ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯವರು ಠಾಣೆಯಲ್ಲಿ ದಾಖಲಾಗಿದ್ದ ಕಳುವು ಪ್ರಕರಣಗಳಲ್ಲಿ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮೈಸೂರು ನಗರದ ಶ್ರೀರಾಂಪುರ ಚೆಕ್‌ಪೋಸ್ಟ್ ಬಳಿ ಗುಮಾನಿ ಮೇರೆಗೆ ವಾಹನಗಳನ್ನು ಚೆಕ್ ಮಾಡುತ್ತಿದ್ದಾಗ ಒಬ್ಬ ಸ್ಕೂಟರ್ ಸವಾರ ವಾಪಸ್ ತಿರುಗಿಸಿಕೊಂಡು ಹೋಗುತ್ತಿದ್ದವನ ಮೇಲೆ ಅನುಮಾನ ಬಂದು ಆತನನ್ನು ವಶಕ್ಕೆ ಪಡೆದು ಸ್ಕೂಟರ್ ಪರಿಶೀಲಿಸಿದಾಗ ಚಿನ್ನಾಭರಣಗಳು ಮತ್ತು ಬೆಳ್ಳಿ ಪದಾರ್ಥಗಳು ಇರುವುದು ಕಂಡು ಬಂದಿವೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಆರೋಪಿಯು ಮತ್ತೊಬ್ಬ ಸಹಚರನೊಂದಿಗೆ ಸೇರಿ ದಿನಾಂಕ ನ.10ರಂದು ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿಯಲ್ಲಿ ಕಳವು ಮಾಡಿರುವ ಆಭರಣಗಳಾಗಿರುವುದಾಗಿ ತಿಳಿಸಿದ್ದಾನೆ. ಆರೋಪಿಯಿಂದ ಒಟ್ಟು 36,22,000 ರೂಪಾಯಿ ಮೌಲ್ಯದ ಸುಮಾರು 516 ಗ್ರಾಂ ತೂಕದ ಚಿನ್ನಾಭರಣಗಳು, 26ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮತ್ತು ಮಾಲು ಪತ್ತೆ ಕಾರ್ಯವನ್ನು ಮುಂದುವರಿಸಿರುತ್ತಾರೆ.
ಪತ್ತೆ ಕಾರ್ಯಚರಣೆಯನ್ನು ಮೈಸೂರು ನಗರದ ಡಿಸಿಪಿ ಮುತ್ತುರಾಜ್ ಅಪರಾಧ ಮತ್ತು ಸಂಚಾರ ವಿಭಾಗ ಮಾರ್ಗದರ್ಶನದಲ್ಲಿ, ಕೃಷ್ಣರಾಜ ವಿಭಾಗದ ಎಸಿಪಿ ರಮೇಶ್‌ಕುಮಾರ್ ಹೆಚ್ ಬಿ ನೇತೃತ್ವದಲ್ಲಿ, ಕುವೆಂಪುನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಎಲ್ ಮತ್ತು ಪಿಎಸ್ಐ ಗೋಪಾಲ್ ಎಸ್ ಪಿ ಮದನ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಆನಂದ್ ವಿ, ಮಹೇಶ್ವರ್, ಮಂಜುನಾಥ್ ಕೆ ಟಿ, ಮಂಜುನಾಥ್ ಎಂ ಪಿ, ಯಶವಂತ್, ಮಂಜು ಹೆಚ್ ವಿ. ಹಜರತ್, ಸುರೇಶ್, ರವಿ ಮತ್ತು ನಾಗೇಶ್ ಕೈಗೊಂಡಿದ್ದರು.
