ಕನ್ನಡದ ಕೆಲಸಗಳಿಗೆ ನನ್ನ ಸಂಪೂರ್ಣ ಸಹಕಾರವಿರುತ್ತದೆ. ಆದರೆ, ವಿನಾಕಾರಣ ಪೀಡಿಸಿದರೆ ಸಹಿಸಲಾಗದು. ಅವುಗಳಿಗೆ ತಲೆಕೆಡಿಸಿಕೊಳ್ಳದೇ ನನ್ನ ಕೆಲಸಗಳನ್ನು ನಿರಂತರವಾಗಿ ಮುಂದುವರೆಸುವೆ ಎಂದು ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಔರಾದ್ ಹಾಗೂ ಕಮಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಗುರುವಾರ ಔರಾದ ಪಟ್ಟಣದ ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ ʼಸಾಹಿತಿ ಸಂಗಮʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಕನ್ನಡ ಭಾಷೆಯ ರಕ್ಷಣೆಗಾಗಿ ನಿರಂತರ ಶ್ರಮಿಸುವ ಸಾಹಿತಿಗಳಿಗೆ ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತಿ, ಕಲಾವಿದರ ಮನೆಗೆ ಭೇಟಿ ನೀಡಿ ಗೌರವಿಸುತ್ತಿದ್ದೇನೆ. ಕನ್ನಡಕ್ಕಾಗಿ ದುಡಿಯುವರನ್ನು ಗೌರವಿಸುವುದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆʼ ಎಂದರು.
ʼಕನ್ನಡಕ್ಕೆ ಸಂಬಂಧಿಸಿದ ಏನೇ ಕೆಲಸವಿರಲಿ. ನೇರವಾಗಿ ತಿಳಿಸಿ ಖಂಡಿತವಾಗಿ ಕೆಲಸ ಮಾಡುವೆ. ಕನ್ನಡ ಭಾಷೆಯ ಹಿತದೃಷ್ಟಿಯಿಂದ ಕಸಾಪ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ನಾನು ಸಾಹಿತ್ಯ ಪರಿಷತ್ತಿನ ಜೊತೆಗಿದ್ದೇನೆ. ಜಿಲ್ಲಾ, ತಾಲ್ಲೂಕು ಮತ್ತು ವಲಯ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದ್ದೇನೆ. ಮುಂದೆಯೂ ಸಮ್ಮೇಳನ ಮಾಡೋಣ. ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹೇಳಿದ ಎಲ್ಲ ಕನ್ನಡದ ಕೆಲಸಗಳನ್ನು ಮಾಡಿದ್ದೇನೆ. ಆದರೆ, ಕೆಲವರು ಅನಗತ್ಯ ಆರೋಪಗಳನ್ನು ಮಾಡುತ್ತಾರೆʼ ಎಂದರು.

ʼಔರಾದ, ಕಮಲನಗರ ಗಡಿ ತಾಲ್ಲೂಕುಗಳಲ್ಲಿ ಕನ್ನಡದ ಅಭಿವೃದ್ಧಿಗೆ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇನೆ. ನನ್ನ ಮನೆಯ ಭಾಷೆ ಬಂಜಾರಾ ಆದರೂ ನನ್ನ ಮಾತೃಭಾಷೆ ಕನ್ನಡವೇ ಆಗಿದೆ. ನನ್ನ ತನು, ಮನಗಳಲ್ಲಿ ಕನ್ನಡ ಅಡಗಿದೆ. ಅನಿವಾರ್ಯ ಕಾರಣಗಳಿಂದ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ಪೀಳಿಗೆಗೆ ಸಮಸ್ಯೆ ಆಗಬಾರದೆಂದು ಬಹಳಷ್ಟು ಕಡೆಗಳಲ್ಲಿ ಕನ್ನಡ ಶಾಲೆಗಳನ್ನು ತೆರೆಯುವ ಕೆಲಸ ಮಾಡಿದ್ದೇನೆʼ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ʼಕನ್ನಡ ನಾಡು, ನುಡಿಯ ರಕ್ಷಣೆಗೆ ಎಲ್ಲರೂ ಶ್ರಮಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಸುಂದರ ಕನ್ನಡ ಭವನ ನಿರ್ಮಾಣಗೊಂಡಿದೆ. ಅದರಂತೆ ಎಲ್ಲ ತಾಲ್ಲೂಕುಗಳಲ್ಲಿಯೂ ಕನ್ನಡ ಭವನಗಳನ್ನು ನಿರ್ಮಿಸುವ ಅವಶ್ಯಕತೆಯಿದೆ. ಇದಕ್ಕೆ ಎಲ್ಲರ ಸಹಕಾರ ಬೇಕುʼ ಎಂದು ತಿಳಿಸಿದರು.
ʼಸಾಹಿತ್ಯ ಸಿರಿʼ ಪ್ರಶಸ್ತಿ ಪ್ರದಾನ :
ಔರಾದ್ ಹಾಗೂ ಕಮಲನಗರ ತಾಲೂಕಿನ ಸಾಹಿತಿ, ಕಲಾವಿದರಾದ ನಾಗಯ್ಯ ಸ್ವಾಮಿ, ಬಸವರಾಜ ಸ್ವಾಮಿ, ರೇಣುಕಾ ಮಠ, ಶಿಲ್ಪಾ ರಾಜನಾಳೆ, ಅಶ್ವಿನಿ ಸುಂದಾಳೆ, ಜ್ಯೋತಿ.ಡಿ ಬುಮ್ಮ, ತುಕಾರಾಮ ರಾಜನಾಳೆ, ಸಂಗಮೇಶ.ಕೆ ಬೆಲ್ದಾಳ, ನಾಗೇಶ ಮಡಿವಾಳ, ಜಯಪ್ರಕಾಶ ಅಲ್ಮಾಜೆ, ಪೂಜಾ.ಎಸ್ ಪಟ್ನೆ, ರಾಜೇಂದ್ರ ಯರನಳ್ಳೆ, ಪರಮೇಶ.ಡಿ ವಿಲಾಸಪುರೆ, ಬಸವರಾಜ ಪಾಂಚಾಳ, ಪ್ರಕಾಶ ದೇಶಮುಖ, ಬಲಭೀಮ ಕುಲಕರ್ಣಿ, ನಂದಾದೀಪ ಬೋರಾಳೆ, ಬಾಲಾಜಿ ಕುಂಬಾರ, ಪುಷ್ಪವತಿ ಚಿಕುರ್ತೆ, ಮಾಣಿಕಾದೇವಿ ಪಾಟೀಲ, ರಾಜಕುಮಾರ ಬಿರಾದಾರ, ಕಾಶಿನಾಥ ಬಾವಗೆ, ವಿಶಾಲ ಮಹಾಜನ, ಡಾ.ವಿಶ್ವನಾಥ ಕಿವಡೆ, ರಾಜಶೇಖರ ಅಜ್ಜಾ, ಸಂಗಮೇಶ ಮುರ್ಕೆ, ವಿಶ್ವನಾಥ ಡೋಣಗಾಪುರೆ, ಶಿವಾಜಿ ಆರ್.ಎಚ್ ಅವರನ್ನು ಕಸಾಪದಿಂದ ʼಸಾಹಿತ್ಯ ಸಿರಿʼ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಹಿತಿಗಳಿಗೆ ಸಾಹಿತ್ಯ ಸಿರಿ ಪ್ರಶಸ್ತಿಯ ಜೊತೆಗೆ ವೀರಲೋಕ ಪ್ರಕಾಶನದ ನಿನ್ನ ಧ್ಯಾನದ ನೂರೊಂದು ಹಣತೆ (ವಾಸುದೇವ ನಾಡಿಗ್), ಗಿಳಿಯು ಬಾರದೆ ಇರದು (ಪಿ.ಎಸ್.ಶ್ರೀಧರನ್ ಪಿಳ್ಳ), ಗಾಯಗೊಂಡ ಸಾಲುಗಳು (ಸದಾಶಿವ ಸೊರಟುರು), ಸತ್ಯದ ಅನಾವರಣ (ಕೆ.ಎಸ್ ರಮಾಸುಂದರಿ), ಇತ್ತ ಹಾಯಲಿ ಚಿತ್ತ (ಕವಿತಾ ಹೆಗಡೆ ಅಭಯಂ), ಹಕ್ಕಿ ಮತ್ತು ಹುಡುಗಿ (ಪ್ರಜಾವಾಣಿ ಬಳಗ), ಕಾದಂಬರಿ (ಡಾ.ವಾಸುದೇವ ಶೆಟ್ಟಿ), ನೀಲಿ ಶಾಯಿಯ ಕಡಲು(ಗೀತಾ ದೊಡ್ಮನಿ) ಪರಿಮಳದ ಪಡಸಾಲೆ (ವಾಸುದೇವ) ಪುಸ್ತಕಗಳು, ವಿತರಿಸಿ ಗೌರವ ಸಲ್ಲಿಸಿದರು.
ಸಾಹಿತ್ಯ ಸಂವರ್ಧಕ ಪ್ರಶಸ್ತಿ: ಇದೇ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಾಸಕ ಪ್ರಭು.ಬಿ ಚವ್ಹಾಣ ಅವರಿಗೆ ಸಾಹಿತ್ಯ ಸಂವರ್ಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಔರಾದ್ ತಾಲೂಕು ಕಸಾಪ ಆಧ್ಯಕ್ಷ ಶಾಲಿವಾನ್ ಉದಗಿರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲನಗರ ತಾಲೂಕು ಕಸಾಪ ಆಧ್ಯಕ್ಷ ಪ್ರಶಾಂತ ಮಠಪತಿ ಸ್ವಾಗತಿಸಿದರು.
ಈ ಸುದ್ದಿ ಓದಿದ್ದೀರಾ? ‘ವೈಜ್ಞಾನಿಕ ದತ್ತಾಂಶ ಪಡೆದರೆ ಒಳಮೀಸಲಾತಿಗೆ ಬಂಜಾರರ ವಿರೋಧವಿಲ್ಲ’
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ಸಾಹಿತಿ ರಾಜೇಂದ್ರ ಯರನಾಳೆ, ಜ್ಯೋತಿ ಬೊಮ್ಮಾ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಟಿ.ಎಮ್.ಮಚ್ಚೆ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಶಿವಣಕರ, ಯುವ ಘಟಕದ ಅಧ್ಯಕ್ಷ ಗುರುನಾಥ ರಾಜಗೀರಾ, ಅಂಬಾದಾಸ ನೇಳಗೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ, ಸಚಿನ ರಾಠೋಡ್, ಬಸವರಾಜ ಹಳ್ಳೆ, ಜಗನ್ನಾಥ ದೇಶಮುಖ, ಮಲ್ಲಿಕಾರ್ಜುನ ಟಂಕಸಾಲೆ, ಅಶೋಕ ಶೆಂಬೆಳ್ಳೆ, ಬಿ.ಎಂ.ಅಮರವಾಡಿ ಸೇರಿದಂತೆ ಇತರರಿದ್ದರು. ಶಿಕ್ಷಕ ಶಿವಲಿಂಗ ಹೇಡೆ ನಿರೂಪಿಸಿದರು.