ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಪಿ ಎನ್ ಭುವನ್ ₹1.49 ಕೋಟಿ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಆರ್ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.
ಕೊಣನೂರು ಗ್ರಾಮ ಪಂಚಾಯತಿ ಜತೆಗೆ ಗಂಗೂರು ಗ್ರಾಮ ಪಂಚಾಯಿತಿ ಪ್ರಭಾರ ಕಾರ್ಯದರ್ಶಿಯಾಗಿದ್ದ ಭುವನ್, 15ನೇ ಹಣಕಾಸು ಯೋಜನೆಯಡಿ, ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ, ಸಿಬ್ಬಂದಿ ವೇತನ ಖಾತೆ, ಗ್ರಾಮೀಣ ಯೋಜನೆಯಲ್ಲಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆಂಬ ಆರೋಪವಿದೆ.
“ನಿಯಮಬಾಹಿರವಾಗಿ ₹1,49,78,753 ಹಣ ದುರುಪಯೋಗ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲಾಗುತ್ತದೆ” ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ l ಮದ್ಯ ಸೇವಿಸಿದ ಅಮಲಿನಲ್ಲಿ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ; ಮೂವರು ಆರೋಪಿಗಳು ಪರಾರಿ
ಸರ್ಕಾರದ ಹಣ ದುರುಪಯೋಗ ಮಾಡಿದ ಪ್ರಕರಣಗಳಲ್ಲಿ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲು ಈ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಿಇಒ ಪೂರ್ಣಿಮಾ ಅವರು ತಿಳಿಸಿದ್ದಾರೆ.
