ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತನ್ನು ಮರೆತು ದ್ರೋಹವೆಸಿಗಿವೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಹೋರಾಟದ ಕರೆಯ ಮೇರೆಗೆ ನವೆಂಬರ್ 26ರಂದು ರೈತ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಎಚ್ ಆರ್ ಬಸವರಾಜಪ್ಪ ಹೇಳಿದರು.
ಶಿವಮೊಗ್ಗ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕೇಂದ್ರ ಸರ್ಕಾರ ರೈತರ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈವರೆಗೂ ಈಡೇರಿಸಿಲ್ಲ. ರಾಜ್ಯ ಸರ್ಕಾರವೂ ಕೂಡಾ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಹೇಳಿ ಈವರೆಗೂ ಹಿಂಪಡೆದಿಲ್ಲ” ಎಂದು ಆರೋಪಿಸಿದರು.
“ಕಳಸ ಬಂಡೂರಿ ಮಹಾದಾಯಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಎಂಎಸ್‌ಪಿಯನ್ನು ಮೌಲ್ಯಾಧಾರಿತವಾಗಿ ಕಾನೂನುಬದ್ದಗೊಳಿಸಬೇಕು. ಕಾರ್ಮಿಕ ವಿರೋಧಿ ನೀತಿಗಳಹಿಂಡೆಯಬೇಕು. ಶರಾವತಿ ಮುಳುಗಡೆ ಸಂತ್ರಸ್ಥರು ಹಾಗೂ ಬಗರ್ ಹುಕುಂ ಸಾಗುವಾಳಿದಾರರನ್ನು ಒಕ್ಕಲೆಬ್ಬಿಸಬಾರದು. ಇನ್ನೂ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಸಚಿವರು, ಅಧಿಕಾರಿಗಳು, ರೈತ ಹಾಗೂ ಕಾರ್ಮಿಕ ಸಂಘಟನೆ, ಪ್ರಗತಿಪರ ಸಂಘಟನೆಗಳ ಮುಖಂಡರು ಒಳಗೊಂಡಂತೆ 3 ದಿನಗಳ ಜನತಾ ಅಧಿವೇಶವನ್ನು ಕರೆಯಬೇಕು. ಈ ಎಲ್ಲ ವಿಚಾರವಾಗಿ ರಾಷ್ಟ್ರಾದ್ಯಂತ 500ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಈ ಎಚ್ಚರಿಕಾ ರ್‍ಯಾಲಿ ನಡೆಸುತ್ತಿದ್ದು, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ನಾವೂ ಕೂಡಾ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ದಕ್ಷಿಣ | ಪಟ್ಟಾರೆಡ್ಡಿಪಾಳ್ಯ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಒತ್ತಾಯ: ರೈತ ಸಂಘದಿಂದ ಪ್ರತಿಭಟನೆ
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ ಎಂ ಚಂದ್ರಪ್ಪ, ಜಿಲ್ಲಾಧ್ಯಕ್ಷರಾದ ಕೆ ರಾಘವೇಂದ್ರ,
ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಜಿಲ್ಲಾ ಹಸಿರುಸೇನೆ ಸಂಚಾಲಕ ಎಂ ಡಿ ನಾಗರಾಜ್, ತಾಲೂಕು ಅಧ್ಯಕ್ಷ ಸಿ ಚಂದ್ರಪ್ಪ ಸೇರಿದಂತೆ ಇತರರು ಇದ್ದರು.