ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡುವಂತೆ ದಲಿತ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಗೋಲಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಪತ್ರಿಕಾ ಪ್ರಕಟಣೆ ಉದ್ದೇಶಿಸಿ ಮಾತನಾಡಿದ ಅವರು “ಆಂದೋಲಾ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಾಡಬೇಕು ಎಂಬುವುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದು, ಹಲವಾರು ಬಾರಿ ಶಾಸಕರಿಗೆ ಮನವಿ ಮಾಡಿಕೊಳ್ಳಲಾಗಿದೆ. ಆಂದೋಲಾ ಗ್ರಾಮವು ಜಿಲ್ಲಾ ಪಂಚಾಯತ್ ಮತ ಕ್ಷೇತ್ರವಾಗಿದ್ದು, ಸುಮಾರು ಹಳ್ಳಿಗಳಿಗೆ ಕಾಲೇಜು ಇರದೇ ತೊಂದರೆಯಾಗುತ್ತಿದೆ. ವಿಶೇಷವಾಗಿ ವಿಧ್ಯಾರ್ಥಿನಿಯರ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಡಾ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ತುಪ್ಪುರು ಗ್ರಾಮಸ್ಥರ ಧರಣಿ ಸತ್ಯಾಗ್ರಹ
“ಗ್ರಾಮೀಣ ಭಾಗದಿಂದ ತಾಲೂಕು ಕೇಂದ್ರಕ್ಕೆ ವಿಧ್ಯಾರ್ಥಿನಿಯರಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಗುಣಮಟ್ಟ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ಇದನ್ನೂ ವಿದ್ಯಾರ್ಥಿಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಶಾಸಕರು, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರು ಮುತುವರ್ಜಿವಹಿಸಿ ಆಂದೋಲಾ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡುವಂತೆ ತಮ್ಮದೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು” ಎಂದು ಶಾಸಕರಿಗೆ ಮತ್ತು ಸರಕಾರಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.