ಮಂಡ್ಯ ಸಮ್ಮೇಳನ | ಜೋಶಿಯವರು ಗೊ ರು ಚನ್ನಬಸಪ್ಪ, ಜಿ ಮಾದೇಗೌಡರ ಮಾದರಿ ಅರಿಯಲಿ

Date:

Advertisements

ಮಂಡ್ಯದಲ್ಲಿ 1994ರಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ಹಿರಿಯ ರಾಜಕಾರಣಿ ಜಿ. ಮಾದೇಗೌಡರು ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದರು. ಹಿರಿಯ ಸಾಹಿತಿ ಚದುರಂಗ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಗೊ ರು ಚನ್ನಬಸಪ್ಪ ಕಸಾಪ ಅಧ್ಯಕ್ಷ. ಆಗ ಸರ್ಕಾರ ಕೇವಲ ₹10 ಲಕ್ಷ ಕೊಟ್ಟರೆ, ಮಂಡ್ಯದ ಜನರಿಂದ ₹32ಲಕ್ಷ ಸಂಗ್ರಹವಾಗಿತ್ತು! ₹20 ಲಕ್ಷದಲ್ಲಿ ಮೂರು ದಿನ ಸಮ್ಮೇಳನ ನಡೆದಿತ್ತು. ಮಿಕ್ಕ ಹಣ ಏನು ಮಾಡಿದ್ರು ಗೊತ್ತೇ?

ಡಿಸೆಂಬರ್‌ 20ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯ ಬಗ್ಗೆ ಅನಗತ್ಯ ವಿವಾದ ಮೈ ಮೇಲೆ ಎಳೆದುಕೊಂಡಿದ್ದ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅವರು ಮುಖ್ಯಮಂತ್ರಿಗಳು ಕಸಾಪ ಅಧ್ಯಕ್ಷರ ಮನೆಗೆ ಬರಬೇಕು ಎಂದು ಹೇಳಿ ಮತ್ತೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ತಿಂಗಳ ಹಿಂದೆ ಸಾಹಿತ್ಯೇತರ ಕ್ಷೇತ್ರದ ಸಾಧಕರನ್ನು ಸಮ್ಮೇಳನದ ಅಧ್ಯಕ್ಷತೆಗೆ ಪರಿಗಣಿಸುವ ತಮ್ಮ ಮನದಿಂಗಿತ ಹೊರ ಹಾಕಿದ್ದ ಜೋಶಿ ಅಷ್ಟಕ್ಕೇ ಸುಮ್ಮನಾಗದೇ ಒಂದಷ್ಟು ಸ್ವಾಮೀಜಿಗಳು, ಕ್ರೀಡಾಪಟುಗಳು, ಉದ್ಯಮಿಗಳ ಹೆಸರಿನ ಪಟ್ಟಿಯನ್ನು ಅನಗತ್ಯವಾಗಿ ಮಾಧ್ಯಮಗಳಿಗೆ ನೀಡಿ ಸಾಹಿತ್ಯಾಸಕ್ತರ ಟೀಕೆಗೆ ಗುರಿಯಾಗಿದ್ದರು. ಅದಾದ ನಂತರ ಮೂವರು ಮಹಿಳಾ ಸಾಹಿತಿಗಳ ಹೆಸರು ತೇಲಿಬಿಟ್ಟರು. ಶಿಫಾರಸ್ಸಾದ ಹೆಸರುಗಳನ್ನು ಗೌ

ಪ್ಯವಾಗಿಟ್ಟು ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಅದನ್ನು ಮಂಡಿಸಿ ಸೂಕ್ತ ಅಧ್ಯಕ್ಷರ ಆಯ್ಕೆ ನಡೆಸುವುದು ಒಂದು ಪ್ರಜಾ ಸತ್ತಾತ್ಮಕ ನಡೆ. ಆದರೆ ಜೋಶಿಯವರಿಗೆ ವಿವಾದಗಳೆಂದರೆ ಇಷ್ಟ ಎಂದು ಕಾಣುತ್ತದೆ. ಅನಗತ್ಯ ಚರ್ಚೆ ಹುಟ್ಟು ಹಾಕಿ ಈಗ ಗೊ ರು ಚನ್ನಬಸಪ್ಪ ಅವರನ್ನು ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆ ಮಾಡಿದ್ದಾರೆ. ಈ ಆಯ್ಕೆಯನ್ನು ಯಾರೂ ವಿರೋಧಿಸಿಲ್ಲ. ಬಹಳ ಸೂಕ್ತ ಆಯ್ಕೆ ಎಂದು ಕರ್ನಾಟಕದ ಜನ ಸ್ವೀಕರಿಸಿದ್ದಾರೆ. ಆದರೆ, ಜೋಶಿಯವರ ಶಿಫಾರಸ್ಸು ಪಟ್ಟಿ ನೋಡಿದರೆ ಅವರು ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಪರೀಕ್ಷೆ ಮಾಡಿದಂತಿತ್ತು. ಹೆಚ್ಚು ವಿರೋಧ ಬರದಿದ್ದರೆ ಒಬ್ಬ ಸ್ವಾಮೀಜಿಯನ್ನೋ, ಉದ್ಯಮಿಯನ್ನೇ ಆಯ್ಕೆ ಮಾಡುವ ಇಂಗಿತ ಇತ್ತೇನೋ. ಆದರೆ ಈಗ ಅಧ್ಯಕ್ಷರ ಆಯ್ಕೆಯ ಚರ್ಚೆಗೆ ತೆರೆ ಬಿದ್ದಿದೆ. ಈ ಆಯ್ಕೆಯ ಹಿಂದೆ ಯಾರ ಶಿಫಾರಸ್ಸು, ಒತ್ತಡ ಇದ್ದರೂ ಅದು ಸ್ವಾಗತಾರ್ಹ.

Advertisements

ಈ ಮಧ್ಯೆ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಮೂರು ದಿನಗಳ ಜಾತ್ರೆಗೆ 25 ಕೋಟಿ ರೂ. ಹಣ ವ್ಯಯ ಮಾಡುವ ಬಗ್ಗೆ ಮಂಡ್ಯದ ಹಿರಿಯ ಸಾಹಿತಿ, ಸಂಘಟಕ ಜಯಪ್ರಕಾಶ್‌ ಗೌಡ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮಂಡ್ಯದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ “ಕಸಾಪ ಅಧ್ಯಕ್ಷರ ಮನೆಗೆ ಸಚಿವರು, ಮುಖ್ಯಮಂತ್ರಿ ಬರಬೇಕು. ಅಧ್ಯಕ್ಷರು ಮುಖ್ಯಮಂತ್ರಿ ಮನೆ ಬಾಗಿಲಿಗೆ ಹೋಗುವಂತಾಗಬಾರದು” ಎಂಬ ಜೋಶಿ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿ ಮೈಕ್‌ ಕಿತ್ತುಕೊಂಡ ಘಟನೆ ನಡೆದಿತ್ತು. ಅಷ್ಟೇ ಅಲ್ಲ ಆ ಸಭೆಯಲ್ಲಿ ಜಯಪ್ರಕಾಶ್‌ ಗೌಡರು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಅವರು ಎತ್ತಿರುವ ಪ್ರಶ್ನೆ ನಿಜಕ್ಕೂ ಚಿಂತನಾರ್ಹ, ಮಾತ್ರವಲ್ಲ ಪಾಲಿಸಲು ಯೋಗ್ಯವೂ ಆಗಿವೆ. ಮಂಡ್ಯ ಜಿಲ್ಲೆಯಲ್ಲಿ ಒಂದು ಆರ್ಟ್‌ ಗ್ಯಾಲರಿ ಇಲ್ಲ, ಇನ್ನೂರೈವತ್ತು ಜನ ಕೂರಬಹುದಾದ ಸುಸಜ್ಜಿತ ಸಭಾಂಗಣ ಇಲ್ಲ, ಇರುವ ಅಂಬೇಡ್ಕರ್‌ ಭವನ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ. ಶಿವಪುರದ ಸತ್ಯಾಗ್ರಹ ಸೌಧ ಹಾಳುಬಿದ್ದಿದೆ. ಇಂತಹ ಪರಿಸ್ಥಿತಿ ಜಿಲ್ಲೆಯಲ್ಲಿ ಇರುವಾಗ ಅದ್ಧೂರಿ ಸಮ್ಮೇಳನ, ಊಟದ ಹೆಸರಿನಲ್ಲಿ ಹಣ ವ್ಯರ್ಥ ಮಾಡಬಾರದು ಎಂಬುದು ಅವರ ಕಾಳಜಿ.

ಜಯಪ್ರಕಾಶ್‌ ಗೌಡ೧
ಸಭೆಯಲ್ಲಿ ಜೋಶಿಯವರ ಮೈಕ್‌ ಕಿತ್ತುಕೊಂಡ ಜಯಪ್ರಕಾಶ್‌ ಗೌಡ

ಕಸಾಪ ಅಧ್ಯಕ್ಷ ಗೊ ರು ಚನ್ನಬಸಪ್ಪ ಮಾದರಿ ನಡೆ

ಮಂಡ್ಯದಲ್ಲಿ 1994ರಲ್ಲಿ 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ಹಿರಿಯ ರಾಜಕಾರಣಿ ಜಿ. ಮಾದೇಗೌಡರು ಸಮ್ಮೇಳನದ ಉಸ್ತುವಾರಿ ವಹಿಸಿಕೊಂಡಿದ್ದರು. ಹಿರಿಯ ಸಾಹಿತಿ ಚದುರಂಗ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಗೊ ರು ಚನ್ನಬಸಪ್ಪ ಅವರು ಆಗ ಕಸಾಪ ಅಧ್ಯಕ್ಷರಾಗಿದ್ದರು. ಆಗ ಸರ್ಕಾರ ಕೇವಲ ₹10 ಲಕ್ಷ ಕೊಟ್ಟರೆ, ಮಂಡ್ಯದ ಜನರಿಂದ ₹32 ಲಕ್ಷ ಸಂಗ್ರಹವಾಗಿತ್ತು. ₹20 ಲಕ್ಷದಲ್ಲಿ ಮೂರು ದಿನ ಸಮ್ಮೇಳನ ನಡೆದಿತ್ತು. ಉಳಿದ ಹಣದಲ್ಲಿ ಮಂಡ್ಯ ನಗರದಲ್ಲಿ ಪರಿಷತ್ತಿನ ಕಟ್ಟಡಕ್ಕೆ ₹6 ಲಕ್ಷ ವಿನಿಯೋಗಿಸಿದರು. ರೈತ ಸಭಾಂಗಣದ ಮುಂದೆ ₹3 ಲಕ್ಷ ವೆಚ್ಚದಲ್ಲಿ ಬೃಹತ್ ಕುವೆಂಪು ಪ್ರತಿಮೆ ನಿರ್ಮಾಣ ಮಾಡಿದರು. ಇವುಗಳ ಜೊತೆಗೆ ಮಂಡ್ಯದಲ್ಲಿ ಸರ್ಕಾರದಿಂದ ಸಕಾಲದಲ್ಲಿ ಹಣ ಬಾರದೆ ನನೆಗುದಿಗೆ ಬಿದ್ದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಭವನ ನಿರ್ಮಾಣಕ್ಕೆ ₹8 ಲಕ್ಷ ನೀಡಿದರು. ರಾಮನಗರದ ಜಾನಪದ ಲೋಕ ನಿರ್ಮಾಣ ಮಾಡುತ್ತಿದ್ದ ನಾಗೇಗೌಡರಿಗೆ ₹1 ಲಕ್ಷ ದೇಣಿಗೆ ನೀಡಿದ್ದರು.

ಹೀಗೆ ಈ ಬಾರಿಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಗೊ ರು ಚನ್ನಬಸಪ್ಪ ಮತ್ತು ದಿವಂಗತ ಜಿ ಮಾದೇಗೌಡರು ತಮ್ಮ ಅವಧಿಯಲ್ಲಿ ಒಂದು ಉದಾತ್ತ ಮಾದರಿ ಹಾಕಿಕೊಟ್ಟಿದ್ದಾರೆ. ಅದನ್ನು ಅನುಸರಿಸುವುದು ಕಸಾಪಕ್ಕೂ, ಅದರ ಅಧ್ಯಕ್ಷರಿಗೂ ಗೌರವ ತಂದುಕೊಡುತ್ತದೆ. ಈ ಮಾದರಿಯನ್ನು ಜಯಪ್ರಕಾಶ್‌ ಗೌಡ ಅವರು ಕಸಾಪ ಅಧ್ಯಕ್ಷರಿಗೆ ನೆನಪಿಸುವ ಪ್ರಯತ್ನ ಮಾಡಿದ್ದಾರೆ.

ಈ ದಿನ.ಕಾಮ್‌ ಜೊತೆ ಮಾತನಾಡಿದ ಜಯಪ್ರಕಾಶ್‌ ಗೌಡ ಅವರು, “ಕಸಾಪ ಅಧ್ಯಕ್ಷರು ತಮ್ಮದು ಕನ್ನಡದ ಪ್ರಾತಿನಿಧಿಕ ಸಂಸ್ಥೆ ಎಂದು ಹೇಳಿಕೊಳ್ಳುತ್ತಾರೆ. ನಿಜ, ಕಸಾಪಕ್ಕಿರುವಷ್ಟು ದೊಡ್ಡ ನೆಟ್‌ವರ್ಕ್‌ ಕನ್ನಡದ ಬೇರೆ ಯಾವುದೇ ಸಂಸ್ಥೆಗೂ ಇಲ್ಲ. ಆದರೆ, ದತ್ತಿ ಉಪನ್ಯಾಸ, ಪ್ರಶಸ್ತಿ ನೀಡುವುದು, ವರ್ಷಕ್ಕೊಂದು ಸಾಹಿತ್ಯ ಸಮ್ಮೇಳನ ನಡೆಸುವುದು ಮಾತ್ರ ಕಸಾಪದ ಕೆಲಸವಾಗಿದೆ. ಅದರಾಚೆಗೆ ಕನ್ನಡ ಶಾಲೆಗಳಿಗೆ ಬಂದಿರುವ ಶೋಚನೀಯ ಸ್ಥಿತಿ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಸರ್ಕಾರದ ಕನ್ನಡ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸುವ ಧೈರ್ಯ ತೋರಿಲ್ಲ. ಸಾಹಿತ್ಯ ಸಮ್ಮೇಳನ ಆರಂಭವಾದ ಉದ್ದೇಶದ ಬಗ್ಗೆ ಕಸಾಪ ಅಧ್ಯಕ್ಷರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಕನ್ನಡಿಗರಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾರಣದಿಂದ ಸಮ್ಮೇಳನ ನಡೆಸಲು ಶುರು ಮಾಡಿದ್ದರು. ಆ ಸಂದರ್ಭದಲ್ಲಿ ಅಧ್ಯಕ್ಷರು ಮನೆ ಮನೆಗೆ ಹೋಗಿ ಊರಿನ ಮುಖಂಡರನ್ನು ಸೇರಿಸಿ, ಒಂದಿಷ್ಟು ಹಣ ಕ್ರೋಡೀಕರಣ ಮಾಡುತ್ತಿದ್ದರು. ಸರ್ಕಾರ ಒಂದಿಷ್ಟು ಹಣ ಕೊಟ್ಟು ಸುಮ್ಮನಾಗಿರುತ್ತಿತ್ತು. ಸರ್ಕಾರ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ನಿಧಾನಕ್ಕೆ ವೈಭವದಿಂದ ಸಮ್ಮೇಳನ ಮಾಡುವ ಉದ್ದೇಶದಿಂದ ಸರ್ಕಾರದ ಮರ್ಜಿಗೆ ಕಸಾಪ ಒಳಗಾಯಿತು. ಕನ್ನಡ ಮಾಧ್ಯಮ ಶಿಕ್ಷಣ, ಆಡಳಿತ ಭಾಷೆಯಾಗಿ ಕನ್ನಡ ಮುಂತಾದ ಘೋಷಣೆಗಳು ಸಂಪೂರ್ಣ ಯಶಸ್ವಿಯಾಗಿಲ್ಲ. ನ್ಯೂ ಎಜುಕೇಷನ್‌ ಪಾಲಿಸಿ ಬಂದು ಕನ್ನಡ ಬೋಧನೆ ಅವಧಿಯನ್ನು ಪದವಿ ತರಗತಿಯಲ್ಲಿ ಕಡಿಮೆ ಮಾಡಿದ್ದಾರೆ. ಬಿಕಾಂ ತರಗತಿಗೆ ಕನ್ನಡ ಬೇಕಾಗಿಲ್ಲ ಎಂದು ಕೆಲವು ಅಧ್ಯಾಪಕರ ಧೋರಣೆಯಿದೆ. ಇದರ ಬಗ್ಗೆ ಕಸಾಪ ಅಧ್ಯಕ್ಷರ ನಿಲುವು ಏನು? ಯಾವ ರೀತಿಯ ಪ್ರತಿಭಟನೆ ಮಾಡಿದ್ದೀರಿ? ಮೂರು ದಿನದ ಜಾತ್ರೆಗೆ ₹28-30 ಕೋಟಿ ಖರ್ಚು ಮಾಡುತ್ತಿದ್ದೀರಿ, ನಮ್ಮ ಸಂಸ್ಕೃತಿ, ಪ್ರತಿಭೆ ಅನಾವರಣಕ್ಕೆ ಜಿಲ್ಲಾ ಮಟ್ಟದಲ್ಲಾದರೂ ಪ್ರಯತ್ನಪಟ್ಟಿದ್ದೀರಾ ಎಂಬ ಪ್ರಶ್ನೆಯನ್ನು ಕಸಾಪದ ಅಧ್ಯಕ್ಷರಿಗೆ ಕೇಳಿದ್ದೆ” ಎಂದು ವಿವರಿಸಿದರು.

87thkannadasahityasammelana

ಸಂಪುಟ ದರ್ಜೆ ಸ್ಥಾನಮಾನ ಪ್ರದರ್ಶನ!
“ಕಸಾಪ ಅಧ್ಯಕ್ಷರು ಸಮ್ಮೇಳನದಲ್ಲಿ ಬಿಡುಗಡೆಯಾಗಲಿರುವ 87 ಪುಸ್ತಕಗಳ ಹಿಂಭಾಗದಲ್ಲಿ ತಮ್ಮ ಫೋಟೋ, ಸಂದೇಶ ಮುದ್ರಿಸಿದ್ದಾರೆ. ಪುಸ್ತಕದ ಲೇಖಕರ ಫೋಟೋ ಇರಬೇಕಾದ ಜಾಗದಲ್ಲಿ ಕಸಾಪ ಅಧ್ಯಕ್ಷರ ಫೋಟೋ ಹಾಕಿರುವುದು ಲೇಖಕರಿಗೆ ಮಾಡಿರುವ ಅವಮಾನ. ಅಷ್ಟೇ ಅಲ್ಲ ತಮ್ಮ ಲೆಟರ್‌ ಹೆಡ್‌ ಮತ್ತು ವಿಸಿಟಿಂಗ್‌ ಕಾರ್ಡಿನಲ್ಲಿ ಸಂಪುಟ ದರ್ಜೆ ಸ್ಥಾನಮಾನ ಎಂದು ಮುದ್ರಿಸಿಕೊಂಡಿದ್ದಾರೆ. ಕಸಾಪ ಅಧ್ಯಕ್ಷ ಸ್ಥಾನ ಸಾಂವಿಧಾನಿಕ ಹುದ್ದೆ ಅಲ್ಲ. ಸರ್ಕಾರ ಏನೋ ಗೌರವದಿಂದ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ ಎಂದು ಅದನ್ನು ದುರುಪಯೋಗಪಡಿಸಿಕೊಳ್ಳಬಾರದು. ಜೋಶಿಯವರು ತಮ್ಮ ನಿಲುವುಗಳನ್ನು ಬದಲಿಸಿಕೊಂಡು ಸ್ಥಳೀಯರ ಮಾತುಗಳಿಗೆ ಕಿವಿಗೊಡಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದರು.

ದುಂದು ವೆಚ್ಚದ ಸಮ್ಮೇಳನ ಬೇಡ
ಸಾಹಿತ್ಯ ಸಮ್ಮೇಳನ ಜನರ ತೆರಿಗೆ ಹಣದಲ್ಲಿ ನಡೆಯುತ್ತಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂದ್ರೆ ಅದು ಹಣ ಲೂಟಿ ಮಾಡುವ ದಂಧೆ ಎಂಬ ಆರೋಪ ಬಹಳ ದಿನದಿಂದ ಇದೆ. ಲಕ್ಷಾಂತರ ಜನ ಸೇರುವ ಕಾರ್ಯಕ್ರಮದಲ್ಲಿ ತರಾವರಿ ಅಡುಗೆ ಮಾಡುವ ಅಗತ್ಯವೇನಿದೆ ಎಂಬ ಪ್ರಶ್ನೆಯೂ ಎದ್ದಿದೆ. ಅತಿಥಿಗಳಿಗೆ ಸ್ಮರಣಿಕೆ, ಬೃಹತ್‌ ವೇದಿಕೆ, ಪೆಂಡಾಲ್‌ʼ ಅಲಂಕಾರ, ಶಾಲು, ಹಾರ ಖರೀದಿಯಲ್ಲೂ ಹಣ ಲೂಟಿ ಮಾಡಲಾಗುತ್ತಿದೆ. ನೂರಾರು ಜನರಿಗೆ ಸನ್ಮಾನದ ಹೆಸರಿನಲ್ಲಿ ಹಣ ವ್ಯರ್ಥವಾಗುತ್ತದೆ. ಸರ್ಕಾರ ಹಣ ಕೊಡುವ ಕಾರಣ ರಾಜಕಾರಣಿಗಳು ಸಹಜವಾಗಿಯೇ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನೂ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸಾಹಿತಿಗಳಿಗಿಂತ ಹೆಚ್ಚು ರಾಜಕಾರಣಿಗಳು, ಸರ್ಕಾರದ ಪ್ರತಿನಿಧಿಗಳು, ಸ್ಥಳೀಯ ಮುಖಂಡರೇ ಇರುತ್ತಾರೆ. ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶವನ್ನು ಎಲ್ಲರೂ ಮರೆತಂತಿದೆ.

ಇದನ್ನೂ ಓದಿ ನಬಾರ್ಡ್‌ನಿಂದ ರಾಜ್ಯದ ರೈತರಿಗೆ ಸಾಲದ ಕೊರತೆ, ಅನ್ಯಾಯ ಸರಿಪಡಿಸಲು ಸಿಎಂ ಸಿದ್ದರಾಮಯ್ಯ ಮನವಿ

ಸರ್ಕಾರಿ ಶಾಲೆಗಳು ಮೂಲ ಸೌಕರ್ಯದ ಕೊರತೆಯಿಂದ ನಲುಗುತ್ತಿವೆ. ಬಡ ಕೂಲಿ ಕಾರ್ಮಿಕರ ಮಕ್ಕಳು ಮಾತ್ರ ಕನ್ನಡ ಶಾಲೆ ಶಾಲೆಗೆ ಹೋಗುವ ಪರಿಸ್ಥಿತಿಯಿದೆ. ಮಕ್ಕಳ ಕೊರತೆಯಿಂದ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಒಂದೆಡೆ ಸ್ಪರ್ಧಾತ್ಮಕ ಜಗತ್ತಿಗೆ ಗ್ರಾಮೀಣ ಮಕ್ಕಳು ಪ್ರವೇಶ ಪಡೆಯುವಲ್ಲಿ ಇಂಗ್ಲಿಷ್‌ ಭಾಷೆಯ ತೊಡಕು, ಕಷ್ಟವಾದರೂ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಲಿಸುವತ್ತ ಜನ ಆಸಕ್ತರಾಗಿದ್ದಾರೆ. ಮಧ್ಯಮ ವರ್ಗದವರು ಬದುಕಿನ ಇಡೀ ದುಡಿಮೆಯನ್ನು ಮಕ್ಕಳ ಶಿಕ್ಷಣಕ್ಕಾಗಿ ಸುರಿಯುತ್ತಿದ್ದಾರೆ. ಕನ್ನಡ ಭಾಷೆ ಮಾತನಾಡುವ, ಸಾಹಿತ್ಯ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆಡಳಿತದಲ್ಲಿ ಕನ್ನಡ, ಕನ್ನಡಿಗರಿಗೆ ಉದ್ಯಮಗಳಲ್ಲಿ ಉದ್ಯೋಗಾವಕಾಶ ಒದಗಿಸುವ ಸರ್ಕಾರದ ಭರವಸೆಗಳೆಲ್ಲ ಸುಳ್ಳಾಗಿದೆ. ಬಡ ಮಕ್ಕಳು ಹೋಗುವ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ, ಶಿಕ್ಷಕರ ಕೊರತೆ ಒದಗಿಸಲಾಗದ ಸರ್ಕಾರ ಮೂರು ದಿನ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ₹25 ಕೋಟಿ ಅನುದಾನ ಕೊಡುವುದು ಸರಿಯಾದ ತೀರ್ಮಾನವಲ್ಲ.

ಕಸಾಪವೂ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಅಗತ್ಯವಿದೆ. ಮೆರವಣಿಗೆ, ಅಲಂಕಾರ, ಅದ್ಧೂರಿತನಕ್ಕೆ ಜೋತು ಬಿದ್ದು ಅನಗತ್ಯ ದುಂದುವೆಚ್ಚ ಮಾಡುವ ಬದಲು 1994ರ ಮಾದರಿಯಲ್ಲೇ ಹಣ ಉಳಿಸಿ ಜಿಲ್ಲೆಗೆ ಏನಾದರೂ ಕೊಡುಗೆ ನೀಡಿದರೆ ಈ ಸಮ್ಮೇಳನ ಸದಾ ಸ್ಮರಣೀಯವಾಗಲಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X