ಮಣಿಪುರದಲ್ಲಿ ನದಿಗಳೇನೋ ಕೂಡುತ್ತಿವೆ. ಮೈತೇಯಿ ಮತ್ತು ಕುಕಿಗಳು ಕೂಡುತ್ತಿಲ್ಲ. ಈ ಸಂಘರ್ಷಕ್ಕೆ ದೀರ್ಘ ಇತಿಹಾಸವಿದೆ; ಆದರೆ ವರ್ತಮಾನವೇ ಭಯಾನಕ. ಆ ವರ್ತಮಾನವು ದೆಹಲಿಯಲ್ಲಿ ಮತ್ತು ಇಂಫಾಲದಲ್ಲಿ ಆಳುತ್ತಿರುವವರ ಹಿತಾಸಕ್ತಿಯನ್ನು ಅವಲಂಬಿಸಿವೆ. ಅದು ಬಿಜೆಪಿ, ಅಮಿತ್ ಶಾ, ಆರೆಸ್ಸೆಸ್ ಮತ್ತು ಮೋದಿಯವರತ್ತ ಬೆರಳು ಮಾಡಿ ತೋರಿಸುತ್ತವೆ.
ನಮ್ಮ ಸೋದರಿಯೊಬ್ಬಳು ತೀವ್ರ ಮಾನವೀಯ, ಪ್ರಜಾತಾಂತ್ರಿಕ ಬಿಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದಾಳೆ. ಭಾರತದ ಈಶಾನ್ಯ ಭಾಗದಲ್ಲಿರುವ 7 ಸೋದರಿಯರ(ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾಗಳನ್ನು ಸಪ್ತ ಸೋದರಿಯರು ಎನ್ನಲಾಗುತ್ತದೆ) ಪೈಕಿ ಒಬ್ಬಳಾದ ಮಣಿಪುರವೇ ಆ ಸೋದರಿ. ಆಕೆಯ ಮಕ್ಕಳು ಪರಸ್ಪರ ಕೊಂದುಕೊಳ್ಳುತ್ತಿದ್ದಾರೆ. ಕಣ್ಮರೆಯಾದ ಆಕೆಯ ಮಕ್ಕಳಲ್ಲಿ ಕೆಲವರ ಶವಗಳು ನಂತರ ಇನ್ನೆಲ್ಲೋ ಪತ್ತೆಯಾಗುತ್ತವೆ. ನಾಡ ಸುತ್ತ ಗಡಿಗಳಿರುವುದನ್ನು ನಾವು ಬಲ್ಲೆವು. ಆದರೆ ನಾಡಿನ ಒಳಗೇ ಗಡಿಗೆರೆಗಳನ್ನು ಕೊರೆಯಲಾಗಿದೆ. ಮೈತೇಯಿ, ಕುಕಿ ಮತ್ತು ನಾಗಾಗಳ ಪ್ರದೇಶಗಳು ಬೇರೆ ಬೇರೆ ಎಂಬ ಅಘೋಷಿತವಲ್ಲ, ಘೋಷಿತ ಗೋಡೆಗಳು ಮನಸ್ಸಿನಲ್ಲಿ ಗಾಢವಾಗಿ ಬೇರೂರಿಬಿಟ್ಟಿವೆ. ವರ್ಷದ ಕೆಳಗೆ ಒಬ್ಬ ಮಗಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡಲಾಯಿತು. ಅಕ್ಷರಶಃ ಅಮಾನವೀಯತೆಯನ್ನೇ ಬೀದಿಯಲ್ಲಿ ನಡೆಸಲಾಯಿತು ಎಂಬುದು ಎಷ್ಟೋ ತಿಂಗಳ ನಂತರ ಗೊತ್ತಾಯಿತು. ಸೋದರರು ಕೇಕೆ ಹಾಕಿ, ಸಂಭ್ರಮಿಸುತ್ತಿದ್ದ ವಿಡಿಯೋವನ್ನು ಇಡೀ ದೇಶ ನೋಡಿ ಸ್ತಂಭೀಭೂತವಾಗಿತ್ತು.
ಆದರೆ, ಆಳುತ್ತಿರುವ ಅಧಿಕಾರಸ್ಥರಿಗೆ ಅದೇ ಮಟ್ಟದ ಗಾಬರಿ ಉಂಟಾಗಿದೆಯೇ ಇಲ್ಲವೇ ಎಂಬ ಪ್ರಶ್ನೆ ಮತ್ತೆ ಮತ್ತೆ ಏಳುತ್ತಿದೆ. ಏಕೆಂದರೆ, ಅವೆಲ್ಲಾ ಘಟನೆಗಳ ನಂತರವೂ ಈ ದೇಶದ ಬೇರೆ ಬೇರೆ ಭಾಗಗಳಲ್ಲಿ ಚುನಾವಣೆಗಳು ನಡೆಯುತ್ತಿವೆ; ಗೆದ್ದವರು ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ; ಔತಣಕೂಟಗಳು ಏರ್ಪಡುತ್ತಿವೆ; ಶಾಸಕರು ಪಕ್ಷ ಬದಲಾಯಿಸುತ್ತಾರೆ; ವಾಷಿಂಗ್ ಮಷೀನಿನಲ್ಲಿ ಹಾದು ಹೋಗಿ ಕಡುಭ್ರಷ್ಟರು ಪ್ರಾಮಾಣಿಕತೆಯ ಶುದ್ಧ ಚರ್ಮ ಪಡೆದುಕೊಳ್ಳುತ್ತಿದ್ದಾರೆ; ವಿಶ್ವಗುರುಗಳು ವಿಶ್ವಾದ್ಯಂತ ಪರ್ಯಟನೆ ಮಾಡಿ ಬೇರೆ ಬೇರೆ ದೇಶಗಳ ನಾಗರಿಕ ಗೌರವ ಸ್ವೀಕರಿಸುತ್ತಿದ್ದಾರೆ. ಆದರೆ, ಮಣಿಪುರದಲ್ಲಿ ಗೆರೆಗಳು ಅಳಿಸಿಲ್ಲ, ಹಿಂಸೆ ನಿಂತಿಲ್ಲ, ಕೊಲೆಗಳೂ ನಿಂತಿಲ್ಲ.
ಮಣಿಪುರದ ಜಿರಿ ಮತ್ತು ಬರಕ್ ನದಿಗಳು ಕೂಡುವಲ್ಲಿ ಶವಗಳು ಸಿಕ್ಕಿವೆ. ಕೇರಳದ ಕತೆಯೊಂದರಲ್ಲಿ ಒಂದು ಮತ್ತು ಒಂದನ್ನು ಸೇರಿದರೆ ದೊಡ್ಡ ಒಂದು ಆಗುತ್ತದೆ ಎಂದು ಹೇಳಲಾಗುತ್ತದೆಯಂತೆ. ಏಕೆಂದರೆ ಎರಡು ನದಿಗಳು ಸೇರಿದಾಗ ದೊಡ್ಡ ನದಿಯಾಗುವುದನ್ನಷ್ಟೇ ಅವರು ನೋಡಿರುತ್ತಾರೆ. ಬುಡಕಟ್ಟೊಂದರ ವಿಶಿಷ್ಟ ಚಿಂತನೆಯಂತೆ ತೋರುವ ಈ ಕತೆಯು ಒಂದನ್ನು ವಿಭಜಿಸಿ ಎರಡಾಗಿಸುವವರಿಗೆ ವಿವೇಕ ಕಲಿಸುತ್ತದೆ. ಆದರೆ, ಮಣಿಪುರದಲ್ಲಿ ನದಿಗಳೇನೋ ಕೂಡುತ್ತಿವೆ. ಮೈತೇಯಿ ಮತ್ತು ಕುಕಿಗಳು ಕೂಡುತ್ತಿಲ್ಲ. ಈ ಸಂಘರ್ಷಕ್ಕೆ ದೀರ್ಘ ಇತಿಹಾಸವಿದೆ; ಆದರೆ ವರ್ತಮಾನವೇ ಭಯಾನಕ. ಆ ವರ್ತಮಾನವು ದೆಹಲಿಯಲ್ಲಿ ಮತ್ತು ಇಂಫಾಲದಲ್ಲಿ ಆಳುತ್ತಿರುವವರ ಹಿತಾಸಕ್ತಿಯ ಕಾರಣಕ್ಕೆ ಇಷ್ಟು ಭೀಕರವಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಂತಿಮವಾಗಿ ಆ ಪುರಾವೆಗಳು ಅದು ಬಿಜೆಪಿ, ಅಮಿತ್ ಶಾ, ಆರೆಸ್ಸೆಸ್ ಮತ್ತು ಮೋದಿಯವರತ್ತ ಬೆರಳು ಮಾಡಿ ತೋರಿಸುತ್ತವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!
ನಮ್ಮ ಗಡಿಗಳು ಮತ್ತು ಗಡಿಗಳಲ್ಲಿ ವಾಸಿಸುತ್ತಿರುವ ಜನಸಮುದಾಯಗಳು ನೆರೆ ದೇಶದ ಜೊತೆಗಿನ ಸಂಘರ್ಷಕ್ಕೆ ಆಟದ ದಾಳಗಳಾಗಿ ಬಳಕೆಯಾಗಬಾರದು. ಅದು ಪಾಕಿಸ್ತಾನವೇ ಇರಲಿ, ಬರ್ಮಾ, ಬಾಂಗ್ಲಾದೇಶಗಳೇ ಇರಲಿ. ಮೈತೇಯಿಗಳನ್ನು ಹಿಂದೂಗಳೆಂದು, ಕುಕಿಗಳನ್ನು ಕ್ರಿಶ್ಚಿಯನ್ನರೆಂದು ನೋಡಿ, ಬೌದ್ಧ ಬರ್ಮಾಗಳ ಜೊತೆಗೆ ಗಂಟುಗಳಲ್ಲಿ ಸಿಕ್ಕಿಬಿದ್ದರೆ ಏನಾಗಬಹುದೋ ಅದೇ ಆಗುತ್ತಿದೆ. ಬಿಜೆಪಿಯ ಸ್ಥಳೀಯ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಗಳು ಇಡೀ ಸಂಘರ್ಷವನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಇದುವರೆಗೆ ಹಲವಾರು ಜನ ಆರೋಪಿಸಿದ್ದಾರೆ.
ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೈಜೀರಿಯಾದಲ್ಲಿದ್ದಾರೆ. ವಿಪರ್ಯಾಸವೆಂದರೆ, ಇದೇ ನೈಜೀರಿಯಾದ ಈಶಾನ್ಯದಲ್ಲೂ ಸಶಸ್ತ್ರ ಸಂಘರ್ಷವಿದೆ. 525 ಭಾಷೆಗಳನ್ನು ಮಾತಾಡುವ ಸುಮಾರು 300ಕ್ಕೂ ಹೆಚ್ಚು ಭಿನ್ನ ಬುಡಕಟ್ಟುಗಳು ವಾಸಿಸುವ ದೇಶವದು. ಬೋಕೋ ಹರಮ್ ಜೊತೆಗಿನ ಸಂಘರ್ಷ ಆ ದೇಶವನ್ನು ಹಿಂಡಿ ಹಿಪ್ಪೆ ಮಾಡಿದೆ. ಚರಿತ್ರೆಯುದ್ದಕ್ಕೂ ಹಿಂಸಾತ್ಮಕ ಸಂಘರ್ಷವನ್ನೇ ಮಾಡಿಕೊಂಡು ಬಂದ ನೈಜೀರಿಯನ್ನರು ಇದುವರೆಗೆ ಮೂರು ವಿವಿಧ ಬಗೆಯ ಗಣರಾಜ್ಯಗಳನ್ನೂ ದಾಟಿ ಬಂದಿದ್ದಾರೆ. ಸುಮಾರು 23 ಕೋಟಿ ಜನಸಂಖ್ಯೆಯುಳ್ಳ ದೊಡ್ಡ ದೇಶವದು. ಅಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯಾವ ಸಂದೇಶ ಕೊಡಬಹುದು? ಮಹಾತ್ಮಾ ಗಾಂಧಿಯ ಭಾರತವು ಅಲ್ಲಿ ಶಾಂತಿಯ ಸಂದೇಶ ಕೊಡಲು ಇಂದು ಶಕ್ತವಾಗಿದೆಯೇ? ಬಾಬಾಸಾಹೇಬ್ ಅಂಬೇಡ್ಕರರ ಭಾರತವು ಸರ್ವ ಜನಾಂಗಗಳಿಗೂ ನ್ಯಾಯದ ಸಂದೇಶ ಕೊಡಲು ಇಂದು ಶಕ್ತವಾಗಿದೆಯೇ? ಜವಹರಲಾಲ್ ನೆಹರೂರ ಆಳ್ವಿಕೆಯನ್ನು ಕಂಡ ಭಾರತವು ಪ್ರಗತಿಶೀಲ ಐಕ್ಯತೆಯ ಸಂದೇಶ ಕೊಡಲು ಇಂದು ಶಕ್ತವಾಗಿದೆಯೇ ಎಂಬ ಪ್ರಶ್ನೆ ಮೋದಿಯವರನ್ನು ಕಾಡಲಿದೆಯೇ, ಇಲ್ಲವೇ?
ನೈಜೀರಿಯದ ಜನಸಂಖ್ಯೆ 23 ಕೋಟಿ. ಮಣಿಪುರದ ಜನಸಂಖ್ಯೆ ಸುಮಾರು 30 ಲಕ್ಷ. 30 ಲಕ್ಷ ಎನ್ನುವುದು ಸಣ್ಣ ಸಂಖ್ಯೆಯಲ್ಲ. ಜಗತ್ತಿನ ಸುಮಾರು 60 ದೇಶಗಳಲ್ಲಿ 30 ಲಕ್ಷ ಜನರಿಲ್ಲ. ಅಷ್ಟು ದೊಡ್ಡ ಸಂಖ್ಯೆಯ ಈ ಪುಟ್ಟ ಪ್ರದೇಶದಲ್ಲಿ ಶಾಂತಿಯನ್ನು, ಸೋದರತೆಯನ್ನು ಸಾಧಿಸಲು ಭಾರತದಂತಹ ಜಗತ್ತಿನ ಅತ್ಯಂತ ವಿಶಿಷ್ಟ ದೇಶಕ್ಕೆ ಸಾಧ್ಯವಿಲ್ಲವೇ? 77 ವರ್ಷಗಳ ಹಿಂದೆ ತನ್ನದೇ ಸ್ವಂತ, ಸಾರ್ವಭೌಮ ದೇಶ ಗಳಿಸಿಕೊಂಡಾಗ ಈ ದೇಶದಲ್ಲೂ ಅಪಾರ ವೈವಿಧ್ಯತೆ, ಅಸಮಾನತೆಗಳು ಇದ್ದವು.
ಇಲ್ಲಿಯವರೆಗೆ ಈ ದೇಶ ಉಳಿದುಕೊಂಡು ಬರಲು ಮೂರು ಸಂಗತಿಗಳು ಕಾರಣವಾಗಿವೆ. ವೀರೋಚಿತವಾದ ಸ್ವಾತಂತ್ರ್ಯ ಸಂಗ್ರಾಮವೆಂಬ ಐಕ್ಯ ಹೋರಾಟ; ಸರ್ವರಿಗೂ ಸಮತೆಯನ್ನು ಸಾರುವ ಸಂವಿಧಾನ ಮತ್ತು ಅದರಡಿಯಲ್ಲಿ ಹೊಸ ಭಾರತವನ್ನು ಆಳಿದ ಆರಂಭದ ನಾಯಕತ್ವ. ನೆಹರೂ ಅವರು ಕಾಶ್ಮೀರದ ವಿಚಾರವನ್ನು ಅಷ್ಟು ಸರಿಯಾಗಿ ನಿಭಾಯಿಸಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದಂತೆ ಇಷ್ಟು ವಿಸ್ಮಯಕಾರಿ ವೈವಿಧ್ಯತೆಯ ಭಾರತವನ್ನು ಅವರು ಉಳಿಸಿದ್ದು ಬಹುದೊಡ್ಡ ಕೊಡುಗೆ. ಆದರೆ, ಇಂದೇನಾಗುತ್ತಿದೆ? ಏನಾಗುತ್ತಿದೆ ಎಂಬುದಕ್ಕೆ ಒಂದು ನಿದರ್ಶನ ಮಣಿಪುರ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಣಿಪುರದ ನಾಗಾ, ಕುಕಿಗಳೂ ಬುಡಕಟ್ಟು ಜನರು ಎಂದು ಪ್ರಧಾನಿಗೆ ನೆನಪಿಸಬೇಕಿದೆ
‘ಏಕ್ ಹೈ ತೊ ಸೇಫ್ ಹೈ’ (ಒಂದಾಗಿದ್ದರೆ ನಾವು ಸುರಕ್ಷಿತ) ಎಂಬ ಘೋಷಣೆಯೆಷ್ಟು ವಿಪರ್ಯಾಸಕರ ಎಂಬುದನ್ನು ನೋಡಿ. ಅದು ಇಡೀ ದೇಶದ ಜನರಿಗೆ ಒಂದಾಗಲು ಕರೆ ಕೊಡುತ್ತಿರುವುದಲ್ಲ. ಈ ದೇಶದಲ್ಲಿ 20 ಕೋಟಿಯಷ್ಟಿರುವ ಅಲ್ಪಸಂಖ್ಯಾತರ ವಿರುದ್ಧದ ರಣಕಹಳೆ ಅದು. ಅಂದರೆ ಒಂದಾಗುವುದಕ್ಕಲ್ಲ; ಒಡೆದಾಳುವುದಕ್ಕೆ ಕೊಡುತ್ತಿರುವ ಕರೆಯದು. ಒನ್ ನೇಷನ್ ಒನ್ ಎಲೆಕ್ಷನ್ – ಒಂದು ದೇಶ, ಒಂದು ಚುನಾವಣೆ ಎಂಬ ಘೋಷಣೆಯಂತೆಯೇ ಇದೂ ಸಹಾ. ತನ್ನ ರಾಜಕೀಯ ಹಿತಾಸಕ್ತಿಗಾಗಿ ಒಂದೇ ಬಾರಿಗೆ ನಡೆಯಬೇಕಿದ್ದ ಹರಿಯಾಣ, ಕಾಶ್ಮೀರ ಹಾಗೂ ಜಾರ್ಖಂಡ್, ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳನ್ನೇ ಒಟ್ಟಿಗೆ ನಡೆಸದ ಸರ್ಕಾರವೊಂದು, ದೇಶದ ಸಮಸ್ತ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಹುನ್ನಾರಕ್ಕೆ ಕೈ ಹಾಕಿದೆ. ಈಗ ಒಂದಾಗಿದ್ದರೆ ನಾವು ಸುರಕ್ಷಿತ ಎಂಬ ಒಡೆಯುವ ಕೂಗನ್ನು ಹಾಕಿದೆ. ಈಶಾನ್ಯದ ಸಪ್ತ ಸೋದರಿಯರಲ್ಲಿ ಒಬ್ಬಳ ದೇಹವನ್ನೇ ಸೀಳುತ್ತಿರುವ ಕ್ರೌರ್ಯದಲ್ಲಿ ಶಾಮೀಲಾಗಿದೆಯೆಂಬ ಆರೋಪ ಒಂದು ವೇಳೆ ಸುಳ್ಳೆಂದುಕೊಂಡರೂ, ಅದನ್ನು ಶಮನ ಮಾಡುವಲ್ಲಂತೂ ವಿಫಲವಾಗಿದೆ.
ಹಾಗಾಗಿಯೇ ಈ ಪ್ರಶ್ನೆ: ಭಾರತವನ್ನು ದೇಶವಾಗಿ ಉಳಿಸಿಕೊಳ್ಳಲು ಶಾಂತಿ, ಸೋದರತೆ ಅಗತ್ಯವೆಂದು ಪ್ರಧಾನಿ ಅರಿತಿರುವರೇ?
