ಡಿಸೆಂಬರ್ 1 ರಿಂದ ನೋಂದಣಿ ಆರಂಭ | ಜನವರಿ 1ರಿಂದ ಖರೀದಿ ಶುರು
2024-25ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮತ್ತು ಬಿಳಿ ಜೋಳವನ್ನು 2025ರ ಜನವರಿಯಿಂದ ಮಾರ್ಚ್ ಮಾಹೆಯವರಗೆ ಸರ್ಕಾರ ಖರೀದಿಸುತ್ತಿದ್ದು, ಜಿಲ್ಲೆಯ ರೈತರು ಮುಂದಿನ ಡಿಸೆಂಬರ್ 1 ರಿಂದ ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲೆಯ ರೈತರಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಗಿ, ಜೋಳ ಖರೀದಿ ಕೇಂದ್ರಗಳ ಆರಂಭದ ಕುರಿತ ಜಿಲ್ಲಾ ಟಾಸ್ಕ್ ಪೊರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
2024-25ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ, ಬಿಳಿಜೋಳವನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಚಿಕ್ಕಬಳ್ಳಾಪುರದ ಎಲ್ಲ ತಾಲ್ಲೂಕುಗಳಲ್ಲಿ ತೆರೆಯಲು ಕ್ರಮವಹಿಸಬೇಕು. ಖರೀದಿ ಅಧಿಕಾರಿಗಳು ರೈತರಿಂದ ರಾಗಿ ಖರೀದಿಯ ಆರಂಭದಲ್ಲಿ ರೈತರ ಹೆಸರು, ವಿಳಾಸ, ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ ಐಡಿ ಸಂಖ್ಯೆ, ಪಹಣಿ, ಆಧಾರ್ ಪ್ರತಿ, ಹಾಗೂ ಮೊಬೈಲ್ ಸಂಖ್ಯೆ ಪಡೆಯಬೇಕು. ರೈತರ ನೊಂದಣಿಯನ್ನು ಮುಂದಿನ ಡಿಸೆಂಬರ್ 1 ರಿಂದ ಆರಂಭವಾಗಿ ಡಿಸೆಂಬರ್ 30 ರವರಗೆ ಮಾಡಲಾಗುತ್ತದೆ. ಖರೀದಿಯು 2025 ಜನವರಿ 1 ರಿಂದ ಆರಂಭಿಸಿ ಮಾರ್ಚ್ 31 ರವರಗೆ ಖರೀದಿಸಲಾಗುತ್ತದೆ.

ಪ್ರತಿ ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯ ನುರಿತ ಗ್ರೇಡರ್ ಗಳನ್ನು ಕೃಷಿ ಇಲಾಖೆಯವರು ನೇಮಿಸುವುದು ಹಾಗೂ ಮೂರನೇ ವ್ಯಕ್ತಿ ಪರಿವೀಕ್ಷಕರನ್ನ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ನಾಗರೀಕ ಸರಬರಾಜು ನಿಗಮ ನಿಯಮಿತ, ಚಿಕ್ಕಬಳ್ಳಾಪರ ಜಿಲ್ಲೆಯ ಇವರು ನೇಮಕ ಮಾಡುವುದು. ಆಹಾರ ಧಾನ್ಯಗಳ ಗುಣಮಟ್ಟವನ್ನು ಜಂಟಿಯಾಗಿ ದೃಢೀಕರಿಸಬೇಕು. ಪ್ರತಿ ಖರೀದಿ ಕೇಂದ್ರದಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರ ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಹಾಗೂ ಯು.ಪಿ.ಎಸ್ ಹೊಂದಿರಬೇಕು. ವಿದ್ಯುತ್ ಸಂಪರ್ಕವನ್ನು ವ್ಯವಸ್ಥಿತವಾಗಿ ಪರೀಕ್ಷಿಸಿಕೊಳ್ಳಬೇಕು. ಖರೀದಿ ಅಧಿಕಾರಿಯು ರೈತರಿಂದ ರಾಗಿ ಖರೀದಿ ಮುನ್ನ ನಿಗಧಿತ ದಿನಾಂಕ ಹಾಗೂ ಸಮಯವನ್ನು ನೀಡುವುದು.
ನೊಂದಾಯಿಸಲ್ಪಟ್ಟ ರೈತರಿಂದ ಮಾತ್ರ ಖರೀದಿ ಅಧಿಕಾರಿ ರಾಗಿ ಖರೀದಿಸಬೇಕು. ಯಾವುದೇ ಕಾರಣಕ್ಕೂ ವ್ಯಾಪಾರಸ್ಥರು, ದಲ್ಲಾಳಿಗಳಿಗೆ ಅವಕಾಶ ನೀಡುವಂತಿಲ್ಲ. ಪ್ರತಿಯೊಂದು ಖರೀದಿ ಕೇಂದ್ರದಲ್ಲಿ ನೆಲಹಾಸು ಹಾಕಿ ಅದರ ಮೇಲೆ ಖರೀದಿಸಲಾದ ರಾಗಿಯನ್ನು ಸರ್ಕಾರವು ಸರಬರಾಜು ಮಾಡುವ ಗೋಣಿ ಚೀಲಗಳಲ್ಲಿ ನಿಗಧಿತ ಪ್ರಮಾಣದಲ್ಲಿ ತುಂಬಿ, ಖರೀದಿಸಿದ ಆಯಾ ದಿನವೇ ಶೇಖರಣಾ ಕೇಂದ್ರದಲ್ಲಿ ಕ್ರಮಬದ್ಧವಾಗಿ ಎಣಿಕೆಗೆ ಅನುಕೂಲವಾಗುವಂತೆ ಜೋಡಣೆ ಮಾಡಬೇಕು. ಪ್ರತಿ ಲಾಟ್‌ಗೆ ಜೋಡಣೆ ಮಾಡಲಾದ ಒಟ್ಟು ಚೀಲಗಳ ಸಂಖ್ಯೆ ನಮೂದಿಸುವುದು.
ಖರೀದಿ ಏಜೆನ್ಸಿಯು ಸಾಗಾಣಿಕೆ ಗುತ್ತಿಗೆದಾರರನ್ನು ನೇಮಿಸುವ ಸಂಬಂಧ ತುರ್ತು ಟೆಂಡರ್ ಹೊರಡಿಸಲು ಕ್ರಮವಹಿಸುವುದು ಹಾಗೂ ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸಲಾದ ರಾಗಿಯನ್ನು ಶೇಖರಣಾ ಕೇಂದ್ರಕ್ಕೆ ಸಾಗಾಣಿಕೆ ಮಾಡಲು ಜಿ.ಪಿ.ಎಸ್ ಹೊಂದಿರುವ ಸಾಗಾಣಿಕಾ ವಾಹನದಲ್ಲಿ ಸಾಗಾಣಿಕೆ ಮಾಡಬೇಕು. ಖರೀದಿ ಸಮಯದಲ್ಲಿ ಯಾವುದೇ ರೀತಿಯ ಗಲಾಟೆ. ಗದ್ದಲಗಳಿಗೆ ಅವಕಾಶ ನೀಡದೆ ಸರತಿ ಸಾಲಿನ ಪ್ರಕಾರ ರಾಗಿ ಖರೀದಿಸಬೇಕು. ರೈತರಿಂದ ರಾಗಿ ಖರೀದಿಸಿದ ದಿನವೇ ಸಂಬಂಧಿಸಿದ ರೈತರಿಗೆ ರಸೀದಿ ಆಯಾ ದಿನವೇ ನೀಡುವುದು. ಪ್ರತಿಯೊಂದು ಖರೀದಿ ಕೇಂದ್ರಗಳಲ್ಲಿ ಬ್ಯಾನರ್‌ಗಳನ್ನು ಹಾಕಿ ಪ್ರತಿ ಕ್ವಿಂಟಾಲ್‌ಗೆ ಸರ್ಕಾರವು ನಿಗಧಿಪಡಿಸಿರುವ ದರ ಹಾಗೂ ಇತರೆ ವಿವರವನ್ನು ಪ್ರದರ್ಶಿಸುವುದು.
ಖರೀದಿ ಕೇಂದ್ರಗಳಲ್ಲಿ ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಖರೀದಿ ಅಧಿಕಾರಿಯು ರಾಗಿ ಖರೀದಿ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ ನಿಯಮಾನುಸಾರ ಕರ್ತವ್ಯ ನಿರ್ವಹಿಸುವುದು. ಖರೀದಿ ಪ್ರಕ್ರಿಯೆಯು ಸುಗಮವಾಗಿ ನಡೆಯುವಂತೆ ಕ್ರಮವಹಿಸುಬೇಕು ಎಂದು ಸೂಚನೆಗಳನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ರೈತರು ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ಮುನ್ನ ತೇವಾಂಶವಿಲ್ಲದೆ ಚೆನ್ನಾಗಿ ಒಣಗಿಸಿ, ಧೂಳು ಹಾಗೂ ಮಣ್ಣು ಇರದಂತೆ ಉತ್ತಮ ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!
ಈ ಸಂದರ್ಭದಲ್ಲಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಉಪನಿರ್ದೇಶಕ ನಾಗರಾಜು ಕೆಳಗಿನ ಮನೆ, ಕೃಷಿ ಇಲಾಖೆ ಉಪನಿರ್ದೇಶಕಿ ಜಿ.ದೀಪಶ್ರಿ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಸಹಾಯಕ ನಿರ್ದೇಶಕ ಡಿ.ನಾಗರಾಜು, ಕೆ.ಎಫ್.ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕರಾದ ವಿಜಯ್ ಕುಮಾರ್, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಸ್ ಮಂಜುನಾಥ್, ಕ.ರಾ.ಸ.ಮಾ.ಪ ಮಂಡಳಿ ಶಾಖಾ ವ್ಯವಸ್ಥಾಪಕರಾದ ಪ್ರದೀಪ್, ಕಾನೂನು ಮಾಪನ ಶಾಸ್ತ್ರ ಇಲಾಖೆ ನಿಯಂತ್ರಕರಾದ ಎನ್.ಬೀನಾ ಮತ್ತಿತರು ಉಪಸ್ಥಿತರಿದ್ದರು.