ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯರ ಚುನಾವಣೆಗೆ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇರೆಗೆ ಅಭ್ಯರ್ಥಿಗಳಾದ ಅನ್ವರ ಭಾಷಾ ಮತ್ತು ಸರವರ್ ಬೇಗ್ ಅವರಿಗೆ ಚುನಾವಣಾ ಅಧಿಕಾರಿ ಶೋಕಾಸ್ ನೋಟಿಸ್ ಜಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ 16 ಮತದಾರರೂ ಆಗಿರುವ ಮುತವಲ್ಲಿಗಳು ರಾಯಚೂರಿನ ಸಹಾಯಕ ಆಯುಕ್ತರಿಗೆ ತಮ್ಮ ಹೇಳಿಕೆ ದಾಖಲಿಸಿ ನಮಗೆ ಯಾರು ಬೆದರಿಕೆ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಮೌಲಾನಾ ಫರೀದ್ ಖಾನ್ ಅವರು ಮತದಾರರಾದ ಮುತವಲ್ಲಿಗಳಿಗೆ ಕರೆ ಮಾಡಿ ಅನ್ವರ್ ಭಾಷಾ ಮತ್ತು ಸರವರ್ ಬೇಗ್ ಅವರಿಗೆ ಮತದಾನ ಮಾಡಬೇಕು ಎಂದು ಹೆದರಿಸುತ್ತಿದ್ದಾರೆ ಎಂದು ಮುಖಂಡ ಹಾರಿಸ್ ಸಿದ್ದೀಖಿ ಅವರು ಚುನಾವಣಾಧಿಕಾರಿ ಆದಿತ್ಯ ಆಮ್ಲಾನ್ ಬಿಸ್ವಾಸ್ ಅವರಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಬ್ಬರು ಅಭ್ಯರ್ಥಿಗೆ ನೋಟಿಸ್ ನೀಡಲಾಗಿತ್ತು ಹಾಗೂ 24 ಗಂಟೆಯೊಳಗೆ ಸ್ಪಷ್ಠನೆ ನೀಡದಿದ್ದಲ್ಲಿ ಶಿಸ್ತು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 16 ಮುತವಲ್ಲಿಗಳು(ಮತದಾರರು) ರಾಯಚೂರು ಸಹಾಯಕ ಆಯುಕ್ತ ಗಜಾನನ ಬಾಳೆ ಅವರ ಮೂಲಕ ಚುನಾವಣಾ ಅಧಿಕಾರಿಗೆ ತಮ್ಮ ಹೇಳಿಕೆ ನೀಡಿದ್ದು, “ನಮಗೆ ವಕ್ಫ್ ಬೋರ್ಡ್ ಸಲಹಾ ಸಮಿತಿಯ ಜಿಲ್ಲಾಧ್ಯಕ್ಷ ಫರೀದ್ ಖಾನ್ ಯಾವುದೇ ಬೆದರಿಕೆ ಹಾಕಿಲ್ಲ. ದೂರುದಾರ ಹ್ಯಾರಿಸ್ ಸಿದ್ದೀಕಿ ಅವರಿಗೂ ವಕ್ಫ್ ಬೋರ್ಡ್ ಚುನಾವಣೆಗೆ ಹಾಗೂ ನಮಗೆ ಸಂಬಂಧವಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕುಂದಾಪುರ | ರಿವರ್ಸ್ ಬರುತ್ತಿದ್ದ ಇನ್ನೋವಾ ಕಾರಿಗೆ ಮೀನಿನ ಲಾರಿ ಡಿಕ್ಕಿ: ಚಾಲಕನ ಸಹಿತ 8 ಮಂದಿ ಗಂಭೀರ
ಸ್ಪಷ್ಟನೆ ನೀಡಿದ 16 ಜನ ಮುತವಲ್ಲಿಗಳ ಪೈಕಿ ಡಾ.ಮೋಯಿನ್, ಮಹಮ್ಮದ್ ಅಲಿ ಗುತ್ತೆದಾರ ಸಿರವಾರ ಹಾಗೂ ಮಹಮ್ಮದ್ ರಫಿ ಖುದ್ದಾಗಿ ಸಹಾಯಕ ಆಯುಕ್ತರಿಗೆ ಸ್ಪಷ್ಟನೆ ನೀಡಿದರೆ ಉಳಿದವರು ದೂರವಾಣಿ ಮೂಲಕ ಹೇಳಿಕೆ ನೀಡಿದ್ದಾರೆ.
ವಕ್ಫ್ ಬೋರ್ಡ್ ಚುನಾವಣೆ ಪಾರದರ್ಶಕವಾಗಿ ನಡೆಯಲಿ ಎಂಬ ನಿಟ್ಟಿನಲ್ಲಿ ದೂರು ನೀಡಲಾಗಿದೆ ಎಂದು ದೂರುದಾರ ಹ್ಯಾರಿಸ್ ಸಿದ್ದೀಕಿ ತಮ್ಮ ದೂರಿನಲ್ಲಿ ತಿಳಿಸಿದ್ದರು.
