ಬೆಂಗಳೂರು, ಮಂಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆ ಗಾಢ ನಿದ್ದೆಯಲ್ಲಿದ್ದ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದರು. 4 ಅಧಿಕಾರಿಗಳಿಗೆ ಸೇರಿದ 25 ಸ್ಥಳಗಳಿಗೆ ಏಕಾಏಕಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನ ನಗರ ಯೋಜನಾ ಘಟಕದ ನಿರ್ದೇಶಕ ತಿಪ್ಪೇಸ್ವಾಮಿ ನಿವಾಸ ಹಾಗೂ ಕಚೇರಿ ಸೇರಿದಂತೆ ಹಲವು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತಿಪ್ಪೇಸ್ವಾಮಿಯವರ ಮನೆಯಲ್ಲಿ ರಾಶಿ ರಾಶಿ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಗಿರಿನಗರದಲ್ಲಿರುವ ತಿಪ್ಪೇಸ್ವಾಮಿಯವರ ಬಂಗಲೆಗೆ ಎಸ್‌ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಬಂಗಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ ಪತ್ತೆಯಾದ ಹಿನ್ನೆಲೆಯಲ್ಲಿ ಚಿನ್ನಾಭರಣ ತೂಕ ಹಾಕಲು ಲೋಕಾಯುಕ್ತ ಅಧಿಕಾರಿಗಳು ತಿಪ್ಪೇಸ್ವಾಮಿ ಮನೆಗೆ ಅಕ್ಕಸಾಲಿಗನನ್ನು ಕರೆಸಿಕೊಂಡಿರುವುದಾಗಿ ವರದಿಯಾಗಿದೆ.
ಅಲ್ಲದೆ, ತಿಪ್ಪೇಸ್ವಾಮಿ ಪತ್ನಿಯ ತವರು ಮನೆಯಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದರೆ ಗ್ರಾಮದ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ದಾವಣಗೆರೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಪ್ರಭು ನೇತೃತ್ವದಲ್ಲಿ ಶೋಧ ನಡೆಯುತ್ತಿದೆ. ಅಲ್ಲದೆ ಮಾವನ ಮನೆಯಲ್ಲಿ ತಿಪ್ಪೇಸ್ವಾಮಿ ಅವರಿಗೆ ಸೇರಿದ ಆಸ್ತಿ ದಾಖಲೆಗಳು ಏನಾದರೂ ಸಿಗಬಹುದು ಎಂದು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕೆಜಿಗಟ್ಟಲೆ ಚಿನ್ನ, ಬೆಳ್ಳಿ!
ತಿಪ್ಪೇಸ್ವಾಮಿಯವರ ಮನೆಯಲ್ಲಿ 28 ಕ್ಕೂ ಹೆಚ್ಚು ಜೊತೆ ಓಲೆ, ಎಂಟಕ್ಕೂ ಹೆಚ್ಚು ಐಷಾರಾಮಿ ವಾಚ್, 23ಕ್ಕೂ ಹೆಚ್ಚು ಚಿನ್ನದ ಸರ, ಮುತ್ತಿನ ಪೆಂಡೆಂಟ್ ಇರುವ ಸರ ಪತ್ತೆಯಾಗಿದೆ. ಜೊತೆಗೆ ಕೆಜಿ ಗಟ್ಟಲೆ ಬೆಳ್ಳಿ ವಸ್ತುಗಳ ಸಹಿತ ಸುಮಾರು ಏಳು ಲಕ್ಷ ನಗದು, ಹಾಗೂ ಕೆಲ ಆಸ್ತಿಪತ್ರಗಳು ಪತ್ತೆಯಾಗಿವೆ.

ಅಕ್ರಮ ಆಸ್ತಿ ಸಂಪಾದನೆ ದೂರು ಬಂದ ಹಿನ್ನೆಲೆ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರು, ಬೆಂಗಳೂರು, ಮಂಡ್ಯದ ಮಳವಳ್ಳಿಯಲ್ಲಿ ಇರುವ ಮಹೇಶ್ ಒಡೆತನದ ಮನೆಗಳು ಹಾಗೂ ಸಂಬಂಧಿಕರ ಮನೆಗಳ ಮೇಲೆ ಏಕಾಏಕಿ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನು ಓದಿದ್ದೀರಾ? ರೆಸಾರ್ಟ್‌ಗಳಲ್ಲಿ ಅವಘಡ ನಡೆದಲ್ಲಿ ಮಾಲೀಕರದ್ದೇ ಜವಾಬ್ದಾರಿ : ಅಕ್ರಮಗಳ ನಂತರ ಎಚ್ಚೆತ್ತ ಪ್ರವಾಸೋದ್ಯಮ ಇಲಾಖೆ
ಜೊತೆಗೆ ಕೆಆರ್‌ಎಸ್‌ನಲ್ಲಿ ಇರುವ ಮಹೇಶ್ ಪತ್ನಿ ಮಾಲೀಕತ್ವದ ಪೆಟ್ರೋಲ್ ಬಂಕ್ ಮೇಲೂ ದಾಳಿ ನಡೆದಿದೆ. ದಾಳಿ ವೇಳೆ ಒಂದಷ್ಟು ದಾಖಲೆಗಳು, ನಗದು ಹಾಗೂ ಚಿನ್ನಾಭರಣಗಳು ಸಿಕ್ಕಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಅಕ್ಕಸಾಲಿಗರ ಸಮ್ಮುಖದಲ್ಲಿ ಚಿನ್ನಾಭರಣ ಮೌಲ್ಯಮಾಪನ ನಡೆಯುತ್ತಿದೆ.
