ಮಾಡಿರುವ ‘Nayanthara: Beyond the Fairytale’ ಸಾಕ್ಷ್ಯಚಿತ್ರದಲ್ಲಿ ಧನುಷ್ ಅವರ ‘ನಾನುಮ್ ರೌಡಿ ಧಾನ್’ ಸಿನಿಮಾದ ಮೂರು ಸೆಕೆಂಡ್ ದೃಶ್ಯವನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಧನುಷ್ ನೋಟಿಸ್ ಕಳಿಸಿದ್ದಾರೆ.
ನೋಟಿಸ್ ಕಳಿಸಿರುವ ಧನುಷ್ ವಿರುದ್ಧ ನಯನತಾರಾ ಸುದೀರ್ಘ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “2015ರಲ್ಲಿ ಬಿಡುಗಡೆಯಾದ ‘ನಾನುಮ್ ರೌಡಿ ಧಾನ್’ ಚಿತ್ರದ ದೃಶ್ಯವನ್ನು ನಮ್ಮ ಸಿನಿಮಾದಲ್ಲಿ ಬಳಸಿಕೊಳ್ಳಲು ಧನುಷ್ ಅವರ ಅನುಮತಿ ಕೇಳಿದ್ದೆ. ಆದರೆ, ಅವರು ಅನುಮತಿ ನೀಡಲು ನೀಡಲು ನಿರಾಕಸಿದರು. ಬಳಿಕ, ಸಾಕ್ಷ್ಯಚಿತ್ರವನ್ನು ಮರು ಚಿತ್ರೀಕರಣ ಮಾಡಿದ್ದೇವೆ” ಎಂದು ನಯನತಾರಾ ಹೇಳಿದ್ದಾರೆ.
“ಪ್ರೀತಿ ಮತ್ತು ಮದುವೆ ಸೇರಿದಂತೆ ಜೀವನದ ಅಮೂಲ್ಯ ಕ್ಷಣಗಳ ಕುರಿತ ದೃಶ್ಯಗಳನ್ನು ಸಾಕ್ಷ್ಯಚಿತ್ರದಲ್ಲಿ ಬಳಸಲಾಗಿದೆ. ಆ ದೃಶ್ಯಗಳು ಜನರ ಫೋನ್‌ಗಳಲ್ಲಿ ಸೆರೆಹಿಡಿದವುಗಳಾಗಿವೆ” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
#SpreadLove and Only Love 🫶🏻 pic.twitter.com/6I1rrPXyOg
— Nayanthara✨ (@NayantharaU) November 16, 2024
“ಅಭಿಮಾನಿಗಳು ನೋಡುವ ಧನುಷ್‌ಗೂ, ಅಸಲಿ ಧನುಷ್‌ಗೂ ವ್ಯತ್ಯಾಸಗಳಿವೆ. ಅವರು ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಯಾವುದೇ ಹಿನ್ನೆಲೆಯಿಲ್ಲದೆ, ಅಭಿಮಾನಿಗಳ ಬೆಂಬಲದಿಂದ ಒಂಟಿ ಮಹಿಳೆಯಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ. ಧನುಷ್ ಅವರ ನೋಟಿಸ್‌ಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ” ಎಂದು ನಯನತಾರಾ ಹೇಳಿದ್ದಾರೆ.