ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ನವೆಂಬರ್ 20ರಂದು ಲಿಂಗತ್ವ ಅಲ್ಪಸಂಖ್ಯಾತರ ಸ್ವಾಭಿಮಾನದ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸಂಪತ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಲ್ಲಿ ಆಗುತ್ತಿರುವ ತಾರತಮ್ಯ ಮತ್ತು ವಿಳಂಬ ಧೋರಣೆಯನ್ನು ಖಂಡಿಸುತ್ತೇವೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಎಲ್ಲ ಕ್ಷೇತ್ರಗಳಲ್ಲಿ ಮೀಸಲಾತಿ ನೀಡುವಂತೆ ಸ್ವಾಭಿಮಾನದ ನಡಿಗೆಯ ಮೂಲಕ ಆಗ್ರಹಿಸುತ್ತಿದ್ದೇವೆ” ಎಂದು ತಿಳಿಸಿದರು.
ಹುಮ್ಯಾನಿಟಿ ಫೌಂಡೇಶನ್ ವಕ್ತಾರರಾದ ಕಿರಣ್ ಬೇಡಿ ಮಾತನಾಡಿ, ಕರ್ನಾಟಕ ಸ್ವಾಭಿಮಾನದ ನಡಿಗೆಯಲ್ಲಿ 500ಕ್ಕಿಂತ ಹೆಚ್ಚು ಜನ ಸಮುದಾಯದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಂಗಮ ಸಂಸ್ಥೆಯ ಜಿಲ್ಲಾ ಸಂಯೋಜಕ ಸಿದ್ದಪ್ಪ ಹುಕ್ಕೇರಿ ಮಾತನಾಡಿ, ನ.20ರಂದ ನಡೆಯುವ ಕಾರ್ಯಕ್ರಮ ಬೆಳಿಗ್ಗೆ11ಗಂಟೆಗೆ ಸರ್ದಾರ್ ಮೈದಾನದಿಂದ ಆರಂಭವಾಗಿ ಕುಮಾರ ಗಂಧರ್ವ ರಂಗಮಂದಿರದ ಸಾರ್ವಜನಿಕ ಸಭೆಯಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಲೈಂಗಿಕ ಮತ್ತು ಬಹುತ್ವ ಚಳುವಳಿಯ ರಾಜ್ಯ ಸಹ ಅಧ್ಯಕ್ಷರಾದ ವೈಶಾಲಿ ಬ್ಯಾಳಿಯವರು ಮಾತನಾಡಿ ಇದು ಗರ್ವ ಮತ್ತು ಸ್ವಾಭಿಮಾನ ಹಾಗೂ ಅಧಿಕಾರಿಗಳಿಗೆ ಹಕ್ಕೊತ್ತಾಯ ಸಲ್ಲಿಸುವ ನಡಿಗೆಯಾಗಲಿದೆ ಎಂದು ತಿಳಿಸಿದರು.
ಈ ದಿನ.ಕಾಮ್ ಮಾಧ್ಯಮ ಸಂಸ್ಥೆ ಹಾಗೂ ಹುಮ್ಯಾನಿಟಿ ಫೌಂಡೇಶನ್, ರೈತ, ಮಹಿಳಾ, ಸ್ಪಂದನ, ದಲಿತ, ಯುವರಂಗ ಸಾಂಸ್ಕೃತಿಕ ಸಂಘಟನೆ ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನ.20ರಂದು ಲಿಂಗತ್ವ ಲೈಂಗಿಕ ಅಲ್ಪಸಂಖ್ಯಾತ ಸ್ವಾಭಿಮಾನದ ನಡಿಗೆ ಕಾರ್ಯಕ್ರಮ ನಡೆಯಲಿದೆ.
ಇದನ್ನು ಓದಿದ್ದೀರಾ? ಕನಕಪುರ | ಭ್ರೂಣ ಪತ್ತೆ ಪ್ರಕರಣ: ಆರೋಪಿ ಡಾ. ದಾಕ್ಷಾಯಿಣಿ ಮತ್ತೆ ನಿಯೋಜನೆಗೆ ಪ್ರಗತಿಪರ ಸಂಘಟನೆಗಳ ವಿರೋಧ
ಲಲಿತಾ ಹೊಸಮನಿ, ಬಾಬಾ ಸಾಹೇಬ್ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
