ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿಯ ಉಳಿವಿಗಾಗಿ ಮತ್ತು ಸ್ವಚ್ಛತೆಗಾಗಿ ಕೈಗೊಂಡಿರುವ ನಿರ್ಮಲ ತುಂಗಭದ್ರಾ ಜಲಜಾಗೃತಿ-ಜನಜಾಗೃತಿ ಅಭಿಯಾನದ ಪಾದಯಾತ್ರೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ದಾವಣಗೆರೆ ಜಿಲ್ಲಾಧಿಕಾರಿ ಜಿ ಎಂ ಗಂಗಾಧರಸ್ವಾಮಿ ಚಾಲನೆ ನೀಡಿದರು.
ಮಧ್ಯ ಕರ್ನಾಟಕದ ನವರು ಜಿಲ್ಲೆಗಳ ಜೀವನದಿಯಾದ ತುಂಗಭದ್ರಾ ನದಿಯು ರಾಜ್ಯದಲ್ಲಿ ಸುಮಾರು 420 ಕಿಮೀ ಗಳ ದೂರ ಹರಿಯಲಿದ್ದು ಜನಸಾಮಾನ್ಯರ ಕುಡಿಯುವ, ರೈತರ ರೈತಾಪಿ ಬದುಕಿನ ನೀರಾವರಿಗೆ ಜೀವ ಜಲವಾಗಿದೆ ಇತ್ತೀಚಿನ ದಿನಗಳಲ್ಲಿ ನದಿಯು ಮಾನವನ ವಿವಿಧ ಆಧುನಿಕ ಕ್ರಮಗಳಿಂದ ಕಲುಷಿತಗೊಂಡು ಅಪಾಯಕಾರಿಯತ್ತ ತಲುಪಿದ್ದು ಇದರ ಸಂರಕ್ಷಣೆಗಾಗಿ ತುಂಗಭದ್ರಾ ನದಿಯ ಉಗಮ ಸ್ಥಾನದಿಂದ ಕೊನೆಯ ಹಂತದವರೆಗೆ ಕೈಗೊಂಡಿದ್ದ ಪಾದಯಾತ್ರೆ ಶುಕ್ರವಾರ ಬೆಳಗ್ಗೆ ಹರಿಹರವನ್ನು ತಲುಪಿತ್ತು. ಇಲ್ಲಿಂದ ಮುಂದಕ್ಕೆ ಸಾಗುವ ಸಲುವಾಗಿ ಹರಿಹರ ನಗರದ ಹರಿಹರೇಶ್ವರ ದೇವಾಲಯದಲ್ಲಿ ಜಿಲ್ಲಾಡಳಿತದ ವತಿಯಿಂದ ಚಾಲನೆ ನೀಡಿ ಯಾತ್ರಿಗಳಿಗೆ ಅಭಿನಂದಿಸಿದರು.
ಶೃಂಗೇರಿಯಿಂದ ಮಠದ ಶ್ರೀಗಳಿಂದ ಉದ್ಘಾಟನೆಯಾದ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ – ಜನಜಾಗೃತಿ ಪಾದಯಾತ್ರೆ ಹರಿಹರಪುರದ ಮೂಲಕ ಮುನ್ನಡೆದು, ಈ ಪಾದಯಾತ್ರೆ ಶಿವಮೊಗ್ಗ ಮೂಲಕ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮೂಲಕ ಹರಿಹರ ತಲುಪಿದೆ. ಸಾರ್ವಜನಿಕರನ್ನು ಉದ್ದೇಶಿಸಿ ನದಿಯ ನೀರಿನ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು. ಸ್ವಚ್ಛ ನೀರಿನ ಮೂಲದ ರಕ್ಷಣೆ, ನದಿಯ ನೀರಿನ ನೈರ್ಮಲ್ಯ ಕಾಪಾಡಲು ಜನಸಾಮಾನ್ಯರ ರೈತರ ಕಾಳಜಿ ಸೇರಿದಂತೆ ನದಿಪಾತ್ರದ ಹಳ್ಳಿ, ನಗರ ಪ್ರದೇಶ, ಹಾಗೂ ಅದನ್ನು ಅವಲಂಬಿಸಿರುವ ಇತರೆ ಪ್ರದೇಶಗಳ ಜನರಿಗೆ ಸಂವಾದದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ನಿರ್ಮಲ ತುಂಗಭದ್ರಾ ಜಲಜಾಗೃತಿ-ಜನಜಾಗೃತಿ ಅಭಿಯಾನವನ್ನು ರಾಷ್ಟ್ರೀಯ ಸ್ವಾಭಿಮಾನ ಅಂದೋಲನ. ನವದೆಹಲಿ, ಪರ್ಯಾವರಣ ಟ್ರಸ್ಟ್ (ರಿ.), ಶಿವಮೊಗ್ಗ, ನಿರ್ಮಲ ತುಂಗಭದ್ರಾ ಅಭಿಯಾನ – ಕರ್ನಾಟಕ, ಬೃಹತ್ ಪಾದಯಾತ್ರೆ ಆಯೋಜಿಸಿದ್ದು ಹಲವು ಸ್ಥಳೀಯ ಸಂಘಸಂಸ್ಥೆಗಳು ಕೈಜೋಡಿಸಿವೆ.
ನಿರ್ಮಲ ತುಂಗಭದ್ರಾ ಅಭಿಯಾನದಡಿಯಲ್ಲಿ ತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆಯನ್ನು ರಾಘವೇಂದ್ರ ಸ್ವಾಮಿ ಮಠದ ಪಕ್ಕ, ನದಿ ತಟದ ತುಂಗಭದ್ರಾರತಿಯ ಕಾರಿಡಾರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಶ್ರೀಗಳು “ದೂರದರ್ಶನದಲ್ಲಿ ಬೆಳಗಿನ ಕಾರ್ಯಕ್ರಮದಲ್ಲಿ ಹಲವು ಜ್ಯೋತಿಷಿಗಳು ನದಿಗಳಲ್ಲಿ ಸ್ನಾನ ಮಾಡಿ ನಿಮ್ಮ ಬಟ್ಟೆಯನ್ನು ಬಿಟ್ಟು ಹೋದರೆ ನಿಮ್ಮ ಪಾಪ ಪರಿಹಾರವಾಗುತ್ತದೆ ಎಂದು ಕರೆ ನೀಡುತ್ತಾರೆ. ಇದರಿಂದ ಪ್ರಭಾವಿತರಾದ ಮುಗ್ಧ ಜನಗಳು ನದಿಗಳಿಗೆ ಬಟ್ಟೆ, ಪೂಜೆ ಪುರಸ್ಕಾರದ ವಸ್ತುಗಳನ್ನು ಬಿಟ್ಟು ಹೋಗೋದರಿಂದ ನದಿ ಕಲುಷಿತಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತದೆ. ಇದನ್ನು ತೊರೆದು ಜನ ಎಚ್ಚೆತ್ತುಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಂಚಭೂತಗಳೆಂದು ಕರೆಸಿಕೊಳ್ಳುವ ಭೂಮಿ, ಆಕಾಶ, ನೀರು, ಗಾಳಿ, ಅಗ್ನಿ, ಸರ್ವ ಜನಾಂಗಕ್ಕೂ ಜಲಚರ, ವನಚರ ಭೂಮಿಯ ಮೇಲಿನ ಎಲ್ಲಾ ಪ್ರಾಣಿಗಳಿಗೂ ಅತ್ಯವಶ್ಯಕವಾಗಿದೆ. ಇವುಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಕಾರ್ಯಕರ್ತ ಕುಮಾರಸ್ವಾಮಿ ಮಾತನಾಡಿ “ತುಂಗಭದ್ರಾ ನದಿ ನಮ್ಮೆಲ್ಲರ ಜೀವನದಿ. ಜನಸಾಮಾನ್ಯರಿಗೆ ರೈತರಿಗೆ ಆಧಾರವಾಗಿದೆ. ಇಂದು ಹಲವು ಕಾರಣಗಳಿಂದ ನದಿ ಕಲುಷಿತಗೊಳಿಸಿದ್ದು, ಸಮಸ್ತರಿಗೂ ಕೂಡ ಅಪಾಯದ ಕರೆಗಂಟೆಯಾಗಿದೆ. ಹೀಗಾಗಿ ಜಲಮೂಲಗಳ ಸಂರಕ್ಷಿಸುವ ನಿಟ್ಟಿನಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ” ಎಂದು ಕರೆ ನೀಡಿದರು.

ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಂಚಾಲಕ ಬಸವರಾಜ್ ವೀರಾಪುರ “ಮಾತನಾಡಿ ದೇಶದಾದ್ಯಂತ ಸಂರಕ್ಷಣೆಗೆ 272 ನದಿಗಳನ್ನು ಗುರುತಿಸಿದ್ದು, ಈಗಾಗಲೇ 21000 ಕಿಲೋಮೀಟರ್ ನದಿ ಪಾತ್ರದಲ್ಲಿ ಪಾದಯಾತ್ರೆ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ತುಂಗಭದ್ರಾ ಸಂರಕ್ಷಣೆಗಾಗಿ ಪ್ರಾರಂಭಿಸಿರುವ ಈ ಪಾದಯಾತ್ರೆ ಶೃಂಗೇರಿಯಿಂದ ಈಗಾಗಲೇ 230 ಕಿಲೋಮೀಟರ್ ಕ್ರಮಿಸಿದ್ದೇವೆ, ಮುಂದೆ ಕಿಷ್ಕಿಂದೆವರೆಗೂ ಸಾಗಲಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ್ದ ಐವರು ಆರೋಪಿಗಳ ಬಂಧನ
ಕಾರ್ಯಕ್ರಮದಲ್ಲಿ ಹರಿಹರ,ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಶ್ರೀ ಕಾಗಿನೆಲೆ ಕನಕ ಗುರುಪೀಠ, ಬೆಳ್ಳೂಡಿ, ಬಿ.ಪಿ. ಹರೀಶ್, ವಿಧಾನಸಭಾ ಸದಸ್ಯರು, ಸಂಸದೆ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ , ಶ್ರೀ ಎಲ್. ಕೆ. ಶ್ರೀನತಿ, IIT ಪ್ರಾಧ್ಯಾಪಕರು, ಮಾಜಿ ಶಾಸಕ ರಾಮಪ್ಪನವರು, ಮಾಜಿ ಶಾಸಕ ಶ್ರೀ ಹೆಚ್. ಎಸ್. ಶಿವಂಶಂಕರ್, ನಗರಸಭೆ ಅಧ್ಯಕ್ಷೆ ಶ್ರೀಮತಿ ಕವಿತಾ ಮಾರುತಿ ಬೇದರ್, ಶ್ರೀ ನಂದಿಗಾವಿ ಶ್ರೀನಿವಾಸ್, ಚಂದ್ರಶೇಖರ್ ಪೂಜಾರ್ರವರು, ತಪೋವನ ಮುಖ್ಯಸ್ಥರಾದ ಡಾ. ಶಶಿಕುಮಾರ್ ಮೆಹರ್ವಾಡೆ, ತಹಶೀಲ್ದಾರ್ ಗುರುಬಸವರಾಜ್, ತಾಲೂಕು ಕಾರ್ಯನಿರ್ವಾಹಕಾಧಿಕಾರಿ ಶ್ರೀಮತಿ ಸುಮಲತಾ, ಪೊಲೀಸ್ ವೃತ್ತ ನಿರೀಕ್ಷಕ ಎಸ್. ದೇವಾನಂದ್ ಹಾಗೂ ಸಾರ್ವಜನಿಕರು, ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
