ನ್ಯಾಯಾಲಯದ ಆವರಣದಲ್ಲಿಯೇ ವಕೀಲನನ್ನು ವ್ಯಕ್ತಿಯೊಬ್ಬ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿದ ಹೊಸೂರಿನಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹತ್ಯೆಗೆ ಬಲಿಯಾದ ವಕೀಲನನ್ನು ಕಣ್ಣನ್ ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿ ಆನಂದ್ ಎಂದು ಹೇಳಲಾಗಿದೆ. ಈತ, ಕೋರ್ಟ್ ಆರವರಣದಲ್ಲಿ ಸಹಾಯಕ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ.
ಕೋರ್ಟ್ ಆವರಣದಲ್ಲಿಯೇ ಕಣ್ಣನ್ ಮೇಲೆ ಆನಂದ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ತಲೆಗೆ ಮಚ್ಚಿನಿಂದ ಬಲವಾದ ಪೆಟ್ಟು ಬಿದ್ದಿದೆ. ಹಲ್ಲೆ ವೇಳೆ, ಯಾರೊಬ್ಬರೂ ಕಣ್ಣನ್ ರಕ್ಷಣೆಗೆ ಹೋಗಿಲ್ಲ. ಆರೋಪಿ ಸ್ಥಳದಿಂದ ತೆರಳಿದ ಬಳಿಕ, ರಕ್ತದ ಮಡುವಿನಲ್ಲಿ ಬಿದ್ದದ್ದ ವಕೀಲ ಕಣ್ಣನ್‌ರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದರೂ, ಕಣ್ಣನ್ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತ್ನಿ ಮತ್ತು ಕಣ್ಣನ್ ನಡುವೆ ವಿವಾಹೇತರ ಸಂಬಂಧವಿತ್ತು. ಅದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ವಕೀಲರ ಮೇಲೆ ಹಲ್ಲೆ, ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ದೆಹಲಿಯ ನ್ಯಾಯಾಲಯವೊಂದರಲ್ಲಿ ವಕೀಲರ ಮೇಲೆ ಗುಂಡು ಹಾರಿಸಲಾಗಿತ್ತು. ಬೀದರ್‌ನಲ್ಲಿ ವಕೀಲನನ್ನು ಕೊಲೆ ಮಾಡಲಾಗಿತ್ತು. ಹಾಸನದಲ್ಲಿ ವಕೀಲರೊಬ್ಬರನ್ನು ಕೋರ್ಟ್ ಕೆಲಸ ಮುಗಿಸಿ ಹೋಗುವಾಗ ಅಪಹರಿಸಿ, ಹತ್ಯೆ ಮಾಡಲಾಗಿತ್ತು. ಇದೀಗ, ಹೊಸೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ.