“ಸರ್ಕಾರದ ಹೃದಯಹೀನ ನೀತಿಗಳು ಆದಿವಾಸಿ ಯುವಜನರನ್ನು ನಕ್ಸಲೈಟ್ ಆಗುವಂತೆ ಪ್ರೇರಣೆ ನೀಡುತ್ತಿವೆ. ಸರ್ಕಾರ ಒಂದು ಕಡೆ ಮುಕ್ತವಾಹಿನಿಗೆ ಬನ್ನಿ ಎಂದು ಕಾಡಲ್ಲಿರುವ ನಕ್ಸಲರಿಗೆ ಕರೆ ನೀಡುತ್ತಿದೆ. ಮತ್ತೊಂದೆಡೆ ಶೂಟೌಟ್ ಮಾಡಿ ಹತ್ಯೆ ಮಾಡಲಾಗುತ್ತಿದೆ. ಆದಿವಾಸಿ ಹೋರಾಟಗಾರ ವಿಕ್ರಂ ಗೌಡ ಅವರನ್ನು ಬೇಟೆಯಾಡುವ ಅಗತ್ಯವೇನಿತ್ತು ಎಂದು ಸರ್ಕಾರ ಸ್ಪಷ್ಟಪಡಿಸಬೇಕು. ತಕ್ಷಣ ಎಫ್‌ಐಆರ್ ದಾಖಲಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು” ಎಂದು ಮಾಜಿ ನಕ್ಸಲರೂ ಮತ್ತು ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್ ಸರ್ಕಾರವನ್ನು ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈಗ ಸುಮ್ಮನಿದ್ದರೆ ನಾವೆಲ್ಲ ಬಹಳ ದೊಡ್ಡ ಅಪರಾಧಿಗಳಾಗುತ್ತೇವೆ. ಸರ್ಕಾರ ಬಹಳ ದೊಡ್ಡ ಅಪರಾಧ ಮಾಡಿದೆ. ದುಃಖದ ಘಟನೆಯೊಂದು ನಡೆದು ಹೋಗಿದೆ. ಮತ್ತೊಬ್ಬ ಆದಿವಾಸಿ ಯುವಕನ ಹತ್ಯೆಯಾಗಿದೆ. ಆ ಘಟನೆ ಹೇಗಾಯಿತು ಎಂದು ಮೇಲ್ಪದರದ ಬಗ್ಗೆ ಮಾತನಾಡದೇ ಸಮಸ್ಯೆಯ ಆಳಕ್ಕೆ ಹೋಗಬೇಕಾಗಿದೆ. ಮೂಲ ಪರಿಹಾರ ಏನು ಎಂದು ಕಂಡುಕೊಳ್ಳುವುದು ಸರ್ಕಾರ, ಸಮಾಜ, ಕಾಡಿನಲ್ಲಿರುವ ಸಂಗಾತಿಗಳ ಜವಾಬ್ದಾರಿ. ಮೂವರಿಗೂ ಹೊಣೆಗಾರಿಕೆ ಇದೆ” ಎಂದರು.
“ಈ ರಕ್ತಪಾತ, ಸಾವಿನ ಪರಂಪರೆ ಮುಂದುವರಿಯಬಾರದು. ಕರ್ನಾಟಕದಲ್ಲಿ ಹತ್ತು ವರ್ಷಗಳಿಂದ ಶಾಂತಿ ನೆಲೆಸಿತ್ತು. ನಾವು ನಕ್ಸಲ್ ಜೀವನದಿಂದ ಹೊರಬರಲು ಎರಡು ಮುಖ್ಯ ಕಾರಣವಿತ್ತು. ಕರ್ನಾಟಕದ ಇಡೀ ನಾಗರಿಕ ಸಮಾಜ ನಮ್ಮ ಪರವಾಗಿ ನಿಂತು ಅವಕಾಶ ಸೃಷ್ಟಿ ಮಾಡಿತ್ತು. 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅದಕ್ಕೆ ಪೂರಕವಾಗಿ ನಡೆದುಕೊಂಡಿದ್ದೂ ಕಾರಣವಾಯಿತು. ಇದೇ ಡಿಸೆಂಬರ್ 27ಕ್ಕೆ ನಾವು ಹೊರ ಬಂದು ಹತ್ತು ವರ್ಷವಾಗುತ್ತಿದೆ. ಇಷ್ಟು ದಿನ ರಕ್ತಪಾತ ನಡೆದಿರಲಿಲ್ಲ. ಆದರೆ ಇದು ಒಂದು ಕಡೆಯಿಂದ ಎಂದುಕೊಳ್ಳಬೇಡಿ. ಇದನ್ನು ಸರಿಯಾಗಿ ಅಡ್ರೆಸ್ ಮಾಡಿಲ್ಲ ಅಂದ್ರೆ, ಕರ್ನಾಟಕದಲ್ಲಿ ಮತ್ತೊಂದು ವಿದ್ಯಮಾನ ಶುರುವಾಗುತ್ತದೆ. ಕಗ್ಗತ್ತಲ ರಾತ್ರಿಯಲ್ಲಿ ಕಾಡಿನ ಒಡಲಲ್ಲಿ ಚಿಮ್ಮಿದ ಆದಿವಾಸಿ ಯುವಕನ ನೆತ್ತರ ಹನಿಗಳು ಗೃಹಮಂತ್ರಿ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಿಳಿಯಂಗಿಗಳ ಮೇಲೂ ಬಿದ್ದಿವೆ. ಅದನ್ನು ತೊಳೆದುಕೊಳ್ಳುವ ಕೆಲಸ ತಕ್ಷಣ ಮಾಡಿ” ಎಂದು ಎಚ್ಚರಿಸಿದರು.

“ವಿಕ್ರಂ ಗೌಡರನ್ನು ಹತ್ಯೆ ಮಾಡುವ ಅಗತ್ಯ ಏನಿತ್ತು. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ರು, ಅಲ್ಲೇನೋ ಸುಟ್ಟರು ಅಂಥದ್ದೇನೂ ನಡೆದಿಲ್ಲ. ಒಂದು ಕರಪತ್ರವೂ ಸಿಕ್ಕಿಲ್ಲ. ನಕ್ಸಲರ ಕಡೆಯಿಂದ ತೊಂದರೆ ಆಗಿಲ್ಲ, ದಾಳಿ ನಡೆದಿಲ್ಲ. ಸರ್ಕಾರ ಒಂದು ಕಡೆಯಿಂದ ಹೊರಬನ್ನಿ, ನಿಮ್ಮ ಕೇಸುಗಳನ್ನು ವಾಪಸ್ ಪಡೆಯುತ್ತೇವೆ, ಕಾನೂನು ನೆರವು ಕೊಡುತ್ತೇವೆ ಎಂದು ಹೇಳುತ್ತದೆ. ಪ್ಯಾಕೇಜ್ ಘೋಷಣೆ ಮಾಡುತ್ತದೆ. ಮತ್ತೊಂದು ಕಡೆಯಿಂದ ಶೂಟೌಟ್ ಮಾಡುತ್ತಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹೊರಬಂದ ನಕ್ಸಲರನ್ನು ಬಿಜೆಪಿ ಸರ್ಕಾರ ಬಂದಾಗ ಬಂಧಿಸಿದೆ. ನಿಲುಗುಳಿ ಪದ್ಮನಾಭ, ಕನ್ಯಾಕುಮಾರಿ ಎಂಬ ಯುವತಿಯನ್ನು ಬಂಧಿಸಿ ಈಗಲೂ ಜೈಲಿನಲ್ಲಿಟ್ಟಿದ್ದಾರೆ. ಕನ್ಯಾಕುಮಾರಿ ಜೈಲಿಗೆ ಹೋಗುವಾಗ ಜೊತೆಗೆ ಒಂದು ವರ್ಷದ ಮಗು ಇತ್ತು. ಆ ಮಗು ಆರು ವರ್ಷ ಜೈಲಿನಲ್ಲಿಯೇ ಬೆಳೆದಿದೆ. ನಂತರ ಹೋರಾಟ ಮಾಡಿ ಹೊರತರಬೇಕಾಯಿತು” ಎಂದು ವಿವರಿಸಿದರು.
ಎಲ್ಲಾ ಎನ್‌ಕೌಂಟರ್‌ಗಳಲ್ಲಿ ಶೇಕಡಾ 70ರಷ್ಟು ಫೇಕ್ ಎನ್‌ಕೌಂಟರ್‌ಗಳಾಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಪಶ್ಚಿಮಘಟ್ಟ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ದಮನ ಮಾಡಲು ವಿಕ್ರಂ ಗೌಡ ಶೂಟೌಟ್ ಮುನ್ನುಡಿಯಷ್ಟೇ ಎಂದು ಅವರು ಆರೋಪಿಸಿದರು.
“ಕಾಡಿನಲ್ಲಿ ಪ್ರತ್ಯೇಕವಾಗುಳಿಯದೆ ಜನ ಚಳವಳಿಗಳ ಮುಖ್ಯ ಧಾರೆಯ ಜೊತೆಗೂಡುವ ಕುರಿತು ಆಲೋಚಿಸಬೇಕಿರುವ ಜವಾಬ್ದಾರಿ ಕಾಡಿನ ಸಂಗಾತಿಗಳ ಮೇಲೂ ಇದೆ. ಪ್ರಜಾಸತ್ತಾತ್ಮಕ ಹೋರಾಟ ಪ್ರಜಾಸತ್ತಾತ್ಮಕವಾಗಿಯೇ ನಡೆಯಬೇಕು. ಈಗಲೂ ಮಾತುಕತೆಗೆ ಬರಲು ಅವಕಾಶವಿದೆ. ಸರ್ಕಾರ ಹೊರಬರಲು ಅನುವು ಮಾಡಿಕೊಡಬೇಕು. ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ನಾನು, ಸಿರಿಮನೆ ನಾಗರಾಜ್ ಹೊರಬಂದ ನಂತರ ಅನೇಕರು ಬಂದಿದ್ದಾರೆ. ಈಗಲೂ ಕಾಡಿನಲ್ಲಿರುವ ಸಂಗಾತಿಗಳು ಹೊರಗೆ ಬಂದು ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಬೇಕು. ಒಂದು ದಿಟ್ಟ ತೀರ್ಮಾನ ತೆಗೆದುಕೊಳ್ಳಬೇಕು. ನಿಮ್ಮ ಜೊತೆ ನಾಗರಿಕ ಸಮಾಜ ನಿಲ್ಲುತ್ತೆ. ಅದಕ್ಕೆ ನಾವೇ ಉದಾಹರಣೆ” ಎಂದರು.
ಮಲೆನಾಡು ನಕ್ಸಲ್ ಪೀಡಿತ ಅಲ್ಲ, “ಅರಣ್ಯ ಇಲಾಖೆ ಪೀಡಿತ”: ಸಿರಿಮನೆ ನಾಗರಾಜ್
ಮಾಜಿ ನಕ್ಸಲ್ ಸಿರಿಮನೆ ನಾಗರಾಜ್ ಮಾತನಾಡಿ, “ನಾನೂ ಅದೇ ಕಾಡಿನ ಮನುಷ್ಯ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಸಿರಿಮನೆ ಇದೆ. ಒಂದು ಕಾರು ಶೆಡ್ ಕಟ್ಟಿದರೂ ಅರಣ್ಯ ಇಲಾಖೆಯವರು ಬಂದು ತಡೆಯುತ್ತಿದ್ದರು. ಅರಣ್ಯ ಇಲಾಖೆಯವರು ಕಾಡಂಚಿನ ಜನರಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ಕಾಡಿನ ನಾಶ ತಡೆಯಲು ಮುಂದಾದ ಹೋರಾಟಗಾರರನ್ನು ಎಳೆದುಕೊಂಡು ಹೋಗಿ ಕೇಸು ಹಾಕುತ್ತಿದ್ದರು. ದನಗಳು ಕಾಡಿಗೆ ಹೋದರೆ ಕಟ್ಟಿ ಹಾಕುತ್ತಿದ್ದರು. ಕುಡಿಯುವ ನೀರು ಉಪಯೋಗಿಸಲೂ ಬಿಡುತ್ತಿರಲಿಲ್ಲ. ನಮ್ಮ ಮಲೆನಾಡು ನಕ್ಸಲ್ ಪೀಡಿತ ಪ್ರದೇಶ ಎಂದು ಮಾಧ್ಯಮಗಳು ಕರೆಯುತ್ತಿವೆ. ಆದರೆ, ನಿಜಕ್ಕೂ ಮಲೆನಾಡು ʼಅರಣ್ಯ ಇಲಾಖೆ ಪೀಡಿತʼ, ʼಕಂದಾಯ ಇಲಾಖೆ ಪೀಡಿತʼ. ಸರ್ಕಾರ, ಅರಣ್ಯ ಇಲಾಖೆಗಳ ಈ ದೌರ್ಜನ್ಯವೇ ಯುಕರನ್ನು ನಕ್ಸಲರನ್ನಾಗಿಸುತ್ತಿದೆ” ಎಂದು ಆರೋಪಿಸಿದರು.
ಪ್ರಜಾತಾಂತ್ರಿಕ ವೇದಿಕೆ, ಮಾನವಹಕ್ಕು ಸಂಘಟನೆಯ ಪರವಾಗಿ ಹಿರಿಯ ಚಿಂತಕ ಪ್ರೊ. ಶ್ರೀಧರ್ ಮಾತನಾಡಿದರು. “ವಿಕ್ರಂ ಗೌಡರ ಹತ್ಯೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಈ ಬಗ್ಗೆ ಯಾರಿಗೂ ಸರಿಯಾದ ಮಾಹಿತಿ ಇಲ್ಲ. ಬಂಧಿಸಿ ಕೊಂಡೊಯ್ದು ಹತ್ಯೆ ಮಾಡಲಾಗಿದೆಯೇ? ಪೊಲೀಸರು ಅವರನ್ನು ಬಂಧಿಸಬಹುದಿತ್ತು. ಮತ್ತೆ ಹರಳುಗಟ್ಟುತ್ತಿರುವ ಆದಿವಾಸಿಗಳ ಹೋರಾಟವನ್ನು ದಮನ ಮಾಡಲು, ಪ್ರಜಾತಾಂತ್ರಿಕ ಚಳವಳಿ ಆಗದಂತೆ ತಡೆಯುವ ಷಡ್ಯಂತ್ರ ನಡೆಯುತ್ತಿದೆ. ಇದು ಘೋರವಾದ ಮಾನವಹಕ್ಕು ಉಲ್ಲಂಘನೆ. ಇದನ್ನು ಪ್ರಜಾಸತ್ತಾತ್ಮಕವಾಗಿಯೇ ನಿರ್ವಹಿಸಬೇಕು. ಸರ್ಕಾರ ಈ ಬಗ್ಗೆ ಚಿಂತಿಸಬೇಕು. ಶಸ್ತ್ರಾಸ್ತ್ರ ಹೋರಾಟ ಮಾಡುವವರಿಗೆ ಮನವಿ ಏನೆಂದರೆ, ಹಿಂದೆ ದೊರೆಸ್ವಾಮಿ, ಎ ಕೆ ಸುಬ್ಬಯ್ಯ, ಗೌರಿ ಲಂಕೇಶ್ ನೇತೃತ್ವದಲ್ಲಿ ಮಾತುಕತೆ ಮಾಡಿ ಹಲವರನ್ನು ಹೊರತಂದಂತೆ ಮಾಡಲು ನಮ್ಮನ್ನು ಸಂಪರ್ಕಿಸಿ. ನಾವು ನೆರವು ನೀಡಲು ಸಿದ್ಧ” ಎಂದರು.
- ನಾಗರಿಕರಾಗಿ ನಮ್ಮ ಹೊಣೆ
ಕಳೆದ 50 ವರ್ಷಗಳಲ್ಲಿ ಕರ್ನಾಟಕವನ್ನು ಅನೇಕ ಪ್ರಖರ ಜನ ಚಳವಳಿಗಳು ಮುನ್ನಡೆಸಿಕೊಂಡು ಬಂದಿವೆ. ಅದರಲ್ಲಿ ದೊಡ್ಡ ಮಟ್ಟಕ್ಕೆ ಅಲ್ಲದಿದ್ದರೂ ಸಣ್ಣ ಮಟ್ಟಕ್ಕೆ ನಕ್ಸಲ್ ಚಳವಳಿಯ ಕೊಡುಗೆಯೂ ಇದೆ. ಇಂದು ಎಲ್ಲಾ ಚಳವಳಿಗಳ ದಾರೆಗಳು ಒಂದುಗೂಡಿ ಸಮಾಜದ ಸಾಕ್ಷಿ ಪ್ರಜ್ಞೆಯಾಗುವ ದಿಕ್ಕಿನತ್ತ ಮುಖಮಾಡಿವೆ. ಒಂದು ದಶಕದ ಹಿಂದೆ ಒಡೆದು ನುಚ್ಚುನೂರಾಗಿದ್ದ ರೈತ, ದಲಿತ, ಕಮ್ಯುನಿಸ್ಟ್ ಮುಂತಾದ ಜನ ಚಳವಳಿಗಳು ಆದ ತಪ್ಪನ್ನು ಅರಿತುಕೊಂಡು ಒಗ್ಗಟ್ಟಿನತ್ತ ಮುಖ ಮಾಡಿವೆ. ಎಲ್ಲಾ ಜನ ವರ್ಗಗಳನ್ನು ಒಟ್ಟುಗೂಡಿಸಿಕೊಂಡು ಮುಂದೆ ಸಾಗುವ ಹೊಸ ಪರಂಪರೆಯನ್ನು ಹುಟ್ಟುಹಾಕುತ್ತಿವೆ. ಕರ್ನಾಟಕದಲ್ಲಿ ನಾಗರಿಕ ಸಂಘಟನೆಗಳು ಜೊತೆಗೂಡಿ ಕೆಲಸ ಮಾಡುತ್ತಿರುವ ಪ್ರಬುದ್ಧ ಬಗೆಯನ್ನು ಇತರೆ ರಾಜ್ಯದ ಜನರು ಮೆಚ್ಚಿ ಅನುಸರಿಸುವಂತಹ ಸಂದರ್ಭ ಏರ್ಪಟ್ಟಿದೆ. ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಇಳಿಸುವುದರಲ್ಲೂ, ಕಾಂಗ್ರೆಸ್ ಪಕ್ಷದ ಬಗ್ಗೆ ವಿಮರ್ಶೆ ಇಟ್ಟುಕೊಳ್ಳುತ್ತಲೇ ಅವರನ್ನು ಅಧಿಕಾರಕ್ಕೆ ತರುವುದರಲ್ಲೂ ಕರ್ನಾಟಕದ ನಾಗರಿಕ ಸಮಾಜದ ಗಮನಾರ್ಹ ಪಾತ್ರವಿದೆ. ಈಗ ಅಧಿಕಾರಕ್ಕೆ ಬಂದವರನ್ನು ಪ್ರಶ್ನಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಕೇವಲ ಎನ್‌ಕೌಂಟರ್ ವಿಚಾರಕ್ಕೆ ಮಾತ್ರವಲ್ಲ. ಈ ಸರ್ಕಾರ ತೆಗೆದುಕೊಳ್ಳುತ್ತಿರುವ ಜನ ವಿರೋಧಿ ನೀತಿಗಳನ್ನೆಲ್ಲಾ ನಾವು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲೇಬೇಕಿದೆ. ಈ ವಿಚಾರದಲ್ಲಂತೂ ಬಿಜೆಪಿಗೂ ಕಾಂಗ್ರೆಸ್ಸಿಗೂ ಹೆಚ್ಚು ವ್ಯತ್ಯಾಸವೇ ಇಲ್ಲದಂತಾಗಿದೆ. ಬಿಜೆಪಿಯನ್ನು ತಡೆಯಲೇಬೇಕಿತ್ತು, ತಡೆದಿದ್ದೇವೆ. ಈಗ ಕಾಂಗ್ರೆಸ್ಸನ್ನು ತಿದ್ದಲೇಬೇಕು, ತರಾಟೆಗೆ ತೆಗೆದುಕೊಳ್ಳಲೇಬೇಕು. ಈ ಜವಾಬ್ದಾರಿಯನ್ನೂ ನಾವು ಅಷ್ಟೇ ಹೊಣೆಗಾರಿಕೆಯ ಜೊತೆ ನಿಭಾಯಿಸಬೇಕಿದೆ ಎಂದರು.
- ಕಾಡಿನ ಸಂಗಾತಿಗಳಲ್ಲಿ ಮರುಮನವಿ
ಸಂಗಾತಿಗಳೇ, ನಿಮ್ಮ ಬದ್ಧತೆಯ ಬಗ್ಗೆ, ನೀವು ಕಾಣುತ್ತಿರುವ ಕ್ರಾಂತಿಯ ಕನಸಿನ ಬಗ್ಗೆ, ನೀವು ಅನುಭವಿಸಿರುವ ಕಷ್ಟ ನಷ್ಟಗಳ ಬಗ್ಗೆ ಅರಿವಿದೆ. ಕಾಳಜಿ ಮತ್ತು ಗೌರವವೂ ಇದೆ. ಈ ಪರಿಸ್ಥಿತಿಯನ್ನು ನಿರ್ಮಿಸಿದ ಸರ್ಕಾರಗಳ ನೀತಿ ಮತ್ತು ನಡತೆಯ ಬಗ್ಗೆ ಅಪಾರ ಆಕ್ರೋಶ ನಮಗೂ ಇದೆ. ಮುಖ್ಯವಾಹಿನಿಗೆ ಬಂದವರನ್ನು ಘನತೆಯಿಂದ ನಡೆಸಿಕೊಂಡಿಲ್ಲ ಎಂಬ ವಾಸ್ತವವೂ ನಮ್ಮ ಕಣ್ಣ ಮುಂದಿದೆ. ಆದರೂ ಇದಕ್ಕಿಂತ ಮಿಗಿಲಾದ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಿಮ್ಮ ಮೇಲೂ ಇದೆ. ಎಲ್ಲರೂ ಸೇರಿ ಕರ್ನಾಟಕದಲ್ಲಿ ಪ್ರಬಲವಾದ ಜನಾಂದೋಲನ ಕಟ್ಟೋಣ. ಈ ನಾಡು, ಈ ದೇಶ ನಿಜವಾದ ಅರ್ಥದಲ್ಲಿ ಜನತೆಯದಾಗುವ ತನಕ ಒಡಗೂಡಿ ಅಷ್ಟೇ ಬದ್ಧತೆಯ ಜೊತೆ ಹೋರಾಡೋಣ. ದಯವಿಟ್ಟು ನಮ್ಮ ಈ ಮನವಿಯನ್ನು ಕರ್ನಾಟಕದ ಸಮಸ್ತ ಜನಪರ ಚಳವಳಿಗಳ ಮನವಿ ಎಂದು ಭಾವಿಸಿ. ಎಲ್ಲರೂ ಏನು ಬಯಸುತ್ತಿದ್ದಾರೆ ಎಂಬ ಅರಿವು ನಮಗಿರುವುದರಿಂದ ವಿಶ್ವಾಸದ ಜೊತೆ ಈ ಮಾತನ್ನು ಹೇಳುತ್ತಿದ್ದೇವೆ. ನೀವು ಗಟ್ಟಿ ತೀರ್ಮಾನ ತೆಗೆದುಕೊಳ್ಳುವ ಧೈರ್ಯ ಮಾಡಿದರೆ ಕರ್ನಾಟಕದ ನಾಗರಿಕ ಸಮಾಜ ನಮ್ಮ ಜೊತೆ ನಿಂತಂತೆ ನಿಮ್ಮ ಜೊತೆಯೂ ನಿಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ. ಇದು ಸಕಾಲ. ದಯವಿಟ್ಟು ಮರು ಆಲೋಚನೆ ಮಾಡಿ” ಎಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ನಗರಗೆರೆ ರಮೇಶ್ ಉಪಸ್ಥಿತರಿದ್ದರು.