ಔರಾದ್ ಪಟ್ಟಣದಲ್ಲಿ ದೇಸಿ ಹುಲ್ಲುಕಡ್ಡಿ ಪೊರಕೆ ತಯಾರಿಸಿ ಹೊಟ್ಟೆ ತುಂಬಿಸಿಕೊಳ್ಳುವ ಸುಮಾರು 50ಕ್ಕೂ ಅಧಿಕ ಹೆಳವ ಸಮುದಾಯದ ಕುಟುಂಬಗಳಿವೆ. ಆದರೆ, ಜಾಗತೀಕರಣದ ಭರಾಟೆಯಲ್ಲಿ ಹುಲ್ಲುಕಡ್ಡಿ ಪೊರಕೆ ಮೂಲೆ ಸೇರಿವೆ. ಇದೀಗ ಹೇಳವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಪಟ್ಟಣದ ಗಾಂಧಿ ಚೌಕ್ ಸಮೀಪದ ಬಡಾವಣೆಯಲ್ಲಿ ಹೇಳವ ಸಮುದಾಯದ ಸುಮಾರು 50ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಮೂರ್ನಾಲ್ಕು ದಶಕದಿಂದ ಮಹಿಳೆಯರು ರಸ್ತೆ, ಮನೆ ಸ್ವಚ್ಚ ಮಾಡುವ ಪೊರಕೆ ತಯಾರಿಸುವ ಕುಲಕಸುಬು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಪುರುಷರು ಮೀನು ಹಿಡಿಯುವ ಕಾಯಕ ನಡೆಸಿ ಉಪ ಜೀವನ ನಡೆಸುತ್ತಿದ್ದಾರೆ.

ಇಲ್ಲಿನ ಕೆಲ ಕುಟುಂಬಗಳಿಗೆ ಪೊರಕೆಯೇ ಜೀವನಾಧಾರ. ಆದರೆ, ಆಧುನಿಕತೆಯ ಬಿರುಗಾಳಿಯ ಸುಳಿಗೆ ಈ ಕುಟುಂಬಗಳೂ ಸಿಲುಕಿ ನಲುಗುತ್ತಿದ್ದು, ಸರ್ಕಾರದ ಸಹಾಯಧನದಿಂದಲೂ ವಂಚಿತರಾಗಿ ಬದುಕು ದೂಡುತ್ತಿದ್ದೇವೆ. ನಮ್ಮ ಸಂಕಷ್ಟ ಯಾರೂ ಕೇಳೋರಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಪೊರಕೆ ತಯಾರಿಕೆಗೆ ಬೇಕಾದ ಈಚಲ ಮರದ ಗರಿಗಳು ತಾಲೂಕಿನ ಸಿಗದ ಕಾರಣ ಕಲಬುರಗಿ ಜಿಲ್ಲೆಯ ಚಿಂಚೋಳಿ ಹಾಗೂ ನೆರೆಯ ತೆಲಂಗಾಣದ ತಾಂಡೂರ ಸೇರಿದಂತೆ ವಿವಿಧೆಡೆ ತೆರಳಿ ದುಬಾರಿ ಬೆಲೆ ನೀಡಿ ಖರೀದಿಸುತ್ತೇವೆ. ಒಂದೆರಡು ತಿಂಗಳು ಅಲ್ಲೇ ನೆಲೆಸಿ ತರುತ್ತೇವೆ ಎಂದು ಹೇಳುತ್ತಾರೆ ಶೋಭಾ

ಸಿಂದಿ ಮರದ ಗರಿಗಳನ್ನು ಮನೆಯಂಗಳದಲ್ಲಿ ಒಣಗಿಸಿ, ಹದಗೊಳಿಸಿ ಕೈಯಿಂದಲೇ ಪೊರಕೆ ನೇಯುತ್ತಾರೆ. ದಿನಕ್ಕೆ 50 ರಿಂದ 60 ಪೊರಕೆ ಸಿದ್ದಪಡಿಸುತ್ತೇವೆ. ಈ ಹಿಂದೆ ಪೊರಕೆಗಳಿಗೆ ಬಹಳ ಬೇಡಿಕೆ ಇತ್ತು. ಈಗ ಮಾರುಕಟ್ಟೆಯಲ್ಲಿ ಹುಲ್ಲುಕಡ್ಡಿ ಪೊರಕೆಗೆ ಬೇಡಿಕೆಯಿಲ್ಲ. ಮಾರಾಟಕ್ಕೆ ಸೂಕ್ತ ಮಾರುಕಟ್ಟೆಗಳಿಲ್ಲದ ಕಾರಣ ವಾರದ ಸಂತೆ ಅಥವಾ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಮಾರಾಟ ಮಾಡುತ್ತೇವೆ. ಒಂದು ಪೊರಕೆ ಬೆಲೆ 20 ರಿಂದ 30 ರೂ. ಇದೆ. ಅದೇ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಪೊರಕೆ ತಯಾರಿಸುವ ಮಹಿಳೆಯರು.
ʼಸುಮಾರು 3-4 ದಶಕಗಳಿಂದ ಇದೇ ಕಾಯಕ ಮಾಡಿಕೊಂಡು ಬರುತ್ತಿದ್ದೇವೆ. ಉಪ ಜೀವನಕ್ಕೆ ಇದೇ ಆಧಾರವಾಗಿದೆ. ಆದರೆ, ಪೊರಕೆ ಬೇಡಿಕೆ ಕುಗ್ಗಿದ ಕಾರಣ ಲಾಭ ಆಗುತ್ತಿಲ್ಲ. ಸರ್ಕಾರದ ಯಾವುದೇ ಯೋಜನೆಗಳು ನಮಗೆ ತಲುಪುತ್ತಿಲ್ಲ ಎಂದು ಶಿವಮ್ಮ ಬೇಸರ ವ್ಯಕ್ತಪಡಿಸಿದರು.
ಕಮಲನಗರ ಪಟ್ಟಣದ ರೈಲ್ವೆ ಸೇತುವೆ ಪಕ್ಕದಲ್ಲಿ ವಾಸಿಸುವ ಪೊರಕೆ ತಯಾರಿಸುವ ಐದಾರು ಕುಟುಂಬಗಳು ವಾಸವಾಗಿವೆ. ಕಳೆದ ಹಲವು ವರ್ಷಗಳಿಂದ ಟಿನ್‌ಶೆಡ್ ನಲ್ಲಿ ವಾಸಿಸುತ್ತಾರೆ. ಮೂಲ ಸೌಕರ್ಯವೂ ಇಲ್ಲ. ಬದುಕಿಗೆ ಆಸರೆಯಾದ ಪೊರಕೆ ಕುಲಕುಸುಬು ನೆಲಕಚ್ಚಿದಕ್ಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಸರ್ಕಾರ ಕನಿಷ್ಠ ಸೂರು ಕಲ್ಪಿಸಬೇಕು ಎಂದು ಹೆಳವ ಸಮಾಜದ ಸಂತೋಷ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಅನರ್ಹರ ಬಿಪಿಎಲ್ ಕಾರ್ಡ್‌ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ʼಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಹೆಳವ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ, ಸರ್ಕಾರಗಳು ಗಮನ ಹರಿಸುತ್ತಿಲ್ಲ. ಪೊರಕೆ ತಯಾರಿಕೆ, ಮೀನು ಹಿಡಿಯುವ ಕಾಯಕ ಸೇರಿದಂತೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಉನ್ನತ ವ್ಯಾಸಂಗ ಮಾಡಿದರೂ ನಮ್ಮಂಥ ಯುವಕರು ಉದ್ಯೋಗ ಇಲ್ಲದೆ ಪರದಾಡುತ್ತಿದ್ದೇವೆ. ಸರ್ಕಾರದ ಸಹಾಯಧನ ಕೂಡ ಸಿಗುತ್ತಿಲ್ಲʼ ಎಂದು ಹೆಳವ ಸಮುದಾಯದ ಈಶ್ವರ ಔರಾದ್ ಹೇಳುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.