ಸಮಾಜ ಸುಧಾರಣೆಗಾಗಿ ಬಂಡಾಯದ ಹಾದಿ ಹಿಡಿದಿದ್ದ ವಿಕ್ರಂ ಗೌಡ ಮೇಲೆ ಗುಂಡು ಹಾರಿಸುವುದು ಪೊಲೀಸರಿಗೆ ಅನಿವಾರ್ಯವಾಗಿತ್ತಾ? ಪೊಲೀಸರು ವಿಕ್ರಂ ಗೌಡರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಗಳು ನಾಗರಿಕ ಸಮಾಜದಲ್ಲಿ ಮೂಡಿದೆ.
ಪೊಲೀಸರ ಗುಂಡಿಗೆ ಬಲಿಯಾದ ವಿಕ್ರಂ ಗೌಡ ಕರ್ನಾಟಕದ ಆದಿವಾಸಿ – ದಲಿತ ನಾಯಕ. ಇನ್ನೂ ಇಬ್ಬರಿಗೆ ಗಾಯಗಳಾಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಿಕ್ರಂ ಗೌಡ ಎಂದರೆ ಒಕ್ಕಲಿಗ ಗೌಡ ಅಥವಾ ಕುಡುಬಿ ಗೌಡ ಅಲ್ಲ. ವಿಕ್ರಂ ಗೌಡ ಮಲೆಕುಡಿಯರಂತದ್ದೇ ಗೌಡ್ಲು ಸಮುದಾಯಕ್ಕೆ ಸೇರಿದವರು. ಉಡುಪಿ ಜಿಲ್ಲೆಯ ಹೆಬ್ರಿಯ ನಿವಾಸಿಯಾಗಿರುವ ವಿಕ್ರಂ ಗೌಡ ತನ್ನೂರು ಮತ್ತು ಶೋಷಿತ ಸಮುದಾಯಗಳ ಮುಕ್ತಿಗಾಗಿ ಹೋರಾಟದ ಬದುಕಿಗೆ ಕಾಲಿರಿಸಿದವರು.
ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲ್ಪಡುವ ಪಶ್ಚಿಮಘಟ್ಟದ ತಪ್ಪಲಿನ ಅರಣ್ಯದಲ್ಲಿ ವಾಸವಿದ್ದ ಬಡ ಆದಿವಾಸಿ ಗೌಡ್ಲು ಕುಟುಂಬದ ಒಂದು ಕಾಲದ ಅಮಾಯಕ ಹುಡುಗ ವಿಕ್ರಂ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಯಡಿಯಲ್ಲಿ ಕಾಡಿನಲ್ಲಿದ್ದ ದಲಿತ- ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯಿತು. ತನ್ನ ಮನೆಯನ್ನು ತೆರವುಗೊಳಿಸಲು ವಿರೋಧಿಸಿದ ವಿಕ್ರಂ ಗೌಡ ಮೇಲೆ ಪೊಲೀಸ್ / ಅರಣ್ಯಾಧಿಕಾರಿಗಳು ದೌರ್ಜನ್ಯ ನಡೆಸಿದರು. ಇದು ವಿಕ್ರಂ ಗೌಡರನ್ನು ಜನಹೋರಾಟಕ್ಕೆ ಪ್ರೇರೇಪಿಸಿತು. ನಂತರ ಹೋರಾಟದ ಹೆಸರಿನಲ್ಲಿ ಪಶ್ಚಿಮ ಘಟ್ಟಕ್ಕೆ ಪ್ರವೇಶ ಪಡೆದ ಹೋರಾಟಗಾರರ ಸಂಪರ್ಕ ಸಹಜವಾಗಿ ವಿಕ್ರಂಗೆ ಆಗಿತ್ತು.

ಅಲ್ಲಿಯವರೆಗೂ ತಾನಾಯ್ತು, ತನ್ನ ಮನೆಯಾಯ್ತು, ಕೃಷಿ ಕಾಡುತ್ಪತ್ತಿ ಸಂಗ್ರಹದ ಕೆಲಸವಾಯ್ತು ಎಂದುಕೊಂಡಿದ್ದ ವಿಕ್ರಂ ಗೌಡಗೆ ಸೈದ್ದಾಂತಿಕ ಹೋರಾಟದ ಅನುಭವ ಆಗಲಾರಂಭಿಸಿತು. ಮುಂದೆ ವಿಶಾಲಾರ್ಥದ ಹೋರಾಟಗಾರರಾದರು. ಆದಿವಾಸಿಗಳ ಹಕ್ಕುಗಳಿಗಾಗಿನ ಹೋರಾಟದ ಜೊತೆ ಜೊತೆಗೇ ಸರಕಾರದ ಸರ್ವಾಧಿಕಾರ, ಬಡವರ ಮೇಲಿನ ದೌರ್ಜನ್ಯ, ಜಮೀನ್ದಾರರ ದೌರ್ಜನ್ಯಗಳ, ರಾಜಕೀಯ ಪಕ್ಷಗಳ ವಂಚನೆಯ ಬಗ್ಗೆ ಜನಜಾಗೃತಿ ಮಾಡಲಾರಂಭಿಸಿದರು.
ಗೌಡ್ಲು ಅನ್ನೊದು ಪುಟ್ಟ ಆದಿವಾಸಿ ಸಮುದಾಯ. ಸೂಕ್ಷ್ಮ ಸಮುದಾಯವಾಗಿರುವ ಗೌಡ್ಲುಗಳು ಇತ್ತಿಚೆಗೆ ಮಲೆಕುಡಿಯ ಸಮುದಾಯದ ಜೊತೆ ವೈವಾಹಿಕ ಸಂಬಂಧವನ್ನು ಹೊಂದುತ್ತಿರುವುದರಿಂದ ಸಾಮಾಜಿಕವಾಗಿ ಹಿಂದಿಗಿಂತ ಸ್ವಲ್ಪ ಬಲಿಷ್ಠವಾಗಿದೆ.
ತೀರಾ ಕಾಡೊಳಗಿನ ನಿವಾಸಿಯಾಗಿರುವ ವಿಕ್ರಂ ಗೌಡ ಬಡತನದ ಬೇಗೆಯಲ್ಲಿ ಬೆಂದು ಬೆಳೆದವರು. ಗೌಡ್ಲು ಮತ್ತು ಮಲೆಕುಡಿಯ ಬುಡಕಟ್ಟು ಸಮುದಾಯಗಳು ಅತ್ಯಂತ ಸಭ್ಯ, ಮಾನವೀಯ ಸಮುದಾಯಗಳು. ಈ ಎರಡು ಬುಡಕಟ್ಟು ಸಮುದಾಯಗಳು ಯಾವ ರೀತಿಯಲ್ಲೂ ಅಪರಾಧ ಚಟುವಟಿಕೆಗಳಲ್ಲಿ ಗುಂಪು ಘರ್ಷಣೆಗಳಲ್ಲಿ ಭಾಗಿಯಾಗಿರುವ ಉದಾಹರಣೆಗಳೇ ಇಲ್ಲ. ಇತ್ತಿಚೆಗೆ ಆರೆಸ್ಸೆಸ್ ವನವಾಸಿ ಕಲ್ಯಾಣ ಗುಂಪುಗಳು ಕಾಡಿನ ಮಲೆಕುಡಿಯರನ್ನು ತಲೆಕೆಡಿಸಿ ಕೋಮುವಾದಕ್ಕೆ ಬಳಸಿಕೊಂಡಿರುವುದು ಬಿಟ್ಟರೆ ಸಮುದಾಯವಾಗಿ ಮಲೆಕುಡಿಯರು ಮಾನವೀಯ ನೋಟ ಇರುವಂತವರು. ಗೌಡ್ಲುಗಳಂತೂ ಮನುಷ್ಯತ್ವಕ್ಕೊಂದು ಪರ್ಯಾಯ ಹೆಸರು. ಅಂತಹ ಸಮುದಾಯದಿಂದ ಬಂದ ವಿಕ್ರಂ ಗೌಡ ಎಂಬ ಆದಿವಾಸಿ ನಾಯಕ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ.
ಸಮಾಜ ಸುಧಾರಣೆಗಾಗಿ ಬಂಡಾಯದ ಹಾದಿ ಹಿಡಿದಿದ್ದ ವಿಕ್ರಂ ಗೌಡ ಮೇಲೆ ಗುಂಡು ಹಾರಿಸುವುದು ಪೊಲೀಸರಿಗೆ ಅನಿವಾರ್ಯವಾಗಿತ್ತಾ? ಪೊಲೀಸರು ವಿಕ್ರಂ ಗೌಡರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬಹುದಿತ್ತಲ್ಲವೇ ಎಂಬ ಪ್ರಶ್ನೆಗಳು ನಾಗರಿಕ ಸಮಾಜದಲ್ಲಿ ಮೂಡಿದೆ. ಅದಕ್ಕಿಂತಲೂ ಮುಖ್ಯವಾಗಿ ವಾರದ ಹಿಂದೆ ಇಬ್ಬರು ನಕ್ಸಲರನ್ನು ಪೊಲೀಸರು ಬಂಧಿಸಿದ್ದರು. ಆ ರೀತಿ ಬಂಧನಕ್ಕೊಳಪಟ್ಟ ನಕ್ಸಲರು ಯಾರು? ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆಯೇ ಎಂಬುದರ ಸಂಪೂರ್ಣ ಮಾಹಿತಿಯನ್ನು ಪೊಲೀಸರು ತಿಳಿಸಬೇಕಿದೆ. ನವೆಂಬರ್ 08 ರಿಂದ 11ರ ಮಧ್ಯೆ ಧರ್ಮಸ್ಥಳ ವ್ಯಾಪ್ತಿಯಲ್ಲಿ ಇಬ್ಬರು ಶಂಕಿತ ನಕ್ಸಲರನ್ನು ಬಂಧಿಸಿ ಅವರಿಂದ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ವಶವಾದ ಬಳಿಕವೇ ಎಎನ್ಎಫ್ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿತ್ತು. ಕೂಂಬಿಂಗ್ನಲ್ಲಿ ಪೊಲೀಸರು ಮತ್ತು ನಕ್ಸಲರ ಮಧ್ಯೆ ಗುಂಡಿನ ಚಕಮಕಿ ನಡೆದಾಗ ವಿಕ್ರಂ ಗೌಡ ಎನ್ ಕೌಂಟರ್ ನಡೆಯುತ್ತದೆ ಎಂದು ಪೊಲೀಸರು ಹೇಳುತ್ತಾರೆ. ಪೊಲೀಸರು ವಾರದ ಹಿಂದೆ ಬಂಧಿಸಿದ್ದ ಆ ಇಬ್ಬರು ನಕ್ಸಲರು ಯಾರು ಎಂಬುದನ್ನು ಹೇಳದೇ ವಿಕ್ರಂ ಗೌಡ ಎನ್ ಕೌಂಟರ್ ಆಗಿದ್ದಾರೆ ಎಂದು ಘೋಷಿಸಿದರೆ ಸಾರ್ವಜನಿಕರಲ್ಲಿ ಅನುಮಾನ ಮೂಡುತ್ತದೆ.

ಪೊಲೀಸರ- ನಕ್ಸಲ್ ಮುಖಾಮುಖಿ ಕತೆಗಳು ರೋಚಕವಾಗಿರುತ್ತದೆ. ಆದರೆ ಅವೆಲ್ಲವೂ ನಿಜವಿರುವುದಿಲ್ಲ. 2011ನೇ ಇಸವಿ. ಅಕ್ಟೋಬರ್ ಇರಬೇಕು. ಬೆಳ್ತಂಗಡಿಯ ಸವಣಾಲು ಎಂಬ ದಟ್ಟ ಕಾಡಿನಲ್ಲಿ ಎಎನ್ಎಫ್ ಫೊಲೀಸರು ನಕ್ಸಲ್ ಕೂಬಿಂಗ್ ನಡೆಸುತ್ತಿದ್ದರು. ಪೊಲೀಸರು ಬಹುಶಃ ಮೂರು ತಂಡಗಳಾಗಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೆಬಲ್ ದರ್ಜೆಯ ಪೊಲೀಸರನ್ನು ಕಾಡಿನಲ್ಲಿ ಕೂಂಬಿಂಗ್ ಗೆ ಕಳುಹಿಸಿ ಐಪಿಎಸ್ ಅಧಿಕಾರಿಗಳು ಬೆಳ್ತಂಗಡಿಯ ಐಬಿಯಲ್ಲಿ ನಿದ್ರಿಸುತ್ತಿದ್ದ ಸಮಯವದು. ಮಧ್ಯರಾತ್ರಿ ನಕ್ಸಲ್ ಮತ್ತು ಪೊಲೀಸರ ಮಧ್ಯೆ ಗುಂಡಿನ ಚಕಮಕಿ ಆಗುತ್ತದೆ. ನಕ್ಸಲರ ಗುಂಡಿಗೆ ಓರ್ವ ಪೊಲೀಸ್ ಕಾನ್ಸ್ಟೆಬಲ್ ಮಹದೇವ್ ಮಾನೆ ಸಾವನ್ನಪ್ಪಿದ್ದಾರೆ ಎಂಬ ಫೋನ್ ಕರೆ ನನಗೆ ಮಧ್ಯ ರಾತ್ರಿ 1ಗಂಟೆಯ ವೇಳೆಗೆ ಬರುತ್ತದೆ. ನಾನು ನನ್ನ ಕ್ಯಾಮರಾಮನ್ ಮತ್ತು The Hindu ಪತ್ರಕರ್ತ ಗೆಳೆಯರನ್ನು ಮಧ್ಯರಾತ್ರಿ ಎಬ್ಬಿಸಿ ಕಾಡಿನತ್ತಾ ಹೊರಡುತ್ತೇವೆ. ರಾತ್ರಿ ಮೂರು ಗಂಟೆಯ ವೇಳೆಗೆ ಈ ವಿಚಾರಕ್ಕೆ ಸಂಬಂಧಿಸಿದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರಿಗೆ ಕೇಳೋಣಾ ಎಂದು ಅನ್ನಿಸಿ ಕರೆ ಮಾಡಿದೆ. ಬೆಳ್ತಂಗಡಿಯ ಐಬಿಯಲ್ಲಿ ಮಲಗಿದ್ದ ಆ ಐಪಿಎಸ್ ಅಧಿಕಾರಿಗೆ ಪೊಲೀಸ್ ಪೇದೆ ನಿಧನರಾಗಿರುವ ಮಾಹಿತಿಯೇ ಇಲ್ಲ. ನನ್ನ ಮಾಹಿತಿ ಮೂಲ ಸ್ಪಷ್ಟವಾಗಿದ್ದರಿಂದ ನೇರವಾಗಿ ಕಾಡಿನೊಳಗೆ ಹೋದೆವು. ಕಾಡಿನೊಳಗೆ ಹೋದಾಗ ಪೊಲೀಸ್ ಕಾನ್ಸ್ಟೆಬಲ್ ಮೃತ ದೇಹದ ಮುಂದೆ ಪೊಲೀಸರು ಕಣ್ಣೀರು ಹಾಕುತ್ತಿದ್ದರು. ನಾವು ತಲುಪಿದ ಬಳಿಕವಷ್ಟೇ ಹೊರ ಜಗತ್ತಿನ ಪೊಲೀಸರಿಗೆ, ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪೊಲೀಸ್ ಸಾವಿನ ಸುದ್ದಿ ತಲುಪಿತ್ತು. ನಂತರ ಅಂದಿನ ಗೃಹ ಸಚಿವ ಆರ್ ಅಶೋಕ್ ಸ್ಥಳಕ್ಕೆ ಬಂದರು. ಪೊಲೀಸ್ ಗೌರವಗಳೊಂದಿಗೆ ಮೃತ ದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯ್ತು. ಪೊಲೀಸರು ಈ ಗುಂಡಿನ ಚಕಮಕಿ ಮತ್ತು ಪೊಲೀಸ್ ಮೇಲೆ ಗುಂಡಿನ ದಾಳಿಗೆ ಇದೇ ವಿಕ್ರಂ ಗೌಡ, ಸುಂದರಿಯನ್ನು ಆರೋಪಿಯನ್ನಾಗಿಸಿ ಎಫ್ಐಆರ್ ದಾಖಲಿಸಿದ್ದರು.
ವಾಸ್ತವವಾಗಿ ಅಂದು ಪೊಲೀಸ್ ಮತ್ತು ನಕ್ಸಲ್ ಗುಂಡಿನ ಚಕಮಕಿಯೇ ನಡೆದಿರಲಿಲ್ಲ. ಪೊಲೀಸರದ್ದೇ ಎರಡು ಗುಂಪುಗಳು ಕಾಡಿನೊಳಗಡೆ ಗುಂಡಿನ ಚಕಮಕಿ ನಡೆಸಿತ್ತು. ನಕ್ಸಲರು ಬಂದೇ ಇರಲಿಲ್ಲ. ಪೊಲೀಸರ ಗುಂಡಿಗೆ ಪೊಲೀಸರೇ ಬಲಿಯಾಗಿದ್ದರು ಎಂದು ಹಲವು ತಿಂಗಳ ನಂತರ ವಿಚಾರಣೆಯಿಂದ ತಿಳಿದು ಬಂತು. ಹಾಗಾಗಿ ಎಲ್ಲಾ ಪೊಲೀಸ್ – ನಕ್ಸಲ್ ಮುಖಾಮುಖಿ ಎಂಬ ಸಿನಿಮೀಯ ದೃಶ್ಯವನ್ನು ನಂಬಲು ಸಾಧ್ಯವಿಲ್ಲ. ಹಾಗಾಗಿ ವಾರದ ಹಿಂದೆ ಪೊಲೀಸರು ಬಂಧಿಸಿದ ನಕ್ಸಲರು ಯಾರು ಎಂಬುದು ಸ್ಪಷ್ಟಪಡಿಸಿದ ಬಳಿಕವೇ ಮುಖಾಮುಖಿ-ಎನ್ ಕೌಂಟರ್ ವಿಷಯವನ್ನು ವಿವರಿಸಬೇಕಿದೆ.
ಕರಾವಳಿ – ಮಲೆನಾಡಿನ ರೈತರು ಪಕ್ಷ ಅಥವಾ ಜಾತಿ ಬೇಧವಿಲ್ಲದೇ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಎತ್ತಂಗಡಿಯನ್ನು ವಿರೋಧಿಸಿ, ಅರಣ್ಯ ಭೂಮಿ – ಕಂದಾಯ ಭೂಮಿ ಗೊಂದಲದಿಂದ ಆಗುತ್ತಿರುವ ಅನ್ಯಾಯ, ವಿಪರೀತ ಮಳೆ ಹಾಗೂ ಇನ್ನಿತರ ಕೀಟಬಾಧೆಯಿಂದ ಆಗುವ ನಷ್ಟ ಎಲ್ಲವನ್ನೂ ಎದುರಿಸಿ ಬದುಕುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕಮ್ಯುನಿಸ್ಟ್ ಪಕ್ಷಗಳಿಗೆ ಮತ ಹಾಕುವವರು, ಕಾರ್ಯಕರ್ತರೂ ಸೇರಿದ್ದಾರೆ.

ಹೀಗಿರುವಾಗ ಇಡೀ ಸಮುದಾಯದ ಅಂಚಿನಲ್ಲಿ ಇರುವ ವಿಕ್ರಮ್ ಗೌಡರಂಥವರು, ತೀರಾ ರೋಸಿ ಹೋಗಿ ತೀವ್ರ ಎಡಪಂಥದ ಚಳವಳಿಗಳ ಭಾಗವಾಗುತ್ತಾರೆ. ಆದರೆ, ಸಮಸ್ಯೆಯನ್ನು ಪರಿಹರಿಸುವ ಬದಲಿಗೆ ಚಳವಳಿಯನ್ನು ಇಲ್ಲವಾಗಿಸುವ ಪ್ರಯತ್ನಕ್ಕೆ ಆಳುವವರು ಮುಂದಾಗುತ್ತಾರೆ. ಅದಕ್ಕೆ ಬಲಿಯಾಗುವವರು ಇಂತಹ ಚಳವಳಿಯ ಆದರ್ಶದಲ್ಲಿ ತಮ್ಮ ಬದುಕಿನ ಸುಖ ಲೆಕ್ಕಿಸದೇ ಮುಂದಾಗುವವರು. ಅವರಲ್ಲಿ ವಿಕ್ರಮ್ರಂತಹ ಆದಿವಾಸಿ ದಲಿತ ಹೋರಾಟಗಾರರೇ ಹೆಚ್ಚು. ಸಾಕೇತ್ ರಾಜನ್ರಂತಹ ಸ್ಥಿತಿವಂತರೂ ಈ ಚಳವಳಿಯಲ್ಲಿ ಪ್ರಾಣ ತೆತ್ತಿದ್ದಾರೆ.
ಆದರೆ, ನಕ್ಸಲ್ ಚಳವಳಿಯಲ್ಲಿ ಹೋರಾಟಗಾರರು ಹತರಾದಾಗ, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ಸಿನ ಸಂತ್ರಸ್ತರು ಅದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಸರ್ಕಾರವೂ ಸಹಾ ತೀವ್ರ ಎಡಪಂಥದ ಚಳವಳಿಗಾರರನ್ನು ದಮನಿಸಿ ಒಟ್ಟಾರೆ ಜನರ ಸಮಸ್ಯೆಯನ್ನೇ ಮೂಲೆಗುಂಪಾಗಿಸುತ್ತದೆ. ಪ್ರಗತಿಪರ ಹೋರಾಟಗಾರರೂ ದೂರ ಸರಿಯುತ್ತಾರೆ. ಆದರೆ, ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಹರಿಯುವ ನದಿಗಳು ಹಲವಿರಬಹುದು. ಸೇರುವ ಸಮುದ್ರವೊಂದೇ. ವಿಕ್ರಂಗೌಡರ ಹೋರಾಟದ ದಾರಿಯನ್ನು ಒಪ್ಪದವರೂ ಈ ವಿಚಾರದ ಆಳ ಅಗಲ ಅರಿಯಬೇಕು. ಕಾಂಗ್ರೆಸ್ ಸರ್ಕಾರವೂ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಕೊಲ್ಲುವುದರ ಮೂಲಕ ದಮನ ಮಾಡಲು ಹೊರಟರೆ ಅದಕ್ಕೂ ಬಿಜೆಪಿಗೂ ವ್ಯತ್ಯಾಸವಿರಲ್ಲವಷ್ಟೇ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮೋದಿ ಭಾರತದ ಮನಸ್ಥಿತಿ ಮತ್ತು ಮನೆಸ್ಥಿತಿ

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ
ಕನ್ನಡದಲ್ಲಿ ಡಿಯರ್ ವಿಕ್ರಮ್ ಎಂಬ ಚಲನ ಚಿತ್ರ ಇದೆ. ಸತೀಶ್ ನೀನಾಸಂ ಅಭಿನಯಿಸಿರುವ ಕಥೆ. ಹೋರಾಟವೇ ಆಗೆ ಸಮಯಕ್ಕೆ, ಸಂದರ್ಭಕ್ಕೆ ಕಥೆಯ ನಾಯಕ ಕ್ರಾಂತಿಕಾರಿ ಹೋರಾಟದ ದಾರಿಯನ್ನು ಹಿಡಿಯುತ್ತಾರೆ. ಗಾಂಧಿಯ ಬದಲಾವಣೆ ಬರುವುದರ ಒಳಗೆ ಭಗತ್ ಸಿಂಗ್ ರಂತ ಅನೇಕ ಅಮಾಯಕರನ್ನು ಕಳೆದು ಕೊಳ್ಳುತ್ತೇವೆ. ಗೋಡ್ಸೆಗಳ ಆಳ್ವಿಕೆ ಇರುವಾಗ ಗಾಂಧಿಯ ತತ್ವಗಳಿಗೆ ಬೆಲೆ ಎಲ್ಲಿರಲು ಸಾಧ್ಯ?
ಪ್ರತಿಯೊಬ್ಬನೂ ಭಗತ್ ಸಿಂಗ್ ತರ ಆದರೆ ಗಾಂಧಿಯ ಕನಸು ಸಾಧ್ಯ! ಪ್ರತಿಯೊಬ್ಬ ಗಾಂಧಿ ಆದರೆ ನೀವೇ ಊಹಿಸಿಕೊಳ್ಳಿ (ಇಂದಿನ ಪರಿಸ್ಥಿತಿ). ಆದರೂ ಪೊಲೀಸ್ ಅಧಿಕಾರಿಗಳು ರಾಜಕೀಯ ಪಕ್ಷಗಳ ಕೈಗೊಂಬೆಗಳು ಎನ್ನುವುದನ್ನು ನೀವು ಮರೆತಿದ್ದೀರಾ?
ಇದ್ದುದನ್ನು ಇದ್ದಂಗೆ ಹೇಳೋ ಜಾಯಮಾನದ ಪತ್ರಕರ್ತ ಸೂರಿಂಜೆಯವರು…ಆದರೆ ಅವರಿಂದ ಅನಾವರಣಗೊಂಡ ಸತ್ಯ ಯಾರನ್ನು ಕಾಡಬೇಕೋ ಅವರನ್ನು ಕಾಡುತ್ತಿದೆಯೇ?
ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನ ಮನಸ್ಕರು. ಅದನ್ನು ನೀವೂ(ಈ ಬರಹದ ಲೇಖಕರು) ಕೂಡ ಮರೆತಿದ್ದೀರಿ. ಸತ್ಯ ಯಾರಿಗೂ ಬೇಕಿಲ್ಲ. ಎಲ್ಲರೂ ಒಂದು ಗುಂಪಿನ ನಾಯಕರೆಂದು ಬಿಂಬಿಸಿಕೊಂಡು, ಅಧಿಕಾರ ಹಿಡಿಯಲು ಯತ್ನಿಸುವವರು. ಹಾಗೆ ಇವರೆಲ್ಲ ನಮ್ಮನ್ನು ಹೊರತಾದ ಒಂದೇ ವೇದಿಕೆಯಲ್ಲಿ ಸೇರುವವರು
ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನ ಮನಸ್ಕರು. ಅದನ್ನು ನೀವೂ(ಈ ಬರಹದ ಲೇಖಕರು) ಕೂಡ ಮರೆತಿದ್ದೀರಿ. ಸತ್ಯ ಯಾರಿಗೂ ಬೇಕಿಲ್ಲ. ಎಲ್ಲರೂ ಒಂದು ಗುಂಪಿನ ನಾಯಕರೆಂದು ಬಿಂಬಿಸಿಕೊಂಡು, ಅಧಿಕಾರ ಹಿಡಿಯಲು ಯತ್ನಿಸುವವರು. ಹಾಗೆ ಇವರೆಲ್ಲ ನಮ್ಮನ್ನು ಹೊರತಾದ ಒಂದೇ ವೇದಿಕೆಯಲ್ಲಿ ಸೇರುವವರು
ಸತ್ತ ಹೋದ ಕಥೆ ಮುಗಿಯಿತು ಅಷ್ಟೇ ಇದೇ ಸಮಾಜ
ಇದನ್ನು ಒಪ್ಪಿ ಜೀವನ ಸಾಗಿಸಿ. ಯಾರಿಗೂ ಯಾರು ಇಲ್ಲ, ನಿನ್ನು ಜೈಲು ಪಾಲು ಆದಾಗ ನಿನಗೂ ಯಾರು ಇರಲಿಲ್ಲ.