ಬೌದ್ಧಿಕ ಮತ್ತು ಭಾವನಾತ್ಮಕ ವಿಕಾಸದ ಮೂಲಕ ‘ಮನೋವಿಕಾಸ’ಕ್ಕೆ ನೆರವಾಗುವ ಸಾಹಿತ್ಯಾತ್ಮಕ ಪುಸ್ತಗಳನ್ನೂ ಹೆಚ್ಚು ಹೆಚ್ಚು ಓದುವ ಆಸಕ್ತಿ ಬೆಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಯುವಜನರು ಗ್ರಂಥಾಲಯದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಇರುವ ಪುಸ್ತಕಗಳನ್ನು ಓದುವುದಕ್ಕಷ್ಟೇ ಸೀಮಿತವಾಗಬಾರದು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ ಸತೀಶ್ ಜವರೇಗೌಡ ಕರೆ ನೀಡಿದರು.
ಮೈಸೂರು ನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಮೈಸೂರು ನಗರ ಕೇಂದ್ರ ಗಂಥಾಲಯದ ಕುವೆಂಪು ನಗರ ಶಾಖೆಯಲ್ಲಿ ಗುರುವಾರ ನಡೆದ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಸಾಹಿತ್ಯದ ವಿವಿಧ ಪ್ರಕಾರದ ಪುಸ್ತಕಗಳನ್ನು ಓದುವುದರಿಂದ ಪ್ರಬುದ್ಧ ಚಿಂತನೆ ಮತ್ತು ವೈಚಾರಿಕತೆಯ ಮನೋಭಾವ ಲಭಿಸುತ್ತದೆ” ಎಂದರು.

“ಪ್ರಸ್ತುತ ಗ್ರಂಥಾಲಯವಿರುವುದು ನಿವೃತ್ತರಿಗೆ, ಗೃಹಿಣಿಯರಿಗೆ, ವೃದ್ಧರಿಗೆ ಮಾತ್ರವೆಂದು ತಪ್ಪಾಗಿ ಭಾವಿಸಲಾಗಿದೆ. ನಮ್ಮ ಮನದಲ್ಲಿನ ಮೌಢ್ಯತೆಯ ಕತ್ತಲನ್ನು ದೂಡಿ, ಬದುಕನ್ನು ಹಸನುಗೊಳಿಸುವ ಗ್ರಂಥಾಲಯದ ಒಡನಾಟ ಎಲ್ಲ ವಯೋಮಾನದವರಿಗೂ ತುಂಬ ಅಗತ್ಯವಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಯುವಜನರು, ಸರ್ಕಾರಿ ಉದ್ಯೋಗಾಂಕ್ಷಿಗಳು ನಿತ್ಯವೂ ಗ್ರಂಥಾಲಯಕ್ಕೆ ತೆರಳಿ ಓದುವ ಹವ್ಯಾಸವನ್ನು ‘ಒಂದು ಜೀವನ ಕ್ರಮ’ವಾಗಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
“ರಂಜನೆ ಮತ್ತು ಬೋಧನೆಯ ಗುರಿಯನ್ನು ಹೊಂದಿರುವ ಸಾಹಿತ್ಯದ ಪುಸ್ತಕಗಳಿಗಾಗಿ ಮನೆಯಲ್ಲಿ ಒಂದು ಕೊಠಡಿಯನ್ನು ಮೀಸಲಿಡುವ ಪರಿಪಾಠ ಜನತೆಯಲ್ಲಿ ಒಡಮೂಡಬೇಕು. ಈ ನಿಟ್ಟಿನಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡುವಾಗ ಅಡುಗೆ ಮನೆ, ದೇವರ ಕೋಣೆ, ಶೌಚಾಲಯ, ಹೋಮ್ ಥಿಯೇಟರ್‌ಗೆ ನೀಡುವಷ್ಟೇ ಆದ್ಯತೆಯನ್ನು ‘ಮನೆ ಕಿರು ಗ್ರಂಥಾಲಯ’ಕ್ಕೂ ನೀಡುವ ಮೂಲಕ ಕುಟುಂಬದ ಎಲ್ಲ ಸದಸ್ಯರಲ್ಲೂ ‘ಓದುವ ರುಚಿ’ ಹತ್ತಿಸಬೇಕು” ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಸಚಿವ ಬಸವಾರಾಧ್ಯ ಮಾತನಾಡಿ, “ಜಿಲ್ಲೆಯ ಬಹುತೇಕ ಗ್ರಂಥಾಲಯಗಳು ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಇದನ್ನು ನಿವಾರಿಸುವ ದಿಕ್ಕಿನಲ್ಲಿ ಓದುಗರು ಪ್ರಯತ್ನಿಸಬೇಕು. ಇರುವುದರಲ್ಲಿ ಕುವೆಂಪುನಗರ ಗ್ರಂಥಾಲಯ ಶಾಖೆ ಎಲ್ಲ ಸೌಲಭ್ಯಗಳನ್ನು ಹೊಂದಿದ್ದು, ಇಲ್ಲಿನ ಸಿಬ್ಬಂದಿಯ ಕಾಳಜಿಯಿಂದ ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತಿದೆ” ಎಂದು ಶ್ಲಾಘಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು ದಕ್ಷಿಣ | ಪಟ್ಟಾರೆಡ್ಡಿಪಾಳ್ಯ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಒತ್ತಾಯ: ರೈತ ಸಂಘದಿಂದ ಪ್ರತಿಭಟನೆ
ಸಮಾರಂಭದ ಅಧ್ಯಕ್ಷತೆಯನ್ನು ಕುವೆಂಪುನಗರ ಶಾಖಾ ಗ್ರಂಥಾಲಯ ಅಭಿವೃದ್ಧಿ ಸಮಿತಿಯ ಸದಸ್ಯ ಎ ಜಿ ದೇವರಾಜು ವಹಿಸಿದ್ದರು. ಟಿಟಿಎಲ್ ಕಾಲೇಜಿನ ಉಪನ್ಯಾಸಕ ಶಿವಶಂಕರ್ ಸ್ಪರ್ಧಾ ವಿಹೇತರಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಶಾಖಾ ಗ್ರಂಥಾಲಯದ ಪ್ರಧಾನ ಧಾರಕ ಹೆಚ್ ವಿ ರಮೇಶ್, ಸಾಹಿತಿಗಳಾದ ಮೋಹನ್ ಪಾಳೇಗಾರ್, ಕೂಡ್ಲಾಪುರ ಮಹದೇವನಾಯಕ, ಸಂಶೋಧಾನಾರ್ಥಿ ಎನ್ ನವೀನ್ ಕುಮಾರ್ ಇದ್ದರು.
ಈ ವೇಳೆ ಮೈಸೂರು ವಿವಿಯ ನಿವೃತ್ತ ಉಪಕುಲ ಸಚಿವ ಬಸಾರಾಧ್ಯ, ನಿವೃತ್ತ ಪ್ರಾಂಶುಪಾಲ ಮಲ್ಲಿಕಾರ್ಜುನ ಪಂಡಿತ, ಲೆಕ್ಕ ಪರಿಶೋಧಕ ಶಿವಾನಂದ ಅವರಿಗೆ ‘ಉತ್ತಮ ಗ್ರಂಥಾಲಯ ಪೋಷಕರು ಹಾಗೂ ಓದುಗರು’ ಎಂದು ಗುರುತಿಸಿ ಗೌರವಿಸಲಾಯಿತು. ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಕೆ ಎಂ ಉಮೇಶ್(ಪ್ರಥಮ), ಎಂ ಬಿ ರವಿ(ದ್ವಿತೀಯ), ಎನ್ ಲಿಖಿತ್ ರಾಜ್(ತೃತೀಯ) ಬಹುಮಾನ ವಿತರಿಸಲಾಯಿತು.