ಬಡಜನರು, ಅಸಂಘಟಿತ ವಲಯದ ಕಾರ್ಮಿಕರು, ಬಡ ವಿದ್ಯಾರ್ಥಿಗಳಿಗೆ ಅಲ್ಪ ಮೊತ್ತದಲ್ಲಿ ಪೌಷ್ಠಿಕಾಂಶವುಳ್ಳ ಆಹಾರ ಒದಗಿಸುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್. ಆದರೆ ಕಳೆದ ಏಳೆಂಟು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಕ್ಯಾಂಟೀನ್ ಮುಂಭಾಗ ಕಸಕಡ್ಡಿ, ಮಣ್ಣು ತುಂಬಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇಂದಿರಾ ಕ್ಯಾಂಟೀನ್ ಆರಂಭಿಸಿಲು ಮೀನಾಮೇಷ ಎಣಿಸುತ್ತಿರುವುದು ದುರಂತ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣ ಪಂಚಾಯಿತಿಯಲ್ಲಿ, ಇಂದಿರಾ ಕ್ಯಾಂಟೀನ್ ಆರಂಭವಾಗದೆ ಕಳೆದ ಏಳೆಂಟು ತಿಂಗಳುಗಳಿಂದ ಕಾಮಗಾರಿ ನಡೆಯುತ್ತಿದೆ. ಕೆಲವೇ ರೂಪಾಯಿಗಳಲ್ಲಿ ಹಸಿವು ತಣಿಸಬೇಕಿದ್ದ ‘ಅನ್ನದ ಬಟ್ಟಲು’ ಬಾಗಿಲು ತೆರೆಯದೇ ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಇಂದಿರಾ ಕ್ಯಾಂಟೀನ್ ನರೇಗಲ್ ಪಟ್ಟಣದ ಅಬ್ಬಿಗೇರಿಗೆ ಹೋಗುವ ದಾರಿಯಲ್ಲಿದ್ದು, ಬಸ್ ನಿಲ್ದಾಣಕ್ಕೆ ಹತ್ತಿರವಿದೆ. ಜನದಟ್ಟಣೆಯಿರುವ ಪ್ರದೇಶವಾಗಿದೆ. ಇದೇ ರಸ್ತೆಯಲ್ಲಿ ಎರಡಕ್ಕಿಂತ ಹೆಚ್ಚು ಶಾಲೆ ಕಾಲೇಜುಗಳಿದ್ದು, ಹೆಚ್ಚು ವಿದ್ಯಾರ್ಥಿಗಳು ಇದೇ ಇಂದಿರಾ ಕ್ಯಾಂಟೀನ್ ಮುಂದೆಯೇ ಹಾದು ಹೋಗುತ್ತಾರೆ. ಸುತ್ತಮುತ್ತಲ ಹಳ್ಳಿಗಗಳಿಂದ ಸಾಕಷ್ಟು ಜನರು ನರೇಗಲ್ ಪಟ್ಟಣಕ್ಕೆ ಬರುತ್ತಾರೆ. ಇವರೆಲ್ಲರೂ ಇಂದಿರಾ ಕ್ಯಾಂಟೀನ್ ಯಾವಾಗ ಆರಂಭವಾಗುದೋ ಎಂಬ ನಿರೀಕ್ಷೆಯಲ್ಲಿದ್ದಾರೆ.
“ಇಂದಿರಾ ಕ್ಯಾಂಟೀನ್ ಕಾಮಗಾರಿ ಇನ್ನೂ ಪೂರ್ಣವಾಗದೆ, ಕೆಲಸ ನಡೆಯುತ್ತಿದೆ. ಇಂದಿರಾ ಕ್ಯಾಂಟೀನ್ ಬಾಗಿಲು ಕಿಟಕಿಗಳನ್ನು ಅಳವಡಿಸಿದ್ದು, ಸ್ಥಳೀಯ ಕುಡುಕರು ಕಿಟಕಿ ಗ್ಲಾಸ್ ಒಡೆದಿದ್ದಾರೆ. ಕ್ಯಾಂಟೀನ್ ಕಟ್ಟಡ ಕಾಮಗಾರಿ, ಗೋಡೆಗಳ ಮಧ್ಯೆ ಸರಿಯಾಗಿ ಪ್ಯಾಕಿಂಗ್ ಮಾಡದೇ ಇರುವುದು ಕಂಡುಬರುತ್ತದೆ. ಅಲ್ಲಲ್ಲಿ ಸಾರಾಯಿ ಪ್ಯಾಕೆಟ್‌ಗಳು ಕಂಡುಬರುತ್ತವೆ. ರಾತ್ರಿಯಾದರೆ ಕುಡುಕರ ಹಾವಳಿ ಜಾಸ್ತಿಯಾಗುತ್ತದೆ” ಎಂದು ಹೇಳುತ್ತಾರೆ ಸ್ಥಳೀಯರು.
ಇಂದಿರಾ ಕ್ಯಾಂಟೀನ್ ಮುಂದೆ ಸ್ಥಳವಕಾಶವಿದ್ದು, ಕಸಕಡ್ಡಿ, ಮಣ್ಣು ಸಾಕಷ್ಟು ಕಂಡುಬರುತ್ತದೆ. ಇಂದಿರಾ ಕ್ಯಾಂಟೀನ್ ಸುತ್ತ ಇನ್ನೂ ಅರೆಬರೆ ಕಾಮಗಾರಿ ಕಂಡುಬರುತ್ತಿದೆ.
ಸ್ಥಳೀಯ ನಿವಾಸಿ ಶ್ರೀನಿವಾಸ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುಮಾರು ತಿಂಗಳಿಂದ ಈ ಇಂದಿರಾ ಕ್ಯಾಂಟೀನ್ ಕಾಮಗಾರಿ ನಡೆಯುತ್ತಿದೆ. ಯಾವಾಗ ಆರಂಭಿಸುತ್ತಾರೋ ಗೊತ್ತಿಲ್ಲ. ಇಲ್ಲೆಲ್ಲ ಕುಡುಕರು ಗ್ಲಾಸ್ ಒಡೆದು ಒಳಗಡೆ ಬರುತ್ತಿದ್ದಾರೆ. ಬೇಗ ಆರಂಭಿಸಿದರೆ ಜನರಿಗೆ ಅನುಕೂಲವಾಗುತ್ತದೆ” ಎಂದು ಹೇಳಿದರು.
ಈ ಸುದ್ದೊ ಓದಿದ್ದೀರಾ? ಶಿವಮೊಗ್ಗ | ಕೇಂದ್ರ, ರಾಜ್ಯ ಸರ್ಕಾರಗಳು ಅಡಕೆ ಬೆಳಗಾರರ ಹಿತ ಕಾಪಾಡುವಲ್ಲಿ ವಿಫಲ: ತಿ ನಾ ಶ್ರೀನಿವಾಸ್
ಸ್ಥಳೀಯ ನಿವಾಸಿ ಬಸಪ್ಪ ಹರಿಜನ್ ಮಾತನಾಡಿ, “ನಾನು, ಪ್ಲಾಸ್ಟಿಕ್ ಆಯ್ದುಕೊಂಡು ಜೀವನ ನಡೆಸುತ್ತಿದ್ದೇನೆ. ಇಂದಿರಾ ಕ್ಯಾಂಟೀನ್ ಬೇಗ ಆರಂಭವಾದರೆ, ನಮ್ಮಂಥವರಿಗೆ ಕಡಿಮೆ ಹಣದಲ್ಲಿ ಹೊಟ್ಟೆತುಂಬುತ್ತೆ. ಅನುಕೂಲವಾಗುತ್ತೆ” ಎಂದು ಹೇಳಿದರು.
ನರೇಗಲ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಹೇಶ್ ನೀಡಶೇಶಿ ಮಾತನಾಡಿ, “ಕೆಲವೊಂದಿಷ್ಟು ಸಣ್ಣಪುಟ್ಟ ಕಾಮಗಾರಿಗಳಿವೆ. ಆದಷ್ಟು ಬೇಗ ಕಾಮಗಾರಿ ಮಾಡಿಸಿ, ಮುಂದಿನ ಇಪ್ಪತ್ತು ದಿನಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು” ಎಂದು ಭರವಸೆ ನೀಡಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.