ರಾತ್ರಿ ವೇಳೆ ರಸ್ತೆ ಕಾಮಗಾರಿ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕೈಕೈ ಮಿಲಾಯಿಸಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದ್ದ ಗುತ್ತಿಗೆದಾರರು ಕಾಂಗ್ರೆಸ್ ಕಾರ್ಯಕರ್ತರೂ ಆಗಿದ್ದು, ನಗರದ ಬಸವೇಶ್ವರ ವೃತ್ತದಿಂದ ಪುರಸಭೆಯವರೆಗೂ ಕಾಮಗಾರಿಯ ನಡೆಸುತ್ತಿದ್ದರು ಎನ್ನಲಾಗಿದೆ.
ರಾತ್ರಿಯ ವೇಳೆ ರಸ್ತೆಯ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ರಾತ್ರಿಯ ವೇಳೆ ಕಾಮಗಾರಿ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಹೊಡೆದಾಡುವ ಹಂತಕ್ಕೆ ತಲುಪಿದೆ ಎಂದು ಹೇಳಲಾಗಿದೆ.
ರಾತ್ರಿ ವೇಳೆ ಸಂಚಾರ ಕಡಿಮೆ ಇರುವ ದೃಷ್ಟಿಯಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಇದನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ರಾತ್ರಿ ಮಾಡುವುದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಗುತ್ತಿಗೆದಾರ ರಸೂಲ್ ಖುರೇಷಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದ ಕಾರ್ಯಕರ್ತರು ಈ ರಸ್ತೆಯ ಕಾಮಗಾರಿ ಎಸ್ ಸಿ ಎಸ್ ಟಿ ಅನುದಾನದಲ್ಲಿ ನಡೆಯುತ್ತಿದೆ ಎಂದು ನಿಲ್ಲಿಸಲು ಬಂದರು. ಇದು ಕೆ ಕೆ ಆರ್ ಡಿ ಬಿ ಅನುದಾನದಲ್ಲಿ ನಡೆಯುತ್ತಿದೆ ಎಂದು ಜೆಇ,ಇನ್ನಿತರ ಅಧಿಕಾರಿಗಳು ಹೇಳಿದರೂ ಕೂಡ ಅವರು ಸಮಾಧಾನವಾಗಿಲ್ಲ. ಈ ವೇಳೆ ಮಾತಿಗೆ ಮಾತು ಬೆಳೆಸಿ, ವಾಗ್ವಾದ ನಡೆಸಿದ್ದಾರೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಕಾಲುವೆಗೆ ಬಿದ್ದ ಗೂಡ್ಸ್ ಆಟೋ: ಮಹಿಳಾ ಕೂಲಿಕಾರರನ್ನು ನಡು ನೀರಲ್ಲಿ ಬಿಟ್ಟು ಚಾಲಕ ಪರಾರಿ!
ವಾಗ್ವಾದದ ನಡುವೆಯೇ ಗುಂಪಿನಲ್ಲಿದ್ದ ಒಬ್ಬ ಬಿಜೆಪಿ ಕಾರ್ಯಕರ್ತ ಕಾಮಗಾರಿಗೆ ಹಾಕಿದ್ದ ಬ್ಯಾರಿಕೇಡ್ ಅನ್ನು ಜೋರಾಗಿ ತಳ್ಳಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದಿದ್ದ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ವೇಳೆ ನೂಕಾಟ ನಡೆದಿದೆ ಎಂದು ತಿಳಿದುಬಂದಿದೆ.
