ಎಸ್.ಎಲ್.ಭೈರಪ್ಪನವರ ‘ಆವರಣ’ ಎಂಬ ಕಾದಂಬರಿ ವಿಕೃತಿಯನ್ನು ಬಿತ್ತಿದಾಗ ಯು.ಆರ್.ಅನಂತಮೂರ್ತಿಯವರು, ‘ಇದು ರಂಜಿಸಿ ವಂಚಿಸುವ ಕಲೆ’ ಎಂಬ ಮಾತನ್ನು ಆಡಿದ್ದು ನೆನಪಾಗುತ್ತಿದೆ. ಕಲೆ, ಸಿನಿಮಾ, ಸಾಹಿತ್ಯದ ಮೂಲಕ ಜನರನ್ನು ರಂಜಿಸುತ್ತಾ, ಅಸಮಾನತೆ, ಕೋಮುದ್ವೇಷ, ವಿಷಕಾರಿ ಚಿಂತನೆಗಳನ್ನು ಸಾಮಾನ್ಯೀಕರಿಸುವ ಪ್ರವೃತ್ತಿಗೆ ಅನಂತಮೂರ್ತಿ ಈ ಮಾತನ್ನು ಬಳಸಿದ್ದರು. ಶಿವಣ್ಣನವರ ‘ಭೈರತಿ ರಣಗಲ್’ ಸಿನಿಮಾ ನೋಡಿ ಹೊರಬಂದ ಕೂಡಲೇ ಅನಿಸಿದ್ದು- ‘ಇದೊಂದು ರಂಜಿಸಿ ವಂಚಿಸುವ ಸಿನಿಮಾ’.
ಒಂದು ಕಾಲಘಟ್ಟದಲ್ಲಿ ಜಮೀನ್ದಾರರು, ಫ್ಯೂಡಲ್ ಜಾತಿಗಳವರು ಸಿನಿಮಾ ಕ್ಷೇತ್ರಕ್ಕೆ ಬಂಡವಾಳ ಹೂಡುವುದು ಹೆಚ್ಚಾದಾಗ- ಜಮೀನ್ದಾರರ ಗತ್ತನ್ನು ವೈಭವೀಕರಿಸುವ, ಅವರನ್ನು ದೇವರ ಅಪರಾವತಾರವೆಂಬಂತೆ ಬಿಂಬಿಸಿ ರಕ್ಷಕರನ್ನಾಗಿ ತೋರಿಸುವ ಜಮಾನ ಶುರುವಾಯಿತು. ತೆಲುಗಿನಲ್ಲಿ ಈ ಪರಿಯ ಸಿನಿಮಾಗಳು ಹೆಚ್ಚು ಬರುತ್ತಿದ್ದವು. ಅಂಥವುಗಳು ಕನ್ನಡದಲ್ಲೂ ತೆರೆಕಂಡವು. ಉಳುವವನೇ ಭೂಮಿಯ ಒಡೆಯ ಎಂದ ಈ ನಾಡಿನಲ್ಲಿ ‘ಜಮೀನ್ದಾರಿಕೆ’ಯನ್ನು ಚಪ್ಪರಿಸುವಂತೆ ಚಿತ್ರಿಸುವುದು, ಫ್ಯೂಡಲ್‌ಗಳ ಬಗ್ಗೆ ಕಣ್ಣೀರು ಹರಿಸುವಂತೆ ತೋರಿಸುವುದು ಕೂಡ- ‘ರಂಜಿಸಿ ವಂಚಿಸುವ ಕಲೆ’.
ನರ್ತನ್ ನಿರ್ದೇಶನದ ‘ಭೈರತಿ ರಣಗಲ್’ ಸಿನಿಮಾ ಮೇಕಿಂಗ್‌ನಿಂದ ಗಮನ ಸೆಳೆಯುತ್ತದೆ. ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು ಶಿಳ್ಳೆ ಹೊಡೆಯುವಂತಹ ರೋಮಾಂಚನಕಾರಿ ದೃಶ್ಯಗಳು, ಸ್ಟಂಟ್‌ಗಳು, ಡೈಲಾಗ್‌ಗಳು ಖಂಡಿತ ಇವೆ. ಈ ವಯಸ್ಸಲ್ಲಿ ಶಿವಣ್ಣನವರ ಎನರ್ಜಿ ನೋಡಿದರೆ ಮೈನವಿರೇಳುತ್ತದೆ. ಇಷ್ಟಕ್ಕೆ ತೃಪ್ತರಾಗಿ ಈ ಸಿನಿಮಾ ಬಿತ್ತುವ ‘ವಂಚನೆ’ಯನ್ನು ಒಪ್ಪಿಕೊಂಡರೆ ಅಪಾಯ ಖಚಿತ.
ಕಥೆಯಲ್ಲಿ factual errors ಢಾಳಾಗಿ ಕಾಣುತ್ತವೆ. ಕಾರ್ಮಿಕರ ಹಕ್ಕುಗಳಿಗಾಗಿ ನಡೆಯುವ ಯೂನಿಯನ್ ಹೋರಾಟವನ್ನು ಸ್ವಾರ್ಥದ ಪರಿಧಿಗೆ ಎಳೆದು ತಪ್ಪು ಮಾಡಲಾಗಿದೆ. ಯೂನಿಯನ್‌ಗಳ ನಾಯಕತ್ವ ವಹಿಸುವ ಯಾವುದೇ ಮುಖಂಡ ಜನರ ರಕ್ತ ಹೀರುವ ರಕ್ತಪಿಪಾಸಾಗಿ ಬದಲಾಗುವುದಿಲ್ಲ ಎಂಬುದು ಕಟುವಾಸ್ತವ. ಮತ್ತೊಂದೆಡೆ ಕಥೆ ಸೇವಿಯರ್ (ರಕ್ಷಕ) ಕಾನ್ಸೆಪ್ಟ್‌ನಿಂದ ಬಳಲಿ ಬೆಂಡಾಗುತ್ತದೆ. ರಕ್ಷಕನ ಸೋಗು ಧರಿಸುವ ರಣಗಲ್ ಹೇಳುತ್ತಿರುವುದೇನು? ಈ ಸಿನಿಮಾ ಗಣಿ ಮಾಫಿಯಾ ಬಗ್ಗೆ ಸಹಾನುಭೂತಿ ಬಿತ್ತುತ್ತಿದೆಯಲ್ಲ ಅನಿಸುತ್ತದೆ. ರಣಗಲ್ ಗಣಿ ಮಾಫಿಯಾದ ಡಾನ್ ಆಗಿ ಮೆರೆದರೂ ಆತ ಮಹಾನ್ ಜನ ಸೇವಕ ಎಂಬಂತೆ ಚಿತ್ರಿಸುವುದು ಒಳ್ಳೆಯ ಸಂದೇಶವಂತೂ ಅಲ್ಲ.
ಆತ ಬೆಟ್ಟಗಳನ್ನು ಕರಗಿಸುತ್ತಾ ಹೋಗುತ್ತಾನೆ, ನೆಲವನ್ನು ತನ್ನಿಚ್ಛೆಯಂತೆ ಬಗೆಯುತ್ತಾನೆ. ಅದಕ್ಕೆ ತೊಡಕಾದವರನ್ನು ಮುಗಿಸುತ್ತಾನೆ. ಅಲ್ಲಿ ಏಳುವ ಧೂಳಿನಲ್ಲಿ ಸಮಾನತೆಯ ಆಶಯವಿದೆ ಎಂಬುದೇ ಹಾಸ್ಯಾಸ್ಪದ ಸಂಗತಿ. ಯೂನಿಯನ್ ಕಟ್ಟಲು ಹೋದ ಕಾರ್ಮಿಕರನ್ನು ‘ಪರಾಂಡೆ’ಯ ಕಂಪನಿ ಹಿಂಸಿಸುತ್ತಿದೆ. ಅವರ ಭೂಮಿಯನ್ನು ಕಬಳಿಸುತ್ತದೆ. ಕೋರ್ಟ್ ಮೆಟ್ಟಿಲೇರಿದಾಗ ಒಬ್ಬೊಬ್ಬರನ್ನೇ ಮುಗಿಸುವ, ಮಗುವನ್ನೂ ನೇಣು ಹಾಕಿ ತೋರಿಸುವ ದೃಶ್ಯಗಳನ್ನು ಹಸಿಹಸಿಯಾಗಿ ತೋರಿಸಲಾಗುತ್ತದೆ. ಇದು ರಣಗಲ್‌ನನ್ನು ಮತ್ತೆ ಪಾತಕಿಯನ್ನಾಗಿ ಮಾಡಲು ಹಾಕುವ ತಳಪಾಯವಷ್ಟೇ. ಭಾವುಕ ಸನ್ನಿವೇಶದ ಮೂಲಕ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸುವ ಕಸರತ್ತಷ್ಟೇ. ಪರಾಂಡೆ ಭೂಮಿ ಕಬಳಿಸಲು ಮುಂದಾದಾಗ ಇದನ್ನು ಮೆಟ್ಟಿನಿಲ್ಲಲು ವಕೀಲ ರಣಗಲ್, ತಾನೇ ಗಣಿ ಆರಂಭಿಸಿಬಿಡುತ್ತಾನೆ! ಸಮಸ್ಯೆ ಇರುವುದೇ ಇಲ್ಲಿ. ವಿಕೃತಿಯೊಂದನ್ನು ಮುಗಿಸಲು, ತಾನೂ ವಿಕೃತನಾಗುವ ಕಥಾನಾಯಕ ಕೊಡುವ ಸಂದೇಶವೇನು? ರಣಗಲ್ ಸಿಡಿದೆದ್ದ ಮೇಲೆ ಕಾರ್ಮಿಕರ ಸಂಘಟನೆ ಏನಾಯಿತು? ಲಾರಿ ಗಟ್ಟಲೆ ಹಣ ತರುವ ರಣಗಲ್, ಕಾರ್ಮಿಕರ ಬದುಕು ಬದಲಿಸಿದನೇ? ಇದ್ಯಾವುದೂ ಇಲ್ಲಿಲ್ಲ.
ಆತ ಕೋಟಿ ಕೋಟಿ ಒಡೆಯನಾಗುತ್ತಾನೆ, ಕುದುರೆ ವ್ಯಾಪಾರದ ಕಿಂಗ್ ಪಿನ್ ಆಗಿ ಮೆರೆಯುತ್ತಾನೆ, ಶಾಸಕರ ತುಲಾಭಾರ ಹಾಕಿ ಖರೀದಿಸಿ ತನ್ನ ಸಾಮ್ರಾಜ್ಯ ಉಳಿಸಿಕೊಳ್ಳುವಷ್ಟು ಬೆಳೆಯುತ್ತಾನೆ. ಶಾಸಕರನ್ನೇ ಖರೀದಿಸುವ ರಣಗಲ್ ಇದನ್ನೆಲ್ಲ ಕಾರ್ಮಿಕರಿಗಾಗಿಯೇ ಮಾಡುತ್ತಾನೆ ಎಂಬುದು ನಗೆಪಾಟಲಿನ ಸಂಗತಿ. ಇಂತಹ ಸೇವಿಯರ್‌ಗಳು ಬಂದರೂ ಕಾರ್ಮಿಕರ ಬದುಕೇನೂ ಬದಲಾಗುವುದಿಲ್ಲ. ಹೆಸರಿಗೆ ಕಾರ್ಮಿಕರ ರಕ್ಷಣೆಯ ಕಥೆಯಾದರೂ ಇದು ಗಣಿ ಮಾಫಿಯಾ ರಾಜಕಾರಣದ ವೈಭವದ ಕತೆ. ಮಾಫಿಯಾಗಳನ್ನು ದೈವೀಕರಿಸಿ, ಸಹಾನುಭೂತಿ ಗಿಟ್ಟಿಸುವ ‘ರಂಜಿಸಿ ವಂಚಿಸುವ ಕಲೆ’. ಇಲ್ಲಿ ಹರಿಯುವ ರಕ್ತಕ್ಕೆ ರಕ್ಷಣೆಯ ಸೋಂಕಿದ್ದರೂ ಕೇವಲ ಪ್ರೇಕ್ಷಕರನ್ನು ಯಾಮಾರಿಸಿ ಮನರಂಜನೆಗೆ ಎಳೆಯುವ ಸಿದ್ಧಸೂತ್ರದ ಪಡಿಯಚ್ಚಷ್ಟೆ.
ಇದನ್ನೂ ಓದಿರಿ: ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಜನವರಿ 17ರಂದು ತೆರೆಗೆ
ಕಟ್ಟರ್ ಕನ್ನಡ ಸಿನಿಮಾ ವ್ಯಾಮೋಹಿಗಳಿಗೆ ಭೈರತಿ ರಣಗಲ್ ಖಂಡಿತ ಇಷ್ಟವಾಗಬಹುದು. ಕನ್ನಡ ಸಿನಿಮಾವನ್ನು ಕನ್ನಡ ಸಿನಿಮಾ ಥರಾನೇ ನೋಡಿದರೆ ಕೊಟ್ಟ ಕಾಸಿಗೆ ನಷ್ಟ ಅನಿಸುವುದಿಲ್ಲ. ಮೊದಲೆಲ್ಲ part-1 ಸಿನಿಮಾ ಮಾಡಿ, ನಂತರ part-2 ತೆಗೆಯುತ್ತಿದ್ದರು. ಈಗ ಟ್ರೆಂಡ್ ಬದಲಾಗಿದೆ. ಪ್ರೀಕ್ವೆಲ್‌ಗಳ ಯುಗ ಆರಂಭವಾಗಿದೆ. ಒಂದು ಸಿನಿಮಾ ಮಾಡಿದಾಗ, ಅದು ಯಶಸ್ವಿಯಾದರೆ part-1, ತೆಗೆಯುತ್ತಿದ್ದಾರೆ. ಹೀಗಾಗಿ ಈ ಸಿನಿಮಾ ‘ಮಫ್ತಿ’ಯ ಮೊದಲ ಭಾಗವಂತೆ. ಕಾಂತಾರ ಹಿಟ್ ಆಗಿದ್ದರಿಂದ ‘ಕಾಂತಾರ ಚಾಪ್ಟರ್ 1’ ಬರುತ್ತಿದೆ ನೋಡಿ, ಹಾಗೆಯೇ ‘ಭೈರತಿ ರಣಗಲ್’!
ಕೆಜಿಎಫ್ 1, 2 ಪ್ಯಾನ್ ಇಂಡಿಯಾ ಸಿನಿಮಾ ಸಾಲಿಗೆ ಸೇರಿವೆ. ‘ಭೈರತಿ ರಣಗಲ್’ ಕೂಡ ಪ್ಯಾನ್ ಇಂಡಿಯಾ ಚಿತ್ರ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಹೀಗಾಗಿ ‘ಪ್ಯಾನ್’ ಇಂಡಿಯಾ ಕಥೆಗಳು ಒಂದು ಸಿದ್ಧಮಾದರಿಯಲ್ಲಿ ಇರುತ್ತವೆ ಎಂಬುದನ್ನು ಪ್ರೇಕ್ಷಕ ಒಪ್ಪಿಕೊಂಡಿದ್ದಾನೆ ಎಂದಾಯಿತು. ಪಾತ್ರಗಳನ್ನು ಗಟ್ಟಿಯಾಗಿ ಕಟ್ಟಿಕೊಡುವಲ್ಲಿ ‘ಭೈರತಿ ರಣಗಲ್’ ಸೋತಿದೆಯಾದರೂ ಪ್ಯಾನ್ ಇಂಡಿಯಾ ಮಾದರಿಯಾದ್ದರಿಂದ ಒಮ್ಮೆ ನೋಡಬಹುದಾದ ಸಿನಿಮಾ. ಆದರೆ ಅದು ಕೊಡುವ ಸಂದೇಶದ ಬಗ್ಗೆ ಎಚ್ಚರ ವಹಿಸಿ ಕೂತರೆ ಶಿವಣ್ಣನವರ ಸ್ಕ್ರೀನ್ ಪ್ರೆಸೆನ್ಸ್ ಇಷ್ಟವಾಗುವುದು ಖಾತ್ರಿ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
ಕೆಲ ಸ್ವಘೋಷಿತ ಬುದ್ಧಿವಂತ ನಿರ್ದೇಶಕರು.. ತಾವು ಸಮಾಜಕ್ಕೆ ಯಾವುದೇ ಸಂದೇಶ ಕೊಡೋದಕ್ಕೆ ಸಿನಿಮಾ ಮಾಡಲ್ಲ.. ಮನರಂಜನೆ ಕೊಡೋದಕ್ಕಷ್ಟೇ ಸಿನಿಮಾ ಮಾಡ್ತೀವಿ ಎಂದು ಬಹಿರಂಗ ಹೇಳಿಕೆ ಕೊಟ್ಟಿದಾರೆ. ಇದೂ ಕೂಡ ಹಾಗೇ ಇರ್ಬೋದಲ್ಲ. ಹಾಗೆ ನೋಡೋದಾದ್ರೆ ಇವಾಗಿನ ಬಹುತೇಕ ಸಿನಿಮಾಗಳಲ್ಲಿ ಲಾಜಿಕ್ಕೇ ಇರಲ್ಲ.