ಆರೋಗ್ಯ ಅಭಿಯಾನ ವಿಶೇಷ ಗ್ರಾಮ ಸಭೆಗೆ ಯಾರಿಗೂ ಆಹ್ವಾನ ನೀಡದೆ ಕೆಲವೇ ಕೆಲವು ಗ್ರಾಮ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ನಡೆಸುತ್ತಿರುವ ಸಭಾ ನಡಾವಳಿಗೆ ಜನ ಸಂಗ್ರಾಮ್ ಪರಿಷತ್ ರಾಜ್ಯಾಧ್ಯಕ್ಷ ನಗರ್ಲೆ ವಿಜಯ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗ್ರಾಮ ಆರೋಗ್ಯ ಅಭಿಯಾನ ವಿಶೇಷ ಸಭೆ ಕುರಿತು ಆಕ್ಷೇಪಿಸಿದ್ದಾರೆ.
“ಸಭೆಗೆ ಗ್ರಾಮ ಪಂಚಾಯಿತಿ ನಿಯಮದಂತೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಕಾರ್ಯಕ್ರಮವಾಗಿರುವುದರಿಂದ ಯಾವುದೇ ಸಾರ್ವಜನಿಕರಿಗೆ, ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ, ಸ್ವಸಹಾಯ ಸಂಘಗಳ ಮಹಿಳೆಯರಿಗೆ ಆಹ್ವಾನ ನೀಡದೆ, ಕೆಲವೇ ಕೆಲವು ಗ್ರಾಮ ಪಂಚಾಯಿರಿ ಸದಸ್ಯರು, ಅಧಿಕಾರಿಗಳೇ ದರ್ಬಾರ್ ನಡೆಸಿದ್ದಾರೆ” ಎಂದು ಆರೋಪಿಸಿದರು.
“ಸಾರ್ವಜನಿಕ ವಿಶೇಷ ಸಭೆ ನಿಗದಿಯಾಗಿ, ಪ್ರಕಟಣೆ ಹೊರಡಿಸಿ ಸಾರ್ವಜನಿಕರೇ ಇಲ್ಲದಂತೆ ಸಭೆ ನಡೆಸಿದ್ದು ಖಂಡನೀಯ, ಗ್ರಾಮದ ಸಭೆಯಲ್ಲಿ ಎಲ್ಲರೂ ಭಾಗಿಯಾಗಬೇಕಿದ್ದ ಸಭೆ ಕೇವಲ ಪಂಚಾಯಿತಿ ಸದಸ್ಯರ ಹಾಗೂ ಅಧಿಕಾರಿಗಳ ಸಭೆಯಾಗಿದ್ದು ಸರಿಯಾದ ಕ್ರಮವಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಭ್ರಷ್ಟ ಅಧಿಕಾರಿಯ ಮನೆಯಲ್ಲಿ ಚಿನ್ನ, ಬೆಳ್ಳಿಗಳ ರಾಶಿ: ಬೆಚ್ಚಿಬಿದ್ದ ಲೋಕಾಯುಕ್ತ ಅಧಿಕಾರಿಗಳು!
“ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾರಿಗೂ ಆಹ್ವಾನ ಕೊಟ್ಟಿಲ್ಲ, ಯಾರಿಗೂ ತಿಳಿಸದೆ ಗ್ರಾಮ ಸಭೆಯನ್ನು ಪಂಚಾಯ್ತಿ ಸಭೆಯಂತೆ ನಡೆಸುತ್ತಿದ್ದಾರೆ. ಗ್ರಾಮ ಆರೋಗ್ಯ ವಿಚಾರವಾಗಿ ಸಾರ್ವಜನಿಕರು ಇಲ್ಲದೆ ಯಾವ ವಿಚಾರ ಚರ್ಚೆ ಮಾಡುತ್ತಾರೆ,
ಯಾವ ಸಮಸ್ಯೆಗಳನ್ನು ಆಲಿಸುತ್ತಾರೆ. ಜನ ಸಾಮಾನ್ಯರ ಅಹವಾಲು ತಿಳಿಯದೆ ಸಭೆಗಳನ್ನು ಹತ್ತಿಕ್ಕಿ ತಮಗೆ ಇಸ್ಟ ಬಂದ ಹಾಗೆ ನಡೆಸುವ ಪ್ರವೃತ್ತಿ ಬೆಳೆಸಿಕೊಂಡಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಇಂತಹ ಧೋರಣೆ ಎಂದಿಗೂ ಮುಂದುವರೆಯಕೂಡದು” ಎಂದು ನಗರ್ಲೆ ವಿಜಯಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು.