ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಭಾರೀ ಕಳಪೆಯಾಗಿದೆ. ನಗರ ವಾಸಿಗಳು ಉಸಿರಾಟ ಸಂಬಂಧಿತ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ದೆಹಲಿ ಭಾಗದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದು, ರೈಲುಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ಆನ್‌ಲೈನ್ ತರಗತಿ ನಡೆಸಲಾಗುತ್ತಿದೆ.
ಮಂಗಳವಾರ ದೆಹಲಿ ಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕವು(AQI) 500ರ ಗಡಿ ಮಟ್ಟಿದೆ. ದೆಹಲಿಯಲ್ಲಿ 35 AQI ಮೇಲ್ವಿಚಾರಣಾ ಕೇಂದ್ರಗಳಿದ್ದು, ಬಹುತೇಕ ಕೇಂದ್ರಗಳಲ್ಲಿ ಸೂಚ್ಯಂಕವು 500 ದಾಟಿದೆ ಎಂದು ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್(SAFAR) ಹೇಳಿದೆ.
ದೆಹಲಿ ಪ್ರದೇಶದಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ರೈಲುಗಳ ಸಂಚಾರ ವಿಳಂಬವಾಗಿದ್ದು, ಸುಮಾರು 22 ರೈಲುಗಳ ಸಮಯಕ್ಕೆ ಸರಿಯಾಗಿ ದೆಹಲಿಯನ್ನು ತಲುಪಲು ಸಾಧ್ಯವಾಗಿಲ್ಲ. ಶಾಲೆಗಳನ್ನು ಮುಚ್ಚಲಾಗಿದ್ದು, ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ದೈಹಿಕ ತರಗತಿಗಳನ್ನು ನಡೆಸದಂತೆ ನಿರ್ದೇಶನ ನೀಡಲಾಗಿದೆ.
ಲೋಕಲ್ ಸರ್ಕಲ್ಸ್ ಸಮೀಕ್ಷೆಯ ಪ್ರಕಾರ, ದೆಹಲಿ ಮತ್ತು ಸುತ್ತಲಿನ 69% ಕುಟುಂಬಗಳಲ್ಲಿ ಒಬ್ಬರು ಅಥವಾ ಹೆಚ್ಚಿನ ಸದಸ್ಯರು ಗಂಟಲು ನೋವು ಅಥವಾ ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದಾರೆ. 62% ಕುಟುಂಬಗಳಲ್ಲಿ ಕನಿಷ್ಠ ಒಬ್ಬರು ಕಣ್ಣು ಉರಿ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗೂ ದೆಹಲಿಯ ಒಟ್ಟು ಜನರಲ್ಲಿ 46% ಮಂದಿ ‘ಮೂಗು ಕಟ್ಟುವ’ ಬಾಧೆಗೆ ತುತ್ತಾಗಿದ್ದರೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಹಲವರು ಒಂದಕ್ಕಿಂತ ಹೆಚ್ಚು ರೋಗಲಕ್ಷಣಗಳನ್ನು ಹೊಂದಿದ್ದಾರೆ. ದೆಹಲಿಯಲ್ಲಿ 31% ಮಂದಿ ಉಸಿರಾಟದ ತೊಂದರೆ ಅಥವಾ ಆಸ್ತಮಾದಿಂದ ಬಳಲುತ್ತಿದ್ದಾರೆ. ಆತಂಕ (ಆ್ಯಂಸೈಟಿ)ಯಂತಹ ಸಮಸ್ಯೆಗೆ 23% ಮಂದಿ ತುತ್ತಾಗಿದ್ದರೆ, 15% ಮಂದಿ ನಿದ್ರಾಬಾಧೆ ಅನುಭವಿಸುತ್ತಿದ್ದಾರೆ.