ಜಾರ್ಖಂಡ್ ವಿಧಾನಸಭೆಗೆ ಚುನಾವಣೆಗೆ ಬುಧವಾರ 2ನೇ (ಕೊನೆಯ) ಹಂತದ ಮತದಾನ ಮುಗಿದಿದೆ. ಆದಿವಾಸಿ, ಬುಡಕಟ್ಟು ಸಮುದಾಯಗಳು ಹೆಚ್ಚಾಗಿ ನೆಲೆಸಿರುವ ಧನ್ಬಾದ್ ಜಿಲ್ಲೆಯ ನಿರ್ಸಾ ಮತ್ತು ಸಿಂದ್ರಿ ಭಾಗದಲ್ಲಿ ನ.20ರಂದು ಮತದಾನ ನಡೆದಿದೆ. ಈ ಭಾಗದಲ್ಲಿ ನೆಲೆಯಿದ್ದರೂ, ಒಡೆದು ಹಂಚಿಹೋಗಿದ್ದ ಎಡ ಪಕ್ಷಗಳು ಪ್ರಸ್ತುತ ಚುನಾವಣೆಯಲ್ಲಿ ಒಗ್ಗೂಡಿದ್ದು, ಬಿಜೆಪಿಯ ಹಾದಿಯನ್ನು ಜಟಿಲಗೊಳಿಸಿವೆ. ಅದು, ಮತದಾನದಲ್ಲಿಯೂ ಕಂಡುಬಂದಿದೆ.
ಈ ಚುನಾವಣೆಯಲ್ಲಿ, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡಬಾರದು ಎಂಬ ಉದ್ದೇಶದಿಂದ ಎಡ ಪಕ್ಷಗಳು ಭಾರೀ ಕಸರತ್ತು ನಡೆಸುತ್ತಿದ್ದವು. ಮಾರ್ಕ್ಸ್ವಾದಿ ಸಮನ್ವಯ ಸಮಿತಿ (MCC) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್) [CPI(ML)] ಒಗ್ಗೂಡಿ ಪ್ರಬಲ ಶಕ್ತಿಯಾಗಿ ಚುನಾವಣಾ ಕಣಕ್ಕಿಳಿದಿದ್ದವು. ಕಳೆದ ಸೆಪ್ಟೆಂಬರ್ನಲ್ಲಿ ಧನ್ಬಾದ್ನಲ್ಲಿ ನಡೆದ ‘ಏಕ್ತಾ ರ್ಯಾಲಿ’ಯಲ್ಲಿ ಔಪಚಾರಿಕವಾಗಿ ಎರಡು ಎಡ ಪಕ್ಷಗಳು ವಿಲೀನಗೊಂಡಿದ್ದವು. ಎರಡು ಬಾರಿ ಶಾಸಕರಾಗಿದ್ದ ಅರೂಪ್ ಚಟರ್ಜಿ ಅವರನ್ನು ನಿರ್ಸಾ ಕ್ಷೇತ್ರದಿಂದಲೂ, ಮಾಜಿ ಶಾಸಕ ಆನಂದ್ ಮಹತೋ ಅವರ ಮಗ ಚಂದ್ರದೇವ್ ಅವರನ್ನು ಸಿಂದ್ರಿ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿವೆ. ಆದಾಗ್ಯೂ, CPI(ML) ‘ಇಂಡಿಯಾ’ ಮೈತ್ರಿಕೂಟದ ಭಾಗವೂ ಆಗಿದ್ದು, ಧನ್ವಾರ್ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ, ಅದೇ ಕ್ಷೇತ್ರದಲ್ಲಿ ಮೈತ್ರಿಯ ಪಾಲುದಾರ ಪಕ್ಷ ಜೆಎಂಎಂ ಕೂಡ ಸ್ಪರ್ಧಿಸಿದೆ. ಅದರಾಚೆಗೂ ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇಲ್ಲದಂತೆ ಮಾಡುವ ಪ್ರಯತ್ನದಲ್ಲಿವೆ.
”ಎಂಸಿಸಿ ಮತ್ತು ಸಿಪಿಐ (ಎಂಎಲ್) ಎರಡೂ ಒಂದೇ ಸಮಯದಲ್ಲಿ ರಾಜ್ಯದಲ್ಲಿ ನೆಲೆ ಕಂಡುಕೊಂಡಿದ್ದ ಪಕ್ಷಗಳು. ವಿಭಿನ್ನ ಕ್ಷೇತ್ರಗಳಲ್ಲಿ ಒಂದೇ ಸೈದ್ಧಾಂತಿಕ ಆಧಾರದ ಮೇಲೆ ಹೋರಾಡುತ್ತಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ನಮ್ಮ ಹೋರಾಟವನ್ನು ಮುಂದಕ್ಕೆ ಕೊಂಡೊಯ್ಯಲು, ಜಾರ್ಖಂಡ್ನ ಮೂಲ ಉದ್ದೇಶವನ್ನು ಅರಿತು ಹೋರಾಡಲು ಈಗ ಒಗ್ಗೂಡಿವೆ. ಜೊತೆಗೆ, ಜಾರ್ಖಂಡ್ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳನ್ನು ಮೋದಿ ಸ್ನೇಹಿತರಿಗೆ (ಅಂಬಾನಿ-ಅದಾನಿ) ಹೇಗೆ ನೀಡಲಾಗುತ್ತಿದೆ ಎಂಬುದನ್ನು ಜನರಿಗೆ ಅರ್ಥೈಸಲು ಮೈತ್ರಿ ಅಗತ್ಯವಿದೆ” ಎಂದು ಎಂಸಿಸಿ ನಾಯಕ ಚಂದ್ರದೇವ್ ಮಹತೋ ಹೇಳಿದ್ದಾರೆ.
“ಇತ್ತೀಚಿನ ಚುನಾವಣೆಗಳಲ್ಲಿ, ಬಿಜೆಪಿ ವಿರೋಧಿ ಮತಗಳು ಚದುರಿಹೋಗುತ್ತವೆ. ಇದನ್ನು ತಡೆಯಲು, ‘ಇಂಡಿಯಾ’ ಮೈತ್ರಿಕೂಟ ರಚನೆಯಾಗಿದೆ. ಒಟ್ಟಾಗಿ ಹೋರಾಡುತ್ತಿದೆ. ಎರಡೂ ಪಕ್ಷಗಳ ವಿಲೀನದ ನಂತರ, ಎಲ್ಲ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟದ ಇತರ ಪಾಲುದಾರರು ಕೂಡ ಬಿಜೆಪಿಯ ಭದ್ರಕೋಟೆಯನ್ನು ಉರುಳಿಸಲು ಶ್ರಮಿಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಜಾರ್ಖಂಡ್ ರಚನೆಯಾದಾಗಿನಿಂದ ಸಿಂದ್ರಿಯಲ್ಲಿ ಬಿಜೆಪಿ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಂಡಿದೆ. ಚಂದ್ರದೇವ್ ಮೊಹತೋ ಅವರ ತಂದೆ, ಮಾಜಿ ಶಾಸಕ ಆನಂದ್ ಮೊಹತೋ ಅವರು ಕ್ಷೇತ್ರದಲ್ಲಿ ಮೂರು ಬಾರಿ ಬಿಜೆಪಿ ಮತ್ತು ಒಮ್ಮೆ ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ) ವಿರುದ್ಧ ಸೋತಿದ್ದರು. ಜೆವಿಎಂ ಈಗ ಬಿಜೆಪಿ ಜೊತೆ ವಿಲೀನವಾಗಿದೆ. 2019ರಲ್ಲಿ ಆನಂದ್ ಮಹತೋ ಬಿಜೆಪಿಯ ಇಂದ್ರಜಿತ್ ಮಹತೋ ವಿರುದ್ಧ ಕೇವಲ 8,253 ಮತಗಳಿಂದ ಸೋತಿದ್ದರು. ಮೂರು ವರ್ಷಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಹಾಲಿ ಶಾಸಕರು ಚುನಾವಣಾ ಕಣದಿಂದ ಹೊರಗುಳಿದಿದ್ದಾರೆ. ಇಂದ್ರಜಿತ್ ಅವರ ಬದಲಿಗೆ ಅವರ ಪತ್ನಿ ತಾರಾ ದೇವಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಸಿಂದ್ರಿಯಲ್ಲಿ ತನ್ನ ಹಿಡಿತವನ್ನು ಉಳಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ.
ಈ ವರದಿ ಓದಿದ್ದೀರಾ?: ಅಯೋಧ್ಯೆ ಸುತ್ತಮುತ್ತ ರಿಯಲ್ ಎಸ್ಟೇಟ್ ದಂಧೆ- ʼಇಂಡಿಯನ್ ಎಕ್ಸ್ಪ್ರೆಸ್ʼ ಆಸ್ಫೋಟಕ ವರದಿ!
ಕಳೆದ ಎರಡು ದಶಕಗಳಲ್ಲಿ ಸಿಂದ್ರಿ ಕ್ಷೇತ್ರವು ಬಿಜೆಪಿ ಹೆಚ್ಚು ಅವಕಾಶ ಕೊಟ್ಟಿದೆ. ನಿರ್ಸಾ ಕ್ಷೇತ್ರದಲ್ಲಿ ಸಿಪಿಐ(ಎಂಎಲ್) ತನ್ನ ನೆಲೆಯನ್ನು ಉಳಿಸಿಕೊಂಡಿದೆ. ಎಡ ಒಕ್ಕೂಟವು ಗ್ರಾಮೀಣ ಪ್ರದೇಶಗಳಲ್ಲಿ ಒಗ್ಗಟ್ಟಿನ ಶಕ್ತಿಯಾಗಿ ಕಣಕ್ಕಿಳಿದು, ಲಾಭ ಗಳಿಸಲು ಎದುರು ನೋಡುತ್ತಿದೆ. ರಾಜ್ಯದ ಇತರ ಭಾಗಗಳಲ್ಲಿ ಅಂದರೆ ನಗರ ಪ್ರದೇಶಗಳಲ್ಲಿಯೂ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಎಡಪಕ್ಷಗಳ ಒಕ್ಕೂಟವು ಮುಂದಾಗಿದೆ.
ಗಮನಾರ್ಹ ಸಂಗತಿ ಎಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಧನ್ಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದುಲೋ ಮಹತೋ ವಿರುದ್ಧ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ಅಭ್ಯರ್ಥಿ ಅನುಪಮಾ ಸಿಂಗ್ ಸೋಲುಂಡರು. ಅವರ ಸೋಲಿಗೆ ಪ್ರಮುಖ ಕಾರಣ, ಜನರು ಮೋದಿಗಾಗಿ ಮತಚಲಾಯಿಸಿದ್ದು ಎಂದು ಹೇಳಲಾಗಿದೆ.
ಆದರೆ, ವಿಧಾನಸಭಾ ಚುನಾವಣೆಗಳು ಸ್ಥಳೀಯ, ಗಂಭೀರ ವಿಚಾರಗಳ ಮೇಲೆ ನಡೆಯುವುದರಿಂದ ಇಲ್ಲಿ ಮೋದಿ ಹೆಸರು, ಮುಖ ಹೆಚ್ಚು ಕೆಲಸ ಮಾಡುವುದಿಲ್ಲ. ಸಮಸ್ಯೆಗಳೇ ಮುಖ್ಯ ವಿಚಾರಗಳಾಗಿರುತ್ತವೆ. ರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸುತ್ತೇವೆ. ಅಧಿಕಾರದಿಂದ ಹೊರಗಿಡುತ್ತೇವೆ ಎಂದು ಇಂಡಿಯಾ ಬ್ಲಾಕ್ ಮತ್ತು ಎಡ ಪಕ್ಷಗಳು ವಿಶ್ವಾಸ ಹೊಂದಿವೆ.