ಕನ್ನಡ ಭಾಷೆಯಲ್ಲಿ ಮತ್ತು ಕನ್ನಡ ಶಾಲೆಯಲ್ಲಿ ಓದಿದಂತಹ ವಿದ್ಯಾರ್ಥಿಗಳು ದೇಶವನ್ನಾಳುವ ಉತ್ತಮ ಪ್ರಜೆಗಳಾಗುತ್ತಾರೆ. ಕನ್ನಡ ನೆಲದಲ್ಲಿ ಹುಟ್ಟುವುದೇ ಒಂದು ಪುಣ್ಯ ಎಂದು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಜೈ ಕರ್ನಾಟಕ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಯಾವುದೇ ಮಠ ಮಾನ್ಯಗಳು ಹಾಗೂ ಗುರೂಜಿಗಳು ಮಾಡದ ಕೆಲಸವನ್ನು ನಮ್ಮ ಆಟೋ ಚಾಲಕರು ಮಾಡುತ್ತಾರೆ. ಕನ್ನಡ ನಾಡಿನಲ್ಲಿರುವ ಸಂಸ್ಕೃತಿ ಮತ್ತು ವ್ಯವಸ್ಥೆ ಇಡೀ ಭಾರತದಲ್ಲಿ ಎಲ್ಲಿಯೂ ಸಿಗಲು ಸಾಧ್ಯವಿಲ್ಲ. ಮುಖ್ಯವಾಗಿ ಕನ್ನಡ ಭಾಷೆಯನ್ನು ಹಾಗೂ ತಾಯಿ ಭುವನೇಶ್ವರಿಯನ್ನು ಸದಾ ಹಾರೈಸುವವರು ನಮ್ಮ ಆಟೋ ಚಾಲಕರು. ಇವರಿಗೊಂದು ನಮನ ಸಲ್ಲಿಸೋಣ. ಸರ್ಕಾರ ಆಟೋ ಚಾಲಕರಿಗೊಂದು ಭವನವನ್ನು ನಿರ್ಮಿಸಿಕೊಡಬೇಕು. ಇದರಿಂದ ಅವರಿಗೆ ಹೆಚ್ಚು ಅನುಕೂಲವಾಗುತ್ತದೆ” ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, “ನವೆಂಬರ್ ತಿಂಗಳು ಬಂದರೆ ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವದ ಮುಗಿಲು ಮುಟ್ಟುತ್ತದೆ. ವಿಶೇಷವಾಗಿ ಆಟೋ ಚಾಲಕರು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾರೆ” ಎಂದರು.
ಜೈ ಕರ್ನಾಟಕ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ ಗೋಪಾಲ ಮಾತನಾಡಿ, “ಕನ್ನಡ ನಾಡು, ನುಡಿ, ಜಲ, ಭಾಷೆ ಯಾವುದಕ್ಕಾದರೂ ಧಕ್ಕೆ ಉಂಟಾದರೆ ನಾವು ಕನ್ನಡಿಗರೆಲ್ಲ ಒಟ್ಟಾಗಿ ಅದರ ವಿರುದ್ಧ ಹೋರಾಡೋಣ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎರಡನೇ ಮಗು ಆಗಲಿಲ್ಲವೆಂದು, ನಾಲ್ಕು ವರ್ಷದ ಮಗಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ವಿಶೇಷವಾಗಿ ಕಾರ್ಯಕ್ರಮದಲ್ಲಿ ಮರಣ ನಂತರ ದೇಹ ದಾನ ಮಾಡಿದ ಸರಸ್ವತಮ್ಮ ಲೋಕೇಶ್, ವೇದಾವತಿ ಮಲ್ಲಪ್ಪ ಹಾಗೂ ವೀರ ಯೋಧರಿಗೆ, ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ, ರಂಗ ಭೂಮಿ ಕಲಾವಿದರಿಗೆ, ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ವಿಶೇಷವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಗುರುರಾಜ್, ವೀಣಾ ರಾಜೇಶ್, ಕಲೀಮುಲ್ಲಾ ಖಾನ್, ಮಹೇಶ್ ಬೀಸನಗದ್ದ, ಪಿ ಎನ್ ಚಂದ್ರು ಕುಮಾರ್ ಸೇರಿದಂತೆ ಇತರರು ಇದ್ದರು.
ವರದಿ : ಅಮಿತ್ ಆರ್, ಆನಂದಪುರ