ಮಣಿಪುರ | ಮತ್ತೆ ಮತ್ತೆ ಭುಗಿಲೇಳುತ್ತಿರುವ ಹಿಂಸಾಚಾರ; 356 ವಿಧಿ ಜಾರಿ ಅನಿವಾರ್ಯ

Date:

Advertisements
ಮಣಿಪುರದ ಹತ್ಯಾಕಾಂಡವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಸಾಧ್ಯವಾಗದಿರುವುದು ಅಚ್ಚರಿ ಮತ್ತು ಆಘಾತಕಾರಿ ಸಂಗತಿ. ಶಾಂತಿ, ಸೌಹಾರ್ದತೆ, ನ್ಯಾಯ, ಪರಿಹಾರ ಮತ್ತು ಪುನರ್ವಸತಿಯನ್ನು ಮರಳಿ ತರಲು ಪ್ರಧಾನಿ ಶ್ರಮಿಸಬೇಕಿತ್ತು. ಆದರೆ ಚುನಾವಣೆ, ವಿದೇಶಿ ಪ್ರವಾಸಗಳಿಗೆ ತೋರುವ ಆಸಕ್ತಿಯನ್ನು ಮಣಿಪುರಕ್ಕೆ ಮಾತ್ರ ಇಲ್ಲಿಯವರೆಗೂ ತೋರಿಲ್ಲ. ಇವೆಲ್ಲ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ರಾಷ್ಟ್ರಪತಿಗಳು ತಕ್ಷಣದ ಮಧ್ಯ ಪ್ರವೇಶಿಸಿ ಸುವ್ಯಸ್ಥಿತ ರೀತಿಯಲ್ಲಿ 356ನೇ ವಿಧಿ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ.

ಕಳೆದ ಒಂದೂವರೆ ವರ್ಷದಿಂದ ಜನಾಂಗೀಯ ಸಂಘರ್ಷದಿಂದ ನಲುಗುತ್ತಿರುವ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಈ ಮೊದಲು ಮೀಸಲಾತಿಯಿಂದ ಶುರುವಾಗಿ ಕುಕಿ ಮತ್ತು ಮೈತೇಯಿ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದ್ದ ಗಲಭೆ ರಾಜಕಾರಣಿಗಳ ಮನೆ, ಸರ್ಕಾರಿ ಕಚೇರಿಗಳನ್ನು ಪ್ರವೇಶಿಸಿದೆ. ಉದ್ರಿಕ್ತ ಗುಂಪುಗಳು ಮಣಿಪುರದ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಅವರ ಸಂಬಂಧಿಕರ ಮನೆ, ಸಚಿವರು, ಶಾಸಕರು, ಸರ್ಕಾರದ ವಿವಿಧ ಇಲಾಖೆಗಳ ಮೇಲೆ ದಾಳಿ ನಡೆಸಲಾಗಿದೆ. ಹಿಂಸಾಚಾರದ ಘಟನೆಗಳು ಒಂದಿಷ್ಟು ದಿನ ತಟಸ್ಥಗೊಂಡರೆ, ಮತ್ತೆ ಹಲವು ದಿನಗಳು ಬೆಂಕಿಯುಂಡೆಯಾಗುತ್ತದೆ. ಅಮಾಯಕರನ್ನು ಕೊಲ್ಲಲಾಗುತ್ತಿದೆ. ಆಗ ಘನಘೋರವಾಗಿ ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಲಾಗುತ್ತಿತ್ತು. ಈಗ ಇನ್ನೂ ಹೀನಾಯವಾಗಿ ತಿಂಗಳುಗಳ ಹಸುಳೆಗಳು ಎಂಬುದನ್ನು ನೋಡದೆ ಹತ್ಯೆ ಮಾಡಲಾಗುತ್ತಿದೆ.

ಇವೆಲ್ಲ ಕಾರಣಗಳಿಂದಾಗಿ ಮಣಿಪುರ ರಾಜ್ಯವು ಸಾಂವಿಧಾನಿಕ ಆಡಳಿತ ವ್ಯವಸ್ಥೆಯ ವೈಫಲ್ಯದ ಪ್ರಮುಖ ಪ್ರಕರಣವಾಗಿ ಪ್ರತಿಬಿಂಬಿಸಲಿದ್ದು, ಭಾರತದ ರಾಷ್ಟ್ರಪತಿಗಳು ಸಂವಿಧಾನದ 356 ನೇ ವಿಧಿಯ ಜಾರಿಗೊಳಿಸುವುದು ತುರ್ತು ಅಗತ್ಯವಾಗಿದೆ. ರಾಷ್ಟ್ರಪತಿಗಳು ರಾಜ್ಯಪಾಲರ ವರದಿಗಾಗಿ ಕಾಯಬೇಕಾಗಿಲ್ಲ. ಏಕೆಂದರೆ, ಈ ವಿಧಿಯ ಅಡಿಯಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲದಿದ್ದರೆ ರಾಜ್ಯ ಸರ್ಕಾರದಲ್ಲಿ ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸಲಾಗದ ಪರಿಸ್ಥಿತಿಯು ಉದ್ಭವಿಸಿದೆ ಎಂದು ಮನಗಂಡು ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬಹುದು. ರಾಷ್ಟ್ರಪತಿಗಳ ತುರ್ತು ಮಧ್ಯ ಪ್ರವೇಶಕ್ಕೆ 1949ರ ಸಂವಿಧಾನ ಸಭೆಯಲ್ಲಿ ಚರ್ಚೆಗಳು ನಡೆದಿವೆ. 

ಬಿ ಆರ್ ಅಂಬೇಡ್ಕರ್ ಅವರು ಆಗಸ್ಟ್ 3, 1949 ರಂದು ನಡೆದ ಸಂವಿಧಾನ ಸಭೆಯಲ್ಲಿ ಈ ಅತೀ ವಿಶಿಷ್ಟವಾದ ನಿಬಂಧನೆಯ ಬಗ್ಗೆ ವ್ಯಾಖ್ಯಾನಿಸಿದ್ದಾರೆ. ”ನಾವು ಸಂವಿಧಾನದ ಸಾಮಾನ್ಯ ತತ್ವಗಳನ್ನು ಪರಿಗಣಿಸುತ್ತಿದ್ದ ಸದನವು ರಾಷ್ಟ್ರಪತಿಗಳ ತುರ್ತು ಮಧ್ಯ ಪ್ರವೇಶಕ್ಕೆ ಒಪ್ಪಿದೆ ಎಂದು ಸದನಕ್ಕೆ ನೆನಪಿಸುವ ಮೂಲಕ ನಾನು ಪ್ರಾರಂಭಿಸಬಹುದು ಎಂದು ನಾನು ಭಾವಿಸುತ್ತೇನೆ. ಸಂವಿಧಾನವು ಸಂವಿಧಾನದ ವಿಘಟನೆಗೆ ಕೆಲವು ಆಡಳಿತ ವ್ಯವಸ್ಥೆಯನ್ನು ಒದಗಿಸಬೇಕು. 277-ಎ ವಿಧಿಯನ್ನು ಪರಿಚಯಿಸಲು ಅಗತ್ಯವಾದ ಪರಿಣಾಮವಾಗಿ, ಆಡಳಿಯ ವ್ಯವಸ್ಥೆ ವಿಫಲವಾಗಿದೆ ಎಂದು ರಾಜ್ಯಪಾಲರಿಂದ ವರದಿಯಾಗಿಲ್ಲವೆಂದರೂ ರಾಷ್ಟ್ರಪತಿಗಳು ತಮ್ಮ ಜ್ಞಾನದೊಳಗೆ ಕೆಲವು ಸತ್ಯಗಳನ್ನು ಪಡೆದಾಗಲೂ ನಾವು ರಾಷ್ಟ್ರಪತಿಗೆ ಅವರ ಅಧಿಕಾರದ ಅನುಸಾರ ಕಾರ್ಯನಿರ್ವಹಿಸಲು ಸ್ವಾತಂತ್ರ್ಯವನ್ನು ನೀಡಬೇಕು ಹಾಗೂ ಅವರು ತಮ್ಮ ಕರ್ತವ್ಯವನ್ನು ಪರಿಪೂರ್ಣವಾಗಿ ನಿರ್ವಹಿಸಬೇಕು.”

Advertisements

ಮಣಿಪುರ ಏಕೆ ಭಿನ್ನವಾಗಿದೆ ಎಂದು ಗೊತ್ತಾಗುತ್ತಿದೆ, ರಾಷ್ಟ್ರಪತಿ ದ್ರೌಪತಿ ಮುರ್ಮು ಕೂಡ ತಮ್ಮ ಸಾಂವಿಧಾನಿಕ ಕಾರ್ಯಗಳ ಅಡಿಯಲ್ಲಿ ಎಚ್ಚೆತ್ತು ಕಾರ್ಯನಿರ್ವಹಿಸಬೇಕಿದೆ. ಆದಷ್ಟು ಶೀಘ್ರದಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವ ಅಧಿಕಾರವನ್ನು ಅವರು ಹೊಂದಿದ್ದಾರೆ. ಸಾಮಾನ್ಯ ಜನರಿಗೆ ಉಂಟಾಗುತ್ತಿರುವ ಈ ರೀತಿಯ ನಿರಂತರ ಹಿಂಸೆ ಭಾರತದ ಯಾವುದೇ ರಾಜ್ಯವು ಕಂಡಿಲ್ಲ. ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ದಂಗೆಗಳ ಕಾರಣದಿಂದಾಗಿ ಹಿಂಸಾಚಾರವು ಬಹಳ ಹಿಂದೆಯೇ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯು ಅವ್ಯಾಹತವಾಗಿ ಮುಂದುವರೆಯುತ್ತಿದೆ. ಆದರೆ ಮಣಿಪುರದ ಪರಿಸ್ಥಿತಿ ವಿಭಿನ್ನವಾಗಿದ್ದು, ಸಾಮಾನ್ಯ ಜನರು ಹಿಂಸಾಚಾರಕ್ಕೆ ಬಲಿಯಾಗುವುದು ಮಾತ್ರವಲ್ಲದೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಿಂಸಾಚಾರದಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

ಕೆಲವೊಂದು ಕಾರಣಗಳಲ್ಲಿ ರಾಷ್ಟ್ರಪತಿಗಳು ತುರ್ತಾಗಿ ಮಧ್ಯ ಪ್ರವೇಶಿಸುವುದರ ಬಗ್ಗೆ 1949 ರ ಆಗಸ್ಟ್ 3 ಮತ್ತು 4ರಂದು ನಡೆದ ಸಂವಿಧಾನ ಸಭೆಯಲ್ಲಿ ಗಂಭೀರ ಚರ್ಚೆಗಳಾಗಿವೆ. ಅಂದಿನ ಸಭೆಯಲ್ಲಿ ಕರ್ನಾಟಕ ಮೂಲದ ಭಾರತರ ಹಿರಿಯ ರಾಜಕಾರಣಿ ಹಾಗೂ ಸಂವಿಧಾನ ಸಭೆಯ ಸದಸ್ಯರಾಗಿದ್ದ ಹೆಚ್ ವಿ ಕಾಮತ್‌ ಅವರು ”ರಾಷ್ಟ್ರಪತಿಗೆ ಮಧ್ಯ ಪ್ರವೇಶಿಸಲು ಅಧಿಕಾರ ನೀಡುವುದು ಸಾಂವಿಧಾನಿಕ ಅಪರಾಧ” ಎಂದು ಹೇಳಿದ್ದರು. ಮತ್ತೊಬ್ಬ ಸಂವಿಧಾನ ಸಭೆಯ ಸದಸ್ಯರಾದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌ ಅವರು ರಾಷ್ಟ್ರಪತಿಗಳ ಮಧ್ಯಪ್ರವೇಶವನ್ನು ಬಲವಾಗಿ ಸಮರ್ಥಿಸಿಕೊಂಡು, ‘ಮೊದಲನೆಯದಾಗಿ ಈ ವಿಧಿಯನ್ನು ಏಕೆ ಇಡಲಾಗಿದೆ ಎಂಬುದನ್ನು ವಿವರಿಸುತ್ತೇನೆ. ಒಕ್ಕೂಟ ವ್ಯವಸ್ಥೆಯ ಕರ್ತವ್ಯ ಸಂವಿಧಾನವನ್ನು ಕಾಪಾಡಬಹುದು. ಯಾವುದೇ ಪ್ರದೇಶವಾಗಿದ್ದರೂ ಸಂವಿಧಾನದ ಸರಿಯಾದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ತೊಂದರೆಗಳಿದ್ದರೆ, ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಸ್ಪಷ್ಟ ಕರ್ತವ್ಯವಾಗಿದೆ’ ಎಂದು ತಿಳಿಸಿದ್ದರು.

ಮತ್ತೊಬ್ಬ ಸಂವಿಧಾನ ಸಭೆಯ ಸದಸ್ಯರಾದ ಕೆ. ಸಂತಾನಂ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಈಗ, ಈ ವಿಧಿಯನ್ನು ಕಾರ್ಯರೂಪಕ್ಕೆ ತರಬಹುದಾದ ಸಂದರ್ಭಗಳನ್ನು ನಾವು ವಿಶಾಲವಾಗಿ ವಿಶ್ಲೇಷಿಸೋಣ. ರಾಜ್ಯದಲ್ಲಿ ಸರ್ಕಾರದ ಭೌತಿಕ ಸ್ಥಗಿತ ಇರಬಹುದು, ಉದಾಹರಣೆಗೆ, ವ್ಯಾಪಕವಾದ ಆಂತರಿಕ ತೊಂದರೆ ಅಥವಾ ಬಾಹ್ಯ ಆಕ್ರಮಣ ಅಥವಾ ಕೆಲವು ಕಾರಣಗಳಿಗಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಾಧ್ಯವಿರುವುದಿಲ್ಲ. ಈ ಸಂದರ್ಭದಲ್ಲಿ, ಪ್ರಾಂತೀಯ ಸರ್ಕಾರಕ್ಕೆ ಕಾರ್ಯನಿರ್ವಹಿಸುವ ಅಧಿಕಾರವಿರುವುದಿಲ್ಲ. ಕೇಂದ್ರ ಸರ್ಕಾರ ಮಾತ್ರ ಅಧಿಕಾರ ನಿರ್ವಹಿಸಬಹುದಾಗಿದೆ. ಆದ್ದರಿಂದ ಈ ವಿಧಿಯನ್ನು ಆಕ್ಷೇಪಿಸಲಾಗದು ಮತ್ತು ಸಂಪೂರ್ಣವಾಗಿ ಅವಶ್ಯಕವಾಗಿರುತ್ತದೆ. ಇದಿಲ್ಲದಿದ್ದರೆ ಇಡೀ ಆಡಳಿತವು ಅವ್ಯವಸ್ಥೆಯಲ್ಲಿರುತ್ತದೆ” ಎಂದು ಹೇಳಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಭಾರತದ ಮನಸ್ಥಿತಿ ಮತ್ತು ಮನೆಸ್ಥಿತಿ    

ಈ ವಿಧಿಯ ಬಗ್ಗೆ ಡಾ. ಬಿ ಆರ್ ಅಂಬೇಡ್ಕರ್‌ ಮತ್ತೊಮ್ಮೆ ಪ್ರತಿಕ್ರಿಯಿಸಿದರು. ”ಆಡಳಿತ ವ್ಯವಸ್ಥೆಯ ವೈಫಲ್ಯ ಎಂಬ ಅಂಶವನ್ನು 1935ರ ಭಾರತ ಸರ್ಕಾರ ಕಾಯ್ದೆಯಲ್ಲಿ ಬಳಸಲಾಗಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ಅದರ ವಾಸ್ತವಿಕ ಮತ್ತು ನ್ಯಾಯಯುತ ಅರ್ಥದೊಂದಿಗೆ ಸಾಕಷ್ಟು ತಿಳಿದುಕೊಳ್ಳಬೇಕು. ಇವುಗಳನ್ನು ಕಾರ್ಯರೂಪಕ್ಕೆ ತಂದರೆ ಈ ಅಧಿಕಾರವನ್ನು ಹೊಂದಿರುವ ರಾಷ್ಟ್ರಪತಿಗಳು ಪ್ರಾಂತ್ಯಗಳ ಆಡಳಿತವನ್ನು ಅಮಾನತುಗೊಳಿಸುವ ಮೊದಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ತಿಳಿಸಿದರು. ಹೀಗಾಗಿ ಅಂಬೇಡ್ಕರ್‌ ಅಂತಿಮವಾಗಿ ಪ್ರಸ್ತಾಪಿಸಿದ ನಂತರ 277-ಎ ವಿಧಿ ಅಂಗೀಕಾರವಾಯಿತು.

250ಕ್ಕೂ ಹೆಚ್ಚು ಸಾವು, ಲಕ್ಷಕ್ಕೂ ಹೆಚ್ಚು ನಿರಾಶ್ರಿತರು

2024 ರ ಮೇ 3 ಮತ್ತು ನವೆಂಬರ್ 11 ನಡುವೆ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ. ನೂರಾರು ದೇವಾಲಯಗಳು, ಚರ್ಚ್‌ಗಳು, ಮನೆಗಳು ಮತ್ತು ಇತರ ಸ್ಥಳಗಳು ನಾಶವಾಗಿವೆ. ನವೆಂಬರ್ 9 ರಂದು ಕೂಡ ಮೂರು ಮಕ್ಕಳ ತಾಯಿಯನ್ನು ಅತ್ಯಾಚಾರಗೊಳಿಸಿ ಆಕೆಯನ್ನು ಕೊಂದು 17 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.

ಈ ತಿಂಗಳ ಆರಂಭದಲ್ಲಿ ಮೈತೇಯಿ ಸಮುದಾಯದ ಶಸ್ತ್ರಸಜ್ಜಿತ ಗುಂಪೊಂದು ಕುಕಿ ಸಮುದಾಯದ ಗ್ರಾಮದ ಮೇಲೆ ದಾಳಿ ನಡೆಸಿದ ನಂತರ ಮತ್ತೆ ಹಿಂಸಾಚಾರ ಆರಂಭವಾಯಿತು. ಆ ಬಳಿಕ ಭದ್ರತಾ ಶಿಬಿರವೊಂದರ ಮೇಲೆ ಕುಕಿ ಸಮುದಾಯದವರು ದಾಳಿ ನಡೆಸಿದರು. ನಂತರದಲ್ಲಿ ಕುಕಿ ಸಮುದಾಯದವರು ಮೈತೇಯಿ ಸಮುದಾಯದ ಮಹಿಳೆಯರು ಹಾಗೂ ಮಕ್ಕಳು ಸೇರಿ ಕೆಲವರನ್ನು ಅಪಹರಿಸಿ ಹತ್ಯೆ ಮಾಡಿದರು. ಮೈತೇಯಿ ಹಾಗೂ ಕುಕಿ ಸಮುದಾಯಗಳಿಗೆ ಸೇರಿದ ಸ್ಥಳಗಳಲ್ಲಿ ಗುಂಡಿನ ಚಕಮಕಿಗಳು ನಿರಂತರವಾಗಿವೆ. ಸಾಮಾನ್ಯ ಜನರು ಆಧುನಿಕ ಶಸ್ತ್ರಾಸ್ತ್ರಗಳನ್ನು ರಾಜ್ಯದಲ್ಲಿ ಬಳಕೆ ಮಾಡುತ್ತಿದ್ದಾರೆ. ಅಪ್ರಾಪ್ತರ ಕೈಗೆ ಬಂದೂಕು, ಬಾಂಬುಗಳು ಸೇರಿವೆ.

ಸಂಘರ್ಷವನ್ನು ಶಮನಗೊಳಿಸಲು ಸರ್ಕಾರವು ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಎನ್‌ಪಿಪಿ ಆರೋಪಿಸಿ ತನ್ನ ಏಳು ಮಂದಿ ಶಾಸಕರ ಬೆಂಬಲವನ್ನು ಬಿಜೆಪಿಯ ಬಿರೇನ್ ಸಿಂಗ್ ನೇತೃತ್ವದ ಸರ್ಕಾರದಿಂದ ವಾಪಸ್‌ ಪಡೆದಿದೆ. ಬಿರೇನ್‌ ಸರ್ಕಾರಕ್ಕೆ ಬಹುಮತವಿರುವ ಕಾರಣ ಸರ್ಕಾರಕ್ಕೆ ತೊಂದರೆಯಿಲ್ಲ. ಕಳೆದ ಒಂದೂವರೆ ವರ್ಷವಾದರೂ ಪರಿಸ್ಥಿತಿಯನ್ನು ನಿಭಾಯಿಸಿಲ್ಲ ಎಂಬ ಕಾರಣಕ್ಕೆ ಸ್ವಪಕ್ಷ ಬಿಜೆಪಿಯಲ್ಲೇ ಬಿರೇನ್ ಸಿಂಗ್ ವಿರುದ್ಧ ವಿರೋಧವಿದೆ. ಕೇವಲ ಮೈತೇಯಿ ಸಮುದಾಯಕ್ಕೆ ಹೆಚ್ಚು ಸಹಕರಿಸುತ್ತಿದ್ದಾರೆ ಎಂಬ ಕಾರಣದಿಂದ ಕುಕಿ ಸಮುದಾಯದ ಕೆಲವು ಶಾಸಕರು ಸರ್ಕಾರದಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ.

ಮಣಿಪುರದ ಪರಿಸ್ಥಿತಿಯ ವಿಚಾರವಾಗಿ ಕೇಂದ್ರ ಸರ್ಕಾರವು ಶುರುವಿನಿಂದಲೂ ತಾತ್ಸಾರ ತೋರುತ್ತಿದೆ. ಗಲಭೆ ಹೆಚ್ಚುಗೊಂಡಿರುವುದರಿಂದ ಈಗ ಕೇಂದ್ರವು ರಾಜ್ಯದ ಕೆಲವು ಭಾಗಗಳಲ್ಲಿ ಅತೀ ಕರಾಳವಾದ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ’ಯನ್ನು (ಎಎಫ್‌ಎಸ್‌ಪಿಎ) ಜಾರಿಗೊಳಿಸಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಎಎಫ್‌ಎಸ್‌ಪಿಎ ಬಹಳ ಕುಖ್ಯಾತಿಯನ್ನು ಹೊಂದಿದೆ. ಅದನ್ನು ಅಲ್ಲಿ ಮತ್ತೆ ಜಾರಿಗೊಳಿಸುವುದರಿಂದ ಜನರಲ್ಲಿನ ಅಪನಂಬಿಕೆ ಮತ್ತಷ್ಟು ಹೆಚ್ಚಾಗುವ ಅಪಾಯವೂ ಇದೆ. 2022ರ ಏಪ್ರಿಲ್‌ನಿಂದ 2023ರ ಏಪ್ರಿಲ್‌ ನಡುವೆ ಮಣಿಪುರ ರಾಜ್ಯದ ಮೇಲೆ ಹೇರಲಾಗಿದ್ದ ‘ಎಎಫ್‌ಎಸ್‌ಪಿಎ’ಯನ್ನು ವಾಪಸ್‌ ಪಡೆಯಲಾಗಿತ್ತು. ಆದರೆ, ನಂತರ ಹಿಂಸಾಚಾರ ಹೆಚ್ಚಾಗಿದ್ದರಿಂದ 19 ಪೊಲೀಸ್‌ ಠಾಣೆಗಳ ವ್ಯಾಪ್ತಿಯನ್ನು ಬಿಟ್ಟು ರಾಜ್ಯದಾದ್ಯಂತ ಅಕ್ಟೋಬರ್‌ 1ರಿಂದ ಕಾಯ್ದೆಯನ್ನು ಮರು ಜಾರಿಗೊಳಿಸಿ ಮಣಿಪುರ ಸರ್ಕಾರ ಆದೇಶ ಹೊರಡಿಸಿತ್ತು. ಈ 19 ಠಾಣೆಗಳ ವ್ಯಾಪ್ತಿಯ ಪೈಕಿ ಆರು ಠಾಣೆಗಳ ವ್ಯಾಪ್ತಿಯಲ್ಲಿ ಈಗ ಕಾಯ್ದೆಯನ್ನು ಮತ್ತೆ ಜಾರಿಗೆ ತರಲಾಗಿದೆ. ಈ ಠಾಣೆಗಳ ವ್ಯಾಪ್ತಿಯನ್ನು ‘ಸಂಘರ್ಷ ಪೀಡಿತ ಪ್ರದೇಶ’ ಎಂದು ಗುರುತಿಸಲಾಗಿದೆ. 

ಕಾಯ್ದೆಯ ಅಡಿಯಲ್ಲಿ ಯಾವುದೇ ಜಿಲ್ಲೆ ಅಥವಾ ಪ್ರದೇಶವನ್ನು ‘ಸಂಘರ್ಷ ಪೀಡಿತ’ ಎಂದು ಘೋಷಿಸಿದರೆ, ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಯಾವುದೇ ಕಠಿಣ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಭದ್ರತಾ ಪಡೆಗಳಿಗೆ ಈ ಕಾಯ್ದೆ ನೀಡುತ್ತದೆ. ಅಲ್ಲಿ ಸಶಸ್ತ್ರ ಪಡೆಗಳು ಶೋಧಕಾರ್ಯ ನಡೆಸಬಹುದು, ಶಂಕಿತರನ್ನು ಬಂಧಿಸಬಹುದು, ಗುಂಡಿನ ದಾಳಿಯನ್ನೂ ನಡೆಸಬಹುದು.

ಮಣಿಪುರ, ಅಸ್ಸಾಂ ಸೇರಿದಂತೆ ಏಳು ಈಶಾನ್ಯ ರಾಜ್ಯಗಳನ್ನು ಗುರಿಯಾಗಿಸಿಕೊಂಡೇ 1958ರಲ್ಲಿ ಈ ಕಾಯ್ದೆಯನ್ನು ರೂಪಿಸಲಾಗಿತ್ತು. ಸಶಸ್ತ್ರ ಪಡೆಗಳು ಈ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಜನ ಸಾಮಾನ್ಯರ ಮೇಲೆ ದೌರ್ಜನ್ಯ ಎಸಗುತ್ತಿವೆ ಎಂಬ ಆರೋಪ ಹಿಂದಿನಿಂದಲೂ ಕೇಳಿಬರುತ್ತಿತ್ತು. ಇದಕ್ಕಾಗಿ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್‌ ಶರ್ಮಿಳಾ ಈ ಕಾಯ್ದೆಯ ವಿರುದ್ಧ 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

230507122250 03 manipur clashes 0504

ರಾಜ್ಯದಲ್ಲಿನ ಸಮಸ್ಯೆಯನ್ನು ಅಧಿಕಾರಿಗಳು ಅಥವಾ ಸಶಸ್ತ್ರ ಪಡೆಗಳು, ಕಠಿಣ ಕಾನೂನುಗಳು, ಕರ್ಫ್ಯೂ ಅಥವಾ ಮೂಲಭೂತ ಸೇವೆಗಳನ್ನು ಸ್ಥಗಿತಗೊಳಿಸುವ ಮೂಲಕ ಬಗೆಹರಿಸಲು ಸಾಧ್ಯವಿಲ್ಲ. ಮೈತೇಯಿ ಹಾಗೂ ಕುಕಿ ಸಮುದಾಯಗಳ ರಾಜಕೀಯ ನಾಯಕರು, ಮುಖಂಡರ ಸಭೆ ಅತ್ಯಗತ್ಯವಾಗಿದೆ. ಎರಡೂ ಸಮುದಾಯಗಳ ನೋವುಗಳನ್ನು ಮುಖಂಡರುಗಳು, ಅಧಿಕಾರಿಗಳು ಅರ್ಥಮಾಡಿಕೊಂಡು ಗಲಭೆಯನ್ನು ಶಾಶ್ವತವಾಗಿ ಪರಿಹರಿಸಬೇಕಿದೆ. ಆದರೆ ಇದ್ಯಾವುದು ಸಮರ್ಪಕವಾಗಿ ಕೈಗೊಳ್ಳಲಾಗುತ್ತಿಲ್ಲ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮಣಿಪುರ – ಭಾರತವನ್ನು ದೇಶವಾಗಿ ಉಳಿಸಿಕೊಳ್ಳಲು ಶಾಂತಿ, ಸೋದರತೆ ಅಗತ್ಯವೆಂದು ಪ್ರಧಾನಿ ಅರಿತಿರುವರೇ?

ಮಣಿಪುರದ ಗಲಭೆ ಸಂಬಂಧವಾಗಿ 27 ವಿಚಾರಣೆಗಳು ನಡೆದಿದ್ದರೂ ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ನಿಧಾನ ಮತ್ತು ನಿಷ್ಪಲವಾಗಿದೆ. ಮೂಲಭೂತ ಹಕ್ಕುಗಳ ಅಂತಿಮ ರಕ್ಷಕನ ಕಣ್ಗಾವಲಿನಡಿಯಲ್ಲಿ, ಮಣಿಪುರದ 30 ಲಕ್ಷ ಜನರ ಮೂಲಭೂತ ಹಕ್ಕುಗಳು ಮತ್ತು ಅವರ ಜೀವನ, ಸ್ವಾತಂತ್ರ್ಯ, ಘನತೆ ಮತ್ತು ಶಾಂತಿಯನ್ನು ಕಸಿದುಕೊಳ್ಳುವ, ಅವ್ಯವಸ್ಥೆಯು ಮುಂದುವರಿಯುತ್ತದೆ ಎಂಬುದು ಆಘಾತಕಾರಿಯಾಗಿದೆ. ಪೀಠದಲ್ಲಿದ್ದ ಉನ್ನತ ನ್ಯಾಯಾಧೀಶರು ಏಕೆ ಮೂಕ ಪ್ರೇಕ್ಷಕರಾಗಿದ್ದಾರೆ? ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ದುರ್ಬಲವಾಗುತ್ತಿದೆ ಎಂಬುದನ್ನು ಇದು ತೋರಿಸುವುದಿಲ್ಲವೇ?

ಮಣಿಪುರದಲ್ಲಿ ನಡೆಯುತ್ತಿರುವ ಮತೀಯ ಹಿಂಸಾಚಾರ ಭಾರತ ದೇಶಕ್ಕೆ ಕಳವಳಕಾರಿಯಾಗಿದೆ. ಈ ಹತ್ಯಾಕಾಂಡವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ ಸಾಧ್ಯವಾಗದಿರುವುದು ಅಚ್ಚರಿ ಮತ್ತು ಆಘಾತಕಾರಿ ಸಂಗತಿ. ಕೇಂದ್ರ ಸರ್ಕಾರವು ಬಹಳ ಹಿಂದೆಯೇ ನಿರ್ಣಾಯಕವಾಗಿ ಕಾರ್ಯನಿರ್ವಹಿಸಬೇಕಿತ್ತು. ಶಾಂತಿ, ಸೌಹಾರ್ದತೆ, ನ್ಯಾಯ, ಪರಿಹಾರ ಮತ್ತು ಪುನರ್ವಸತಿಯನ್ನು ಮರಳಿ ತರಲು ಪ್ರಧಾನಿ ಶ್ರಮಿಸಬೇಕಿತ್ತು. ಆದರೆ ಚುನಾವಣೆ, ವಿದೇಶಿ ಪ್ರವಾಸಗಳಿಗೆ ತೋರುವ ಆಸಕ್ತಿಯನ್ನು ಮಣಿಪುರಕ್ಕೆ ಮಾತ್ರ ಇಲ್ಲಿಯವರೆಗೂ ತೋರಿಲ್ಲ. ಇವೆಲ್ಲ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ರಾಷ್ಟ್ರಪತಿಗಳು ತಕ್ಷಣ ಮಧ್ಯ ಪ್ರವೇಶಿಸಿ ಸುವ್ಯಸ್ಥಿತ ರೀತಿಯಲ್ಲಿ 356ನೇ ವಿಧಿ ಬಗ್ಗೆ ಕ್ರಮಕೈಗೊಳ್ಳಬೇಕಾದ ಅಗತ್ಯವಿದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X