ಎಸ್ಎಸ್ಎಲ್ಸಿಯಲ್ಲಿ ಪದೇ-ಪದೇ ಫೇಲ್ ಆಗಿದ್ದಕ್ಕೆ ಕೋಪಗೊಂಡ ಬಾಲಕನೊಬ್ಬ ದೇವಸ್ಥಾನದಲ್ಲಿದ್ದ ದೇವರ ವಿಗ್ರಹವನ್ನು ವಿರೂಪಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ತಿಪ್ಪಸಂದ್ರ ಸರ್ಕಲ್‌ನಲ್ಲಿರುವ ಲಕ್ಷ್ಮೀ ಭುವನೇಶ್ವರಿ ವಿಗ್ರಹವನ್ನು ಬಾಲಕ ವಿರೂಪಗೊಳಿಸಿದ್ದಾನೆ. ಭಕ್ತರು ದೇವಸ್ಥಾನಕ್ಕೆ ಬಂದಾಗ, ವಿಗ್ರಹಕ್ಕೆ ಹಾನಿಯಾಗಿರುವುದು ಗೊತ್ತಾಗಿದೆ. ಬಳಿಕ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಲಕ ದೇವರ ಮೇಲೆ ನಂಬಿಕೆ ಇಟ್ಟಿದ್ದ. ಲಕ್ಷ್ಮೀ ಭುವನೇಶ್ವರಿದೇವಿಯನ್ನು ನಿತ್ಯವೂ ಪೂಜಿಸುತ್ತಿದ್ದ. ತಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಬೇಕೆಂದು ಬೇಡಿಕೊಳ್ಳುತ್ತಿದ್ದ. ಆದರೆ, ಮೂರು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಬಾಲಕ, ಪದೇ-ಪದೇ ಫೇಲ್ ಆಗಿದ್ದ.
ತಾನು ಪೂಜೆ ಮಾಡಿದರೂ, ಬೇಡಿಕೊಂಡರೂ ಪಾಸಾಗಲು ಆಗಲಿಲ್ಲ. ದೇವರು ಕರುಣೆ ತೋರಿಲ್ಲವೆಂದು ಸಿಟ್ಟಾದ ಬಾಲಕ, ರಾತ್ರಿ ವೇಳೆ ದೇವಸ್ಥಾನದ ಬಳಿ ಹೋಗಿ, ವಿಗ್ರಹವನ್ನು ವಿರೂಪಗೊಳಿಸಿದ್ದಾನೆ ಎಂದು ಹೇಳಲಾಗಿದೆ.
ಆತ ವಿಗ್ರಹವನ್ನು ವಿರೂಪಗೊಳಿಸಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಜೀವನ್ ಭೀಮಾನಗರದಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.