ರೈತರ ಪಹಣಿಯಲ್ಲಿ ವಕ್ಫ್ ಮಂಡಳಿ 2012 ರಿಂದ 2016 ಎಂದು ನಮೂದು ಮಾಡಿರುವ ಹೆಸರುಗಳು ತಕ್ಷಣದಲ್ಲಿ ತೆಗೆಯಬೇಕು ಇಲ್ಲದಿದ್ದಲ್ಲಿ ನಿರಂತರವಾಗಿ ಹೋರಾಟಗಳನ್ನು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹೋರಾಟಗಾರ ಜಗದೀಶ್ ಸಾಗರ್ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಟೆಂಗಳಿ ಕ್ರಾಸ್ ಹತ್ತಿರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ರೈತರ ಹಿತಾಸಕ್ತಿಯ ಬಗ್ಗೆ ಯೋಚಿಸದೆ ರೈತರ ಪಹಣಿಯಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಿಸಿದೆ. ಬಡ ರೈತರ ಪಹಣಿಯಲ್ಲಿನ ವಕ್ಫ್ ಮಂಡಳಿಯ ಹೆಸರನ್ನು ತೆಗೆದು ಹಾಕಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸಂಘಟನೆಯಿಂದ ರಾಜ್ಯಾದ್ಯಂತ ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಚಿಂಚೋಳಿ ತಾಲೂಕಿನ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ತಕ್ಷಣ ಪ್ರಾರಂಭಿಸಬೇಕು, ಜಿಲ್ಲಾದ್ಯಂತ ಅಕ್ರಮ ಮರಳುಗಾರಿಕೆ ತಡೆಹಿಡಿಯಬೇಕು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಜೆ.ಜೆ.ಎಮ್ ಕಾಮಗಾರಿ ತನಿಖೆ ಮಾಡುವ ಕುರಿತು, ಸರಕಾರಿ ಜಮೀನು ಅಕ್ರಮದಿಂದ ಸಕ್ರಮ ಮಾಡಬೇಕು, ಜಿಲ್ಲಾದ್ಯಂತ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಹಿಡಿಯಬೇಕು ಎಂಬ ಬೇಡಿಕೆಗಳನ್ನು ಉಲ್ಲೇಖಿಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ವಿಠಲ್ ಮಾಕಾ, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ್ ಝಳಕಿ, ಜಿಲ್ಲಾ ಸದಸ್ಯ ವಿಜಯಕುಮಾರ್ ಚೌವ್ಹಾಣ್, ತಾಲೂಕು ಅಧ್ಯಕ್ಷರಾದ ಶಿವಯೋಗಿ ಪೂಜಾರಿ, ಪರಮೇಶ್ವರ್ ಮತ್ತಿಮೂಡ್, ಮೆಹಬೂಬ ಪಟೇಲ್, ಮಲ್ಲಿಕಾರ್ಜುನ ಭೀಮನಳ್ಳಿಕರ್, ಮಕ್ಬೂಲ್ ಪಟೇಲ್, ಮರೆಪ್ಪಾ ನಿಡಗುಂದಾ, ಡಾ.ಸದಾಶಿವ, ಮಲ್ಲಿನಾಥ ಪೂಜಾರಿ, ರಾಮರಾವ್ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.
ವರದಿ: ಅನಂತ್ ದೇಶಪಾಂಡೆ, ವಾಲೆಂಟಿಯರ್
