ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಹೆಚ್ಚಾಗುತ್ತಿದೆ. ನವೆಂಬರ್ 7ರಂದು ಜಿರಿಬಾಮ್ ಜಿಲ್ಲೆಯಲ್ಲಿ ನಾಪತ್ತೆಯಾದವರದ್ದು ಎನ್ನಲಾದ ಶವಗಳು ಜೀರಿ ನದಿಯಲ್ಲಿ ಪತ್ತೆಯಾದ ಬಳಿಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ಶನಿವಾರ ಸಂಜೆ 4:30 ಗಂಟೆಯಿಂದ ಅನಿರ್ದಿಷ್ಟಾವಧಿಗೆ ಮಣಿಪುರದ ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಇನ್ನು ಪ್ರತಿಭಟನಾಕಾರರು ಇಂಫಾಲ್‌ನಲ್ಲಿ ಶಾಸಕರುಗಳು, ಸಚಿವರುಗಳ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಟಯರ್‌ಗಳನ್ನು ಸುಟ್ಟು ರಸ್ತೆ ತಡೆ ನಡೆಸಿದರು. ಕುಕಿ ಬಂಡುಕೋರರು ಆರು ಮಂದಿಯನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮುಂದಿನ ಆದೇಶದವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಶನಿವಾರ ಮಣಿಪುರದಾದ್ಯಂತ ಹಲವು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಇದನ್ನು ಓದಿದ್ದೀರಾ? ಮಣಿಪುರ ಜನಾಂಗೀಯ ದ್ವೇಷ: ಜೀರಿ ನದಿಯಲ್ಲಿ ಶವಗಳಾಗಿ ತೇಲಿದ ಮಹಿಳೆ – ಮಕ್ಕಳು
ಇತ್ತೀಚೆಗೆ ಬಂಡುಕೋರರು ಸಿಆರ್‌ಪಿಎಫ್ ಶಿಬಿರ ಮತ್ತು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ಸಿಆರ್‌ಪಿಎಫ್ ಮತ್ತು ಮಣಿಪುರ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿ ನಡೆದಿತ್ತು. 10 ಕುಕಿ ಬಂಡುಕೋರರ ಹತ್ಯೆಯಾಗಿತ್ತು. ಈ ವೇಳೆ ನಿರಾಶ್ರಿತರ ಕೇಂದ್ರದಿಂದ ಆರು ಮಂದಿ ನಾಪತ್ತೆಯಾಗಿದ್ದರು. ಅವರನ್ನು ಅಪಹರಣ ಮಾಡಲಾಗಿದೆಯೇ ಅಥವಾ ಅವರು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತ ಜಾಗಕ್ಕೆ ತಲುಪಿದ್ದಾರೆಯೇ ಎಂಬುದು ಖಚಿತವಾಗಿರಲಿಲ್ಲ.
ಶುಕ್ರವಾರ ಜಿರಿಬಾಮ್ ಜಿಲ್ಲೆಯ ನದಿಯಿಂದ ಮೂರು ಶವಗಳು ಪತ್ತೆಯಾಗಿದ್ದರೆ, ಶನಿವಾರ ಮತ್ತೆ ಮೂರು ಶವಗಳು ಪತ್ತೆಯಾಗಿವೆ. ಆರು ಮಂದಿ ಕೂಡಾ ಮೈತಿ ಸಮುದಾಯಕ್ಕೆ ಸೇರಿದವರು ಎಂದು ವರದಿಯಾಗಿದೆ. ಈ ಮೃತದೇಹಗಳು ಅಪಹರಣಕ್ಕೊಳಗಾದವರ ಮೃತದೇಹ ಎಂದು ಹೇಳಲಾಗಿದೆ. ಅಪಹರಣಕ್ಕೆ ಒಳಗಾದ ಜನರನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಭದ್ರತಾ ಪಡೆಗಳು ವಿಫಲವಾಗಿವೆ ಎಂದು ಆರೋಪಿಸಿ ಮೈತಿ ಸಂಘಟನೆಗಳು ಪ್ರತಿಭಟನೆ ಆರಂಭಿಸಿದೆ.
