ಯುವತಿಗೆ ಉದ್ಯೋಗ ಕೊಡಿಸಲೆಂದು ಕರೆದೊಯ್ಯುತ್ತಿದ್ದ ಯುವಕನ ಮೇಲೆ ಪ್ರೀತಿ ಮಾಡುತ್ತಿದ್ದಾನೆ ಎಂದು ಅನುಮಾನಿಸಿ ಮೂವರು ಯುವಕರು ಹಲ್ಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ನಗರದ ಶಿವಾಜಿ ಚೌಕ್ ಬಳಿ ಈ ಘಟನೆ ನಡೆದಿದ್ದು, ಶಿರಸಿ ತಾಲೂಕಿನ ಕೊರ್ಲಕಟ್ಟಾ ಗೌಡಕೊಪ್ಪದ ವೀರೇಂದ್ರ ಜೀನದತ್ತ ಜೈನ್ ಎಂಬ 21ವರ್ಷದ ಯುವಕ ಹತ್ತಿರದ ಚನ್ನಾಪುರ ಗ್ರಾಮದ ನಿವಾಸಿಯಾದ ಉಸ್ಮಾ ಬಾನು ಎಂಬ ಯುವತಿಗೆ ಕೆಲಸ ಕೊಡಿಸಲು ಕರೆದೊಯ್ಯುತ್ತಿದ್ದನು. ಈ ಮೊದಲು ಇವರಿಬ್ಬರಿಗೂ ಪರಿಚಯವಿತ್ತು ಎನ್ನಲಾಗಿದೆ. ಮುಸ್ಲಿಂ ಯುವತಿಯನ್ನು ಕರೆದೊಯ್ಯುತ್ತಿರುವುದು ಹಿಂದೂ ಯುವಕನಾದ ಕಾರಣ ವೀರೇಂದ್ರನನ್ನು ಅನುಮಾನಿಸಿ ಶಕೀಲ್ ಅಹ್ಮದ್ (24), ಮಹಮ್ಮದ್ ಮಾಜ್ (26) ಹಾಗೂ ಶಿರಸಿ ಗೋಲಗೇರಿ ಓಣಿಯ ಉಬೇದ್ ಸವಣೂರ್ (25) ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಧಾರವಾಡ | 6 ಮಕ್ಕಳ ಅಪಹರಣ: ಹೆತ್ತ ತಾಯಂದಿರೇ ಮಾಡಿದ್ದು ಏಕೆ?
ಯುವತಿಯನ್ನು ಕೆಲಸ ಕೊಡಿಸಲು ಶಿರಸಿ ರೋಟರಿ ಆಸ್ಪತ್ರಗೆ ಕರೆದುಕೊಂಡು ಹೊರಟಾಗ, ಮಾರ್ಗಮಧ್ಯದಲ್ಲಿ ವೀರೇಂದ್ರ ಮತ್ತು ಉಸ್ಮಾಬಾನು ಐಸ್ ಕ್ರೀಂ ತಿನ್ನುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಆರೋಪಿಗಳು, ಮುಸ್ಲಿಂ ಹುಡುಗಿಯನ್ನು ಪ್ರೀತಿ ಮಾಡುತ್ತೀಯಾ ಎಂದು ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದು ಕಾಲಿನಿಂದ ತುಳಿದು, ಕಲ್ಲಿನಿಂದ ಬೆನ್ನಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಶಿರಸಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.