ಸುಪ್ರೀಂ ಕೋರ್ಟ್ ಆದೇಶವನ್ನೇ ಬುಡಮೇಲು ಮಾಡಿ ಬಿಜೆಪಿ-ಆರ್‌ಎಸ್‌ಎಸ್ ಬಾಬ್ರಿ ಮಸೀದಿಯನ್ನು ಉರುಳಿಸಿದವು. ಈಗ ಬುಲ್ಡೋಜರ್- ಯೋಗಿ, ಮೋದಿ ಮತ್ತು ಬಿಜೆಪಿಯ ಅನಧಿಕೃತ ಚಿಹ್ನೆಯಾಗಿದೆ. ಬಿಜೆಪಿಗೆ ರಾಮಮಂದಿರಕ್ಕಿಂತಲೂ ಬುಲ್ಡೋಜರ್ ಹೆಚ್ಚಿನದ್ದಾಗಿದೆ. ಹೀಗಿರುವಾಗ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪಾಲಿಸುವರೇ?
ನವೆಂಬರ್ 9ರಂದು, ಸುಪ್ರೀಂ ಕೋರ್ಟ್, “ಕಾನೂನಿನ ಅಡಿಯಲ್ಲಿ ಬುಲ್ಡೋಜರ್ ನ್ಯಾಯವು ಸ್ವೀಕಾರಾರ್ಹವಲ್ಲ. ಬುಲ್ಡೋಜರ್‌ಗಳ ಮೂಲಕ ನ್ಯಾಯ ದೊರೆಯುತ್ತದೆ ಎಂಬುದನ್ನು ಯಾವುದೇ ನಾಗರಿಕ ನ್ಯಾಯಶಾಸ್ತ್ರ ವ್ಯವಸ್ಥೆಯಲ್ಲಿ ಅನುಮೋದಿಸುವುದಿಲ್ಲ” ಎಂದು ಹೇಳಿತು. ಅದೇ ದಿನ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಿದ್ದ ಉಪಚುನಾವಣಾ ಪ್ರಚಾರ ಸಭೆಗೆ ಅವರ ಬೆಂಬಲಿಗರು ಬುಲ್ಡೋಜರ್‌ಗಳಲ್ಲಿ ಬಂದಿದ್ದರು.
ನವೆಂಬರ್ 13 ರಂದು, ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ, ”ಬುಲ್ಡೋಜರ್ ಕ್ರಮವು ಕಾನೂನುಬಾಹಿರ ಕ್ರಮವಾಗಿದೆ. ಬುಲ್ದೋಜರ್ ಕ್ರಮವನ್ನು ನ್ಯಾಯಾಲಯವು ಅನುಮೋದಿಸುವುದಿಲ್ಲ” ಎಂದು ಹೇಳಿ ಬುಲ್ಡೋಜರ್ ಕ್ರಮವನ್ನು ನಿಷೇಧಿಸಿತು. ಕುತೂಹಲಕರ ಸಂಗತಿ ಎಂದರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭಾ ಚುನಾವಣೆ ನಡೆಯುತ್ತಿರುವ ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಪರವಾಗಿ ಸ್ಟಾರ್ ಕ್ಯಾಂಪೇನರ್ ಆಗಿ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯ ‘ಬುಲ್ಡೋಜರ್ ಮಾದರಿ’ಯನ್ನು ಆ ರಾಜ್ಯಗಳಲ್ಲಿಯೂ ಜಾರಿಗೆ ತರಲು ಬಿಜೆಪಿಗೆ ಅಧಿಕಾರ ನೀಡುವಂತೆ ಮತದಾರರನ್ನು ಕೇಳುತ್ತಿದ್ದಾರೆ.
‘ಬುಲ್ಡೋಜರ್ ನ್ಯಾಯ’ ಕೇವಲ ಯೋಗಿಯ ಘೋಷಣೆ ಕಾರ್ಡ್ ಮಾತ್ರವಲ್ಲ, ಅದು ಪ್ರಧಾನಿ ಮೋದಿ ಅವರ ರಾಜಕೀಯ ಘೋಷಣೆಯೂ ಹೌದು. ಲೋಕಸಭಾ ಚುನಾವಣೆ ವೇಳೆ ಪ್ರಚಾರಗಳಲ್ಲಿ ಭಾಗಿಯಾಗಿದ್ದ ಮೋದಿ ಅವರು, ”ವಿರೋಧ ಪಕ್ಷಗಳು ಗೆದ್ದರೆ ರಾಮಮಂದಿರದ ಮೇಲೆ ಬುಲ್ಡೋಜರ್ ಓಡಿಸುತ್ತವೆ. ಅವರು ಬುಲ್ಡೋಜರ್‌ಗಳನ್ನು ಓಡಿಸಲು ಯೋಗಿಯಿಂದ ಟ್ಯೂಷನ್ ತೆಗೆದುಕೊಳ್ಳಬೇಕು” ಎಂದು ಇಂಡಿಯಾ ಮೈತ್ರಿಕೂಟವನ್ನು ಲೇವಡಿ ಮಾಡಿದ್ದರು.
ಇತ್ತ, ಸುಪ್ರೀಂ ಕೋರ್ಟ್, ‘ಬುಲ್ಡೋಜರ್ ನ್ಯಾಯ’ವನ್ನು ಕಾನೂನುಬಾಹಿರವೆಂದು ಘೋಷಿಸಿದೆ. ಅತ್ತ, ದೇಶದ ಪ್ರಧಾನಿ ಮೋದಿ, ‘ಬುಲ್ಡೋಜರ್ ನ್ಯಾಯ’ ಜಾರಿಗೆ ತರುವ ಮಾತನಾಡುತ್ತಿದ್ದಾರೆ. ಇಂತಹ ಸಮಯದಲ್ಲಿ, ಸುಪ್ರೀಂ ಕೋರ್ಟ್, ಮೋದಿ ಮತ್ತು ಯೋಗಿ ಅವರನ್ನು ಕಾರ್ಯಾಂಗದ ಪ್ರತಿನಿಧಿಗಳಾಗಿ ಕರೆಸಿಕೊಂಡು, ಅವರು ಯಾವುದಕ್ಕೆ ಬದ್ದರಾಗಿದ್ದಾರೆ?
ಕನಿಷ್ಠ ಪಕ್ಷ, ನ್ಯಾಯಾಲಯವು ಹೇಳಿದಂತೆ ‘ಬುಲ್ಡೋಜರ್ ಕ್ರಮ’ದ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಮತ್ತು ತೀರ್ಪಿನ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡುವಂತೆ ಆ ಇಬ್ಬರನ್ನೂ ಕೇಳಬೇಕು. ಅಲ್ಲದೆ, ಬುಲ್ಡೋಜರ್ ಕ್ರಮಕ್ಕಾಗಿ ಕೇವಲ ಅಧಿಕಾರಿಗಳನ್ನು ಮಾತ್ರ ಹೊಣೆಗಾರರನ್ನಾಗಿ ಮಾಡದೆ, ಆ ಕ್ರಮದ ಹಿಂದಿರುವ ಆಳುವ ಸರ್ಕಾರದ ಮೋದಿ-ಯೋಗಿ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು.
ರಾಜಕೀಯ ವಾಕ್ಚಾತುರ್ಯದ ಹೊರತಾಗಿಯೂ, ಸುಪ್ರೀಂ ಕೋರ್ಟ್‌ನ ನವೆಂಬರ್ 13ರ ತೀರ್ಪಿನ ಮಾರ್ಗಸೂಚಿಗಳು ಬಿಜೆಪಿ ಸರ್ಕಾರಗಳಿಗೆ ನಿಜವಾಗಿಯೂ ದಂಡ ವಿಧಿಸುತ್ತವೆಯೆ? ಬುಲ್ಡೋಜರ್ ಧ್ವಂಸಗಳು ಇನ್ನು ಮುಂದೆ ಕಷ್ಟಕರವಾಗಿಸುತ್ತದೆಯೇ? ಎಂಬ ಪ್ರಶ್ನೆಗಳು ನಮ್ಮ ಮುಂದಿವೆ.
ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಯೋಗಿ ಸರ್ಕಾರವು ”ಕಾನೂನು ಸೂಚಿಸಿದ ಕಾರ್ಯವಿಧಾನದ ಪ್ರಕಾರ ಮಾತ್ರವೇ ಸ್ಥಿರ ಆಸ್ತಿಗಳನ್ನು ಕೆಡವಬಹುದು” ಎಂದು ಅಫಿಡವಿಟ್ ಸಲ್ಲಿಸಿದೆ ಎಂದು ಹೇಳುತ್ತದೆ. ಅಲ್ಲದೆ, ಯೋಗಿ ಸರ್ಕಾರವು ತೀರ್ಪನ್ನು ಸ್ವಾಗತಿಸಿದೆ. “ಸುಪ್ರೀಂ ಕೋರ್ಟ್‌ನ ತೀರ್ಪು ಕೂಡ ಸಂಘಟಿತ ಅಪರಾಧವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಅಪರಾಧಿಗಳಲ್ಲಿ ಕಾನೂನು ಪರಿಣಾಮಗಳ ಭಯವನ್ನು ಹುಟ್ಟುಹಾಕುತ್ತದೆ” ಎಂದು ಹೇಳಿದೆ. ನಿಜವಾಗಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ 2022ರಲ್ಲಿ ಈ ಮಾರ್ಗಸೂಚಿಗಳನ್ನು ಹೊರಡಿಸಿದ್ದರು. ”ಅಕ್ರಮ ಅತಿಕ್ರಮಣಗಳನ್ನು ಮಾತ್ರ ಬುಲ್ಡೋಜರ್‌ಗಳಿಂದ ನೆಲಸಮ ಮಾಡಲಾಗುವುದು, ಬಡವರ ಗುಡಿಸಲುಗಳನ್ನಲ್ಲ” ಎಂದು ಘೋಷಿಸಿದ್ದರು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಯ ಧ್ವಂಸ ಸಂಸ್ಕೃತಿಗೆ ಸುಪ್ರೀಂ ಸುತ್ತಿಗೆ ಏಟು
ಸುಪ್ರೀಂ ಕೋರ್ಟ್ ಸೆಪ್ಟೆಂಬರ್‌ನಲ್ಲಿಯೇ, ‘ಬುಲ್ಡೋಜರ್ ನ್ಯಾಯ’ದ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತ್ತು. ಅನಿಯಂತ್ರಿತ ಧ್ವಂಸಗೊಳಿಸುವಿಕೆಯನ್ನು ನಿಷೇಧಿಸಲು ದೇಶಾದ್ಯಂತ ಮಾರ್ಗಸೂಚಿಗಳನ್ನು ನೀಡುವುದಾಗಿಯೂ ಘೋಷಿಸಿತ್ತು. ಆದರೆ, ಯೋಗಿ ಆದಿತ್ಯನಾಥ್ ಅವರು, ”ಜಾತ್ಯತೀತರು ತಮ್ಮಂತೆ ಬುಲ್ಡೋಜರ್ ನ್ಯಾಯವನ್ನು ನೀಡಲು ಅಸಮರ್ಥರು. ಬುಲ್ಡೋಜರ್‌ನಷ್ಟು ಶಕ್ತಿಯುತವಾದ ‘ದಿಲ್ ಔರ್ ದಿಮಾಗ್’ (ಹೃದಯ ಮತ್ತು ಮನಸ್ಸು) ಹೊಂದಿರುವವರು ಮಾತ್ರ ಇಂತಹ ಕಾರ್ಯವನ್ನು ಮಾಡಬಲ್ಲರು. ಗಲಭೆಕೋರರ ಮುಂದೆ ತಲೆಬಾಗುವವರು ಬುಲ್ಡೋಜರ್‌ನ ಚಕ್ರವನ್ನು ತಿರುಗಿಸಲು ಸಾಧ್ಯವಿಲ್ಲ” ಎಂದು ಜಂಬದ ಮಾತುಗಳನ್ನಾಡುತ್ತಿದ್ದರು.
ಇನ್ನು, ಯೋಗಿಯ ಬುಲ್ಡೋಜರ್ ಕ್ರಮಗಳನ್ನು ಪ್ರಧಾನಿ ಮೋದಿ ಅನುಮೋದಿಸುತ್ತಿದ್ದರು, ಬೆಂಬಲಿಸುತ್ತಿದ್ದರು. ಬುಲ್ಡೋಜರ್ ನ್ಯಾಯದ ಕುರಿತ ಮೋದಿ ಅವರ ಮಾತುಗಳು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲಂಘಿಸುವಂತಿವೆ. ಅಲ್ಲದೆ, ಬಿಜೆಪಿಯ ದಶಕಗಳ ಕಾಲದ ಧ್ವಂಸ ಕೃತ್ಯಗಳನ್ನು ನೆನಪಿಸುತ್ತವೆ. 1992ರಲ್ಲಿ ಕರಸೇವಕರು ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಕೆಡವಿದರು. ಆ ನೆಲದಲ್ಲಿ, ಮಸೀದಿಯ ಅವಶೇಷಗಳ ಮೇಲೆ ಮೋದಿ-ಯೋಗಿ ಜೋಡಿ ರಾಮಮಂದಿರ ನಿರ್ಮಿಸಿದೆ.
1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವುದರ ಉದ್ದೇಶವನ್ನು ಆರ್‌ಎಸ್‌ಎಸ್-ಬಿಜೆಪಿ ನಾಯಕರು ಘೋಷಿಸಿದ್ದ ರಾಜಕೀಯ ಭಾಷಣಗಳ ಹೊರತಾಗಿಯೂ, ಕರಸೇವಕರು ಆ ವರ್ಷದ ಡಿಸೆಂಬರ್ 6ರಂದು ‘ಸಾಂಕೇತಿಕ ಕರಸೇವೆ’ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಅನುಮತಿ ನೀಡುವಾಗ ಸುಪ್ರೀಂ ಕೋರ್ಟ್ ಪಡೆದುಕೊಂಡಿದ್ದು, ಕೇವಲ ಬಿಜೆಪಿಗರ ಔಪಚಾರಿಕ ಹೊಣೆಗಾರಿಕೆಯನ್ನು ಮಾತ್ರ. ಜೊತೆಗೆ, ”ಮಸೀದಿಯ ಬಳಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಕಾರ್ಯಕ್ರಮದಲ್ಲಿ ತನ್ನ ವೀಕ್ಷಕರನ್ನು ನೇಮಿಸಲಾಗುವುದು” ಎಂದೂ ಕೋರ್ಟ್ ಹೇಳಿತ್ತು.
ಆದರೆ, ಅಟಲ್ ಬಿಹಾರಿ ವಾಜಪೇಯಿ ಅವರು, ”ಸುಪ್ರೀಂ ಕೋರ್ಟ್ ತನ್ನ ವೀಕ್ಷಕರನ್ನು ನೇಮಿಸಿದೆ. ಕರಸೇವೆಗೆ ಅನುಮತಿ ನೀಡಿರುವ ಕೋರ್ಟ್‌ನ ಆದೇಶವನ್ನು ಪಾಲಿಸಲಾಗುವುದು. ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ. ಆದರೆ, ನಾವು ಏನನ್ನೂ ನಿರ್ಮಿಸಬಾರದೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಪ್ರಾರ್ಥನೆಯನ್ನು ಏಕಾಂಗಿಯಾಗಿ ಸಲ್ಲಿಸಲು ಸಾಧ್ಯವಿಲ್ಲ. ಗುಂಪಾಗಿ ಮಾಡಬಹುದು. ನಾವು ಪ್ರಾರ್ಥನೆ ಸಲ್ಲಿಸುವಾಗ ಗಂಟೆಗಳ ಕಾಲ ನಿಲ್ಲಲು ಸಾಧ್ಯವಿಲ್ಲ, ನಾವು ಕುಳಿತುಕೊಳ್ಳಬೇಕು. ನೈಸರ್ಗಿಕವಾಗಿ, ನೆಲದ ಮೇಲೆ ಚೂಪಾದ ಕಲ್ಲುಗಳಿದ್ದರೆ ನಾವು ಕುಳಿತುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ, ನೆಲವನ್ನು ನೆಲಸಮ ಮಾಡಬೇಕಾಗುತ್ತದೆ. ನಾವು ಯಾಗವನ್ನೂ ಸಹ ಮಾಡುತ್ತೇವೆ. ಅದಕ್ಕೆ ಕೆಲ ನಿರ್ಮಾಣ ಕೆಲಸವನ್ನೂ ಮಾಡಬೇಕು. ಕನಿಷ್ಠ ಒಂದು ನೈವೇದ್ಯ ವೇದಿಕೆಯನ್ನಾದರೂ ನಿರ್ಮಿಸಲಾಗುವುದು. ಇದೆಲ್ಲವನ್ನೂ ಸುಪ್ರೀಂ ಕೋರ್ಟ್ ನಿಷೇಧಿಸಿದೆ ಎಂದು ನಾನು ಭಾವಿಸುವುದಿಲ್ಲ. ನಾಳೆ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಎಲ್ಲವನ್ನೂ ಕರಸೇವಕರು ನಿರ್ಧರಿಸುತ್ತಾರೆ” ಎಂದಿದ್ದರು.
ಇಲ್ಲಿ, ವಾಜಪೇಯಿ ಅವರ ಭಾಷಣದಲ್ಲಿ ಸುಪ್ರೀಂ ಕೋರ್ಟ್ ಸ್ವತಃ ನಿಗದಿಪಡಿಸಿದ ಷರತ್ತುಗಳಲ್ಲೇ ತಮಗೆ ಬೇಕಾದ ಲಾಭಗಳನ್ನು ಕಂಡುಕೊಂಡರು. ಅದರೊಂದಿಗೆ, ದೇವಾಲಯಕ್ಕೆ ದಾರಿ ಮಾಡಿಕೊಡಲು ಮಸೀದಿಯನ್ನು ಕೆಡವುವ ತಮ್ಮ ಯೋಜನೆಯಲ್ಲಿದ್ದ ನಿಖರವಾದ ವಿಧಾನವನ್ನು ವಿವರಿಸಿದರು. ವಾಸ್ತವವಾಗಿ, ಸುಪ್ರೀಂ ಕೋರ್ಟ್ ಸ್ವತಃ ಸಭೆಗೆ ಅನುಮತಿ ನೀಡಿತು ಮತ್ತು ಷರತ್ತು ವಿಧಿಸಿತ್ತು. ಆ ಅವಕಾಶ ಮತ್ತು ಷರತ್ತುಗಳ ಆಚೆಗೂ ಕರಸೇವಕರು ಮಸೀದಿಯನ್ನು ಧ್ವಂಸಗೊಳಿಸುತ್ತಾರೆ ಎಂದು ನ್ಯಾಯಾಲಯವೂ ಸೇರಿದಂತೆ ಯಾರೂ ಊಹಿಸಿರಲಿಲ್ಲ.
90ರ ದಶಕದ ಬಿಜೆಪಿ-ಆರ್‌ಎಸ್‌ಎಸ್‌ನ ಚಾಳಿಯ ಮುಂದುವರೆದ ಭಾಗವಾಗಿ ಮೋದಿ ಅವರು ಭಾಷಣ ಮಾಡುತ್ತಿದ್ದಾರೆ. ಅವರು, ”ನಾವು ಮಸೀದಿಯನ್ನು ಕೆಡವಿ ಮಂದಿರವನ್ನು ಕಟ್ಟುವುದರಿಂದ ತಪ್ಪಿಸಿಕೊಂಡಿದ್ದೇವೆ. ಆದರೆ, ಯೋಗಿಯ ಬುಲ್ಡೋಜರ್‌ಗಳು ಇಂದು ಮುಸ್ಲಿಮರ ಮನೆಗಳು, ಅಂಗಡಿಗಳು ಹಾಗೂ ಮಸೀದಿಗಳನ್ನು ಕೆಡವುವುದನ್ನು ಮುಂದುವರೆಸಿದೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಮಹಾರಾಷ್ಟ್ರ ಚುನಾವಣೆಯಲ್ಲಿ ಮೋದಿ ಅತ್ಯಾಪ್ತ ಅದಾನಿ ಪಾತ್ರದ್ದೇ ಸದ್ದು ಮತ್ತು ಸುದ್ದಿ
ಸುಪ್ರೀಂ ಕೋರ್ಟ್ ಆದೇಶವನ್ನೇ ಬುಡಮೇಲು ಮಾಡಿ ಬಿಜೆಪಿ-ಆರ್‌ಎಸ್‌ಎಸ್ ಬಾಬ್ರಿ ಮಸೀದಿಯನ್ನು ಉರುಳಿಸಿದವು. ಈಗ, ಸುಪ್ರೀಂ ಕೋರ್ಟ್‌ನ ಇತ್ತೀಚಿನ ಆದೇಶಗಳ ಭವಿಷ್ಯವೇನು? ಈ ವರ್ಷದ ಜುಲೈನಲ್ಲಿ, ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಅಂಗಡಿಗಳ ಮಾಲೀಕರು ತಮ್ಮ ವಿವರಗಳನ್ನು ಪ್ರದರ್ಶಿಸಬೇಕೆಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಆದೇಶ ಹೊರಡಿಸಿದ್ದವು. ಆ ಆದೇಶಗಳನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಿತು. ಈ ಎರಡೂ ಸರ್ಕಾರಗಳ ಆದೇಶಗಳು ಮುಸ್ಲಿಂ ವ್ಯವಹಾರಗಳು, ಮಾಲೀಕರು ಮತ್ತು ಸಿಬ್ಬಂದಿಗಳನ್ನು ಗುರುತಿಸುವುದು ಮತ್ತು ವ್ಯಾಪಾರದಿಂದ ಅವರನ್ನು ಹೊರಗಿಡುವ ಉದ್ದೇಶವನ್ನು ಹೊಂದಿತ್ತು.
ಮತ್ತೊಂದು ನಿದರ್ಶನವೆಂದರೆ, ಪೆಗಾಸಸ್ ಪ್ರಕರಣ – ಇಸ್ರೇಲಿ ಸ್ಪೈವೇರ್ ಪೆಗಾಸಸ್‌ಅನ್ನು ಬಳಸಿಕೊಂಡು ವಿಪಕ್ಷಗಳ ಸರ್ಕಾರಗಳು, ಪತ್ರಕರ್ತರು, ರಾಜಕಾರಣಿಗಳು, ಕಾರ್ಯಕರ್ತರು ಮತ್ತು ಅವರ ಕುಟುಂಬ ಸದಸ್ಯರ ಫೋನ್‌ಗಳನ್ನು ಕದ್ದಾಲಿಸುವ, ಡೇಟಾವನ್ನು ಕದಿಯುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು. ಆ ಆರೋಪಗಳ ತನಿಖೆಗೆ ಸುಪ್ರೀಂ ಕೋರ್ಟ್ ಸಮಿತಿಯನ್ನು ನೇಮಿಸಿತು. ಆದರೆ, ಸರ್ಕಾರವು ತನಿಖೆಗೆ ಸಹಕರಿಸಲಿಲ್ಲವೆಂದು ಸಮಿತಿಯು ನ್ಯಾಯಾಲಯಕ್ಕೆ ತಿಳಿಸಿದೆ. ಗಮನಾರ್ಹವೆಂದರೆ, ಸರ್ವೋಚ್ಚ ನ್ಯಾಯಾಲಯವು ಸರ್ಕಾರದಿಂದ ಉತ್ತರ ಕೇಳಲಿಲ್ಲ. ಕಾನೂನು ಪ್ರಕ್ರಿಯೆಯಿಲ್ಲದೆ ಭಾರತೀಯ ನಾಗರಿಕರ ಮೇಲೆ ಕಣ್ಗಾವಲು ನಡೆಸಲು ಪೆಗಾಸಸ್ ಅಥವಾ ಇನ್ನಾವುದೇ ಸಾಫ್ಟ್‌ವೇರ್ ಅನ್ನು ಬಳಸಲಾಗಿದೆಯೇ? ಎಂಬುದಕ್ಕೆ ಹೌದು ಅಥವಾ ಇಲ್ಲ ಎಂಬ ಉತ್ತರವನ್ನೂ ಪಡೆಯಲೂ ಸಾಧ್ಯವಾಗಲಿಲ್ಲ.
ಈಗ, ಬುಲ್ಡೋಜರ್- ಯೋಗಿ, ಮೋದಿ ಮತ್ತು ಬಿಜೆಪಿಯ ಅನಧಿಕೃತ ಚಿಹ್ನೆಯಾಗಿದೆ. ಬಿಜೆಪಿಗೆ ರಾಮಮಂದಿರಕ್ಕಿಂತಲೂ ಬುಲ್ಡೋಜರ್ ಹೆಚ್ಚಿನದ್ದಾಗಿದೆ. ಅದರ ಹಿಂದು ರಾಷ್ಟ್ರ ಪರಿಕಲ್ಪನೆಯು ಕೋಮುವಾದ ಮತ್ತು ಸರ್ವಾಧಿಕಾರಿ ಆಡಳಿತವನ್ನು ಒಳಗೊಂಡಿದೆ. ಸಾಂವಿಧಾನಿಕ ವ್ಯವಸ್ಥೆಯನ್ನು ವೇಗವಾಗಿ ಅತಿಕ್ರಮಿಸುತ್ತಿದೆ. ಇಂತಹ ಸಮಯದಲ್ಲಿ, ಪ್ರಾಮಾಣಿಕ ನ್ಯಾಯಾಂಗವು ಕಾಲ್ಪನಿಕ ಕಥೆಯನ್ನು ಶಾಶ್ವತಗೊಳಿಸಬಾರದು. ಬದಲಾಗಿ, ಸಾಂವಿಧಾನಿಕ ಪ್ರಜಾಪ್ರಭುತ್ವದ ಮೇಲಿನ ಬಿಜೆಪಿಯ ಅತಿಕ್ರಮಣಗಳು ಶಾಶ್ವತ ರಚನೆಗಳಾಗಿ ಬೇರುಬಿಡುವ ಮೊದಲೇ ಅದನ್ನು ಕಿತ್ತೊಗೆಯುವ ಧೈರ್ಯ ಮತ್ತು ಇಚ್ಛಾಶಕ್ತಿಯನ್ನು ತೋರಿಸಬೇಕು.
ಆ ರೋಗಿ ಸರಕಾರವನಾನ ಕಿತ್ತೋಗೆದು ರಾಷ್ಟ್ರಪತಿ ಆಳ್ವಿಕೆ ಮಾಡಬೇಕು ನ್ಯಾಯಾಲಯ, ಫೇಕೂಗೆ ಅಷ್ಟು ನರ ಇಲ್ಲಾ