ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(ಎಐಕೆಕೆಎಂಎಸ್) ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿ ವರಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಪೋರೇಟ್ ಪರವಾದ ಕೃಷಿ ನೀತಿಗಳನ್ನು ಹಿಂಪಡಿಯಲು ಒತ್ತಾಯಿಸಿ ಮತ್ತು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಜೆಲ್ಲೆಯ ಎಲ್ಲಾ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ, ನೀಡಬೇಕು, ಮಳೆಯಿಂದ ಹಾನಿಯಾದ ಬೆಳೆಗೆ ಬೆಳೆ ನಷ್ಟ ಪರಿಹಾರ ನೀಡಿಬೇಕು, ಜೆಲ್ಲೆಯಲ್ಲಿ ಹದಗೆಟ್ಟ್ ರಸ್ತೆಗಳನ್ನು ದುರಸ್ತಿ ಮಾಡಬೇಕು. ರೈತರು ಬೆವರು ಸುರಿಸಿ ದೇಶದ ಜನರಿಗೆ ಅನ್ನ ಹಾಕುತ್ತಾರೆ. ಆದ್ದರಿಂದ ‘ಅನ್ನದಾತ’ರ ಯೋಗಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳುವುದು ಪ್ರತಿಯೊಂದು ನಾಗರಿಕ ಸಮಾಜದ ಆದ್ಯ ಕರ್ತವ್ಯ. ಆದರೆ ಇಲ್ಲಿಯವರೆಗೆ ಆಳಿರುವ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಮೂಲಭೂತ ಜವಾಬ್ದಾರಿಯನ್ನು ನಿರಾಕರಿಸುತ್ತಾ ಬಂದಿರುವುದು ದುರಂತದ.
ಇಡೀ ದೇಶಾದ್ಯಂತ ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ಅತ್ಯಂತ ಸಂಕಟಮಯ ಜೀವನ ನಡೆಸುತ್ತಿದ್ದು, ಸಾಲದ ಹೊರೆಯಿಂದಾಗಿ ಸಾವಿರಾರು ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಪ್ರತಿದಿನವೂ ಬೀಜ, ಗೊಬ್ಬರ, ಕೀಟನಾಶಕಗಳಂತಹ ಕೃಷಿ ಒಳಸುರಿಗಳ ಬೆಲೆಗಳು ಗಗನಕ್ಕೇರುತ್ತಿವೆ. ಆದರೆ ಯಾವ ಸರ್ಕಾರಗಳೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕುವಂತೆ ಕ್ರಮಗಳನ್ನು ತೆಗೆದುಕೊಳ್ಳದಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಜಿಲ್ಲೆಯ ಎಲ್ಲಾ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಲು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು. ರೈತರ ಮೇಲಿನ ಅನಾವಶ್ಯಕ ಕೇಸ್ಗಳನ್ನು ಹಿಂಪಡೆಯಬೇಕು. ಗೋಂಜಾಳ , ಹತ್ತಿ, ಭತ್ತ, ಸೋಯಾಬಿನ್ , ಬೆಳೆಗೆ ಬೆಂಬಲ ಬೆಲೆಯನ್ನು ನೀಡಬೇಕು. ಕೃಷಿ ಕಾರ್ಮಿಕರಿಗಾಗಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಈ ವರದಿ ಓದಿದ್ದೀರಾ? ಮನುವಾದದ ಮಡಿವಂತಿಕೆ, ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಬಂಡಾಯಗಾರ ಕನಕದಾಸ
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಬೆಳೆ ಪರಿಹಾರ ಇನ್ನು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಜಮಾ ಆಗುತ್ತದೆ. ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಜೆಲ್ಲಾ ಮಟ್ಟದಲ್ಲಿ ಬಗೆಹರಿಸುವ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಉಪಾಧಕ್ಷ ಹನುಮೇಶ ಹುಡೇದ , ಜಿಲ್ಲಾ ಸಮಿತಿ ಸದಸ್ಯರಾದ ಅಲ್ಲಾವುದೀನ್ ಅಡ್ಲಿ, ಕಲ್ಲಪ್ಪ, ಗೌರಮ್ಮ, ಅಣ್ಣಪ್ಪ ಕುಲಕರ್ಣೀ, ಶಿವಲಿಂಗಪ್ಪ ಉಣಕಲ್, ಸಜ್ಜನ್, ಶ್ರೀದೇವಿ ದೊಡ್ಡಮನೆ, ಬಸ್ಸಪ್ಪ ನೇಕಾರ, ರೈತರು ಮುಂತಾದವರು ಇದ್ದರು.
ವರದಿ: ಹನುಮೇಶ ಹುಡೇದ