87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆಯು ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅಭಿಮಾನವನ್ನು ಹಮ್ಮಿಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಕನ್ನಡ ರಥ ಯಾತ್ರೆಯು ಅದ್ದೂರಿ ಹಾಗೂ ಅರ್ಥ ಪೂರ್ಣ ಕಾರ್ಯಕ್ರಮವಾಗಿ, ಅಭಿಮಾನ ಪೂರ್ವಕವಾಗಿ ಸಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಬುಧವಾರ ಆಯೋಜಿಸಿದ್ದ ಕನ್ನಡ ಜ್ಯೋತಿ ರಥ ಯಾತ್ರೆಯ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ನಾಡು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿನ ಅನೇಕ ಕವಿಗಳು, ವಿಚಾರವಂತರು, ದೇಶಿಯ ಸಾಹಿತ್ಯ ಹಾಗೂ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಆರಂಭವಾದ ರಥಯಾತ್ರೆಯು ಬಿ.ಬಿ ರಸ್ತೆ, ಶಿಡ್ಲಘಟ್ಟ ವೃತ್ತ, ಎಂ.ಜಿ ರಸ್ತೆಯ ಮೂಲಕ ಡಿ.ವೈ.ಎಸ್.ಪಿ ಕಚೇರಿ, ಅಂಬೇಡ್ಕರ್ ಭವನ, ಉಪವಿಭಾಗಾಧಿಕಾರಿಗಳ ಕಚೇರಿಯ ಮುಂಭಾಗವರೆಗೂ ಸಾಗಿತು. ಮಹಿಳೆಯರು ಪೂರ್ಣಕುಂಭ ಕಳಶದೊಂದಿಗೆ ಸ್ವಾಗತಿಸಿದರು. ಜಾನಪದ ಕಲಾತಂಡಗಳ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿತು. ನಗರದ ಬೀದಿಗಳಲ್ಲಿ ಸಾರ್ವಜನಿಕರು ಕನ್ನಡ ರಥಕ್ಕೆ ಪುಷ್ಪನಮನ ಸಲ್ಲಿಸಿ ಶುಭ ಕೋರಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಪರಿಹಾರ ವಿಳಂಬ; ಎಸಿ ಕಚೇರಿಯ ಪೀಠೋಪಕರಣಗಳನ್ನೇ ಹೊತ್ತೊಯ್ದ ಸಂತ್ರಸ್ತರು
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ನಗರಸಭೆ ಅಧ್ಯಕ್ಷರಾದ ಎ.ಗಜೇಂದ್ರ, ಉಪಾಧ್ಯಕ್ಷರಾದ ನಾಗರಾಜ್, ತಹಸಿಲ್ದಾರ್ ಎಂ.ಅನಿಲ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಣಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಷಾದ್ರಿ, ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು, ಸದಸ್ಯರು, ಕನ್ನಡ ಪ್ರೇಮಿಗಳು, ಸ್ಥಳೀಯ ಜನಪ್ರತಿನಿಧಿಗಳು, ಶಾಲಾ ಮಕ್ಕಳು, ಸಾರ್ವಜನಿಕರು ರಥ ಯಾತ್ರೆಯಲ್ಲಿ ಭಾಗವಹಿಸಿದ್ದರು.