ಅತ್ಯಾಚಾರದಿಂದ ನೊಂದಿದ್ದ ಅಪ್ರಾಪ್ತೆಗೆ ಶಿಶು ಜನನವಾಗಿದ್ದು, ಹೆತ್ತವರಿಂದಲೇ ನವಜಾತ ಶಿಶುವಿನ ಹತ್ಯೆಯಾಗಿರುವ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಸದರಿ ಕೃತ್ಯದ ಆರೋಪಿಗಳಾದ ರವೂಫ್ ಮತ್ತು ಸಾಜೀದ್ ಎಂಬುವವರನ್ನು 2024ರ ನವೆಂಬರ್ 15ರಂದು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆ ಹಿನ್ನೆಲೆ
ಮಡಿಕೇರಿ ತಾಲೂಕಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆರಿಯಪರಂಬು ಗ್ರಾಮದ ನಿವಾಸಿ ರವೂಫ್ ಎಂಬುವವರ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯವಾಗಿತ್ತು. ಈ ಕುರಿತು 2024ರ ಮಾರ್ಚ್ 18ರಂದು 376(3) 22 ಮತ್ತು 4(3), 6 ಪೋಕ್ಸೊ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತಗೆ 2024ರ ಅಕ್ಟೋಬರ್ 10ರಂದು ಗಂಡು ಮಗು ಜನಿಸಿತ್ತು. ಜನನವಾದ ನವಜಾತ ಶಿಶು ಕಾಣೆಯಾಗಿರುವ ಕುರಿತು ಆರೋಗ್ಯ ಕಾರ್ಯಕರ್ತೆಯಿಂದ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಪಿ, ಪಿಎಸ್‌ಐ ಮಂಜುನಾಥ ಈ ನೇತೃತ್ವದಲ್ಲಿ ನಾಪೋಕ್ಲು ಪೊಲೀಸ್ ಠಾಣೆ ಹಾಗೂ ಠಾಣಾ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಅನುಮಾನ; ವಿದ್ಯಾರ್ಥಿಗಳ ಪ್ರತಿಭಟನೆ
ಕಾನೂನು ಸಂಘರ್ಷಕ್ಕೆ ಒಳಗಾಗಿ ನೊಂದಿದ್ದ ಅಪ್ರಾಪ್ತಯ ತಂದೆ ರವೂಫ್ ಮತ್ತು ತಾಯಿ ಸಾಜೀದ್ ಉದ್ದೇಶ ಪೂರ್ವಕವಾಗಿ ನವಜಾತ ಶಿಶುವನ್ನು ಹತ್ಯೆಮಾಡಿ ಮೃತದೇಹವನ್ನು ಚೆರಿಯಪರಂಬು ನಿವಾಸಿ ಸಲೀಂ ಹ್ಯಾರೀಸ್ ಎಂಬುವವರ ಗದ್ದೆಯ ಬಳಿ ಎಸೆದಿರುವುದು ತನಿಖೆಯಲ್ಲಿ ಕಂಡುಬಂದಿತ್ತು.
ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಶ್ಲಾಘಿಸಿದ್ದಾರೆ.