ಗಾಯಕ ಟಿಎಂ ಕೃಷ್ಣ ಅವರಿಗೆ ‘ಸಂಗೀತ ಕಲಾನಿಧಿ ಎಂ ಎಸ್ ಸುಬ್ಬುಲಕ್ಷ್ಮಿ ಪ್ರಶಸ್ತಿ’ ನೀಡುವುದಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ (ನವೆಂಬರ್ 19) ನಿರ್ಬಂಧಿಸಿದೆ. ಎಂ ಎಸ್ ಸುಬ್ಬುಲಕ್ಷ್ಮಿ ಅವರ ಹೆಸರಲ್ಲಿ ಟಿಎಂ ಕೃಷ್ಣ ಅವರಿಗೆ ಪ್ರಶಸ್ತಿ ನೀಡದಂತೆ ‘ದಿ ಹಿಂದೂ ಪತ್ರಿಕೆಗೆ’ ನಿರ್ಬಂಧಿಸಿದೆ.
ದಿ ಹಿಂದೂ ಪತ್ರಿಕೆ 2005ರಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲು ಆರಂಭಿಸಿತು. ಚೆನ್ನೈ ಮ್ಯೂಸಿಕ್ ಅಕಾಡೆಮಿ ನೀಡುವ ಸಂಗೀತ ಕಲಾನಿಧಿ ಪಶಸ್ತಿ ಗೆದ್ದವರಿಗೆ ಈ ನಗದು ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ವರ್ಷ ಕರ್ನಾಟಿಕ್ ಸಂಗೀತ ಗಾಯಕ ಟಿಎಂ ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ಲಭಿಸಿದೆ. ಈ ನಿಟ್ಟಿನಲ್ಲಿ ದಿ ಹಿಂದೂ ಪತ್ರಿಕೆ ಅವರಿಗೆ ‘ಸಂಗೀತ ಕಲಾನಿಧಿ ಎಂ ಎಸ್ ಸುಬ್ಬುಲಕ್ಷ್ಮಿ’ ಪ್ರಶಸ್ತಿ ಘೋಷಿಸಿದೆ.
ಎಂಎಸ್ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ಶ್ರೀನಿವಾಸನ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ ಜಯಚಂದ್ರನ್ ಅವರ ಪೀಠವು ಈ ಮಧ್ಯಂತರ ಆದೇಶವನ್ನು ನೀಡಿದೆ.
ಇದನ್ನು ಓದಿದ್ದೀರಾ? ಎಸ್‌ಸಿ/ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದಿಂದ ದತ್ತಿ ಮತ್ತು ಸಂಘದ ಗೌರವ ಪ್ರಶಸ್ತಿ ಪ್ರಕಟ
ಈ ಹಿಂದೆ ಟಿಎಂ ಕೃಷ್ಣ ಅವರು ಎಂ ಎಸ್ ಸುಬ್ಬುಲಕ್ಷ್ಮಿ ಅವರನ್ನು ಟೀಕಿಸಿದ್ದರು. ಹಾಗಾಗಿ ನನ್ನ ಅಜ್ಜಿಯನ್ನು ನಿರಂತರವಾಗಿ ಟೀಕಿಸುವವರಿಗೆ ಪ್ರಶಸ್ತಿ ನೀಡಬಾರದು ಎಂಬುದು ಶ್ರೀನಿವಾಸನ್ ವಾದವಾಗಿದೆ.
ಈ ಅರ್ಜಿ ಪುರಸ್ಕರಿಸಿದ ಮದ್ರಾಸ್ ಹೈಕೋರ್ಟ್ “ಎಂ ಎಸ್ ಸುಬ್ಬುಲಕ್ಷ್ಮಿ ಅವರ ಹೆಸರಲ್ಲಿ ಪ್ರಶಸ್ತಿ ನೀಡುವುದು ಅವರ ಆಶಯಕ್ಕೆ ವಿರುದ್ಧವಾಗಿದೆ” ಎಂದು ಅಭಿಪ್ರಾಯಿಸಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದನ್ನು ಮುಂದುವರಿಸಬಾರದು ಎಂದು ಆದೇಶಿಸಿದೆ.
ಹಾಗೆಯೇ ಶ್ರೀನಿವಾಸನ್ ಅರ್ಜಿ ತಿರಸ್ಕರಿಸುವಂತೆ ಕೋರಿ ಸಂಗೀತ ಅಕಾಡೆಮಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಧೀಶರು ವಜಾಗೊಳಿಸಿದ್ದಾರೆ. ಆಕೆಯ ಇಚ್ಛೆಯ ಬಗ್ಗೆ ತಿಳಿದಿರುವ ಶ್ರೀನಿವಾಸನ್‌ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ ಎಂದು ಪೀಠ ಹೇಳಿದೆ.

ಟಿ ಎಂ ಕೃಷ್ಣ ಅವರದು ಬಹುಮುಖ ಪ್ರತಿಭೆ. ಅವರ ಗಾಯನ ಅದ್ಭುತವಾದುದು. ಸಂಗೀತ ಪ್ರೇಮಿಗಳ ಅಚ್ಚು ಮೆಚ್ಚಿನ “ಶ್ರೀಕೃಷ್ಣ” ಅವರು. ಅವರಿಗೆ ಪ್ರಶಸ್ತಿಗಳ ಅಗತ್ಯವಿಲ್ಲ. ಪ್ರಶಸ್ತಿಗಳನ್ನು ಪಡೆಯದೇ ಪ್ರಸಿದ್ಧರಾದವರು ಅವರು. ಸಂಗೀತ ಪ್ರಿಯರ ಪ್ರೀತಿಯ ಪ್ರಶಂಸೆಯೇ ಅವರಿಗೆ ಎಲ್ಲಕ್ಕಿಂತ ದೊಡ್ಡ ಪ್ರಶಸ್ತಿ. ಅ ದೊಡ್ಡ ಪ್ರಶಸ್ತಿಯನ್ನು ಅವರು ಈಗಾಗಲೇ ಗಳಿಸಿದ್ದಾರೆ. ಪ್ರಶಸ್ತಿ ನೀಡಿದೊಡನೆ ಅವರ ಪ್ರತಿಭೆ ಮತ್ತಷ್ಟು ಉತ್ತುಂಗಕ್ಕೇರುವುದಿಲ್ಲ. ಪ್ರಶಸ್ತಿ ನೀಡದಿದ್ದರೆ ಅವರ ಪ್ರತಿಭೆ ಯಾವ ಕಾರಣಕ್ಕೂ ಕುಗ್ಗುವುದೂ ಇಲ್ಲ. ಟಿ ಎಂ ಕೃಷ್ಣ ಅವರಿಗೆ ಯಾವುದೇ ಪ್ರಶಸ್ತಿಯನ್ನು ನೀಡಿದರೂ, ಅದು ಆ ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.