ರಾಜ್ಯಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂದು ಬಿಇಒ ಎನ್ ವೆಂಕಟೇಶಪ್ಪ ಶುಭಕೋರಿದರು.
ಬಾಗೇಪಲ್ಲಿ ಪಟ್ಟಣದ ಬಿಇಒ ಕಚೇರಿಯಲ್ಲಿ ಗುರುವಾರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಆಯೋಜಿಸಿದ್ದ ಸರಳ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ತಾಲೂಕಿನಿಂದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ತಯಾರುಗೊಳಿಸಿದ ದೈಹಿಕ ಶಿಕ್ಷಕರು ಹಾಗೂ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ್ ಮತ್ತಿತರ ಶ್ರಮವೂ ಅಪಾರವಾದದ್ದು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ್ ಮಾತನಾಡಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಆಶ್ರಮದ ಆವರಣದಲ್ಲಿ ಇತ್ತೀಚೆಗೆ ನಡೆದ 2024-25 ಸಾಲಿನ ರಾಜ್ಯ ಮಟ್ಟದ 14 ವರ್ಷದೊಳಗಿನ ಬಾಲಕರ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ನಮ್ಮ ತಾಲೂಕಿನ ಶ್ರೀ ಸತ್ಯಸಾಯಿ ವಿದ್ಯಾನಿಕೇತನ್ ಶಾಲೆಯ ವಿದ್ಯಾರ್ಥಿಗಳಾದ ಪ್ರಜ್ವಲ್, ಎನ್.ಆರ್.ದಿಲೀಪ್ ಮತ್ತು ಭುವನಜ್ ಅವರು ಗೆಲುವು ಸಾಧಿಸಿರುವುದು ಸಂತಸದ ವಿಚಾರ. ನ.25 ರಿಂದ 29ರವರೆಗೆ 14 ವರ್ಷದೊಳಗಿನ ರಾಷ್ಟ್ರ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮವಾಗಿ ಆಡಿ ಗೆಲುವು ಸಾಧಿಸಬೇಕು ಎಂದರು.
ಇದೇ ವೇಳೆ ಕ್ರೀಡಾಪಟುಗಳು ಮತ್ತು ದೈಹಿಕ ಶಿಕ್ಷಕ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಬಾಗೇಪಲ್ಲಿ | ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬಡವರಿಗೆ ಅನ್ಯಾಯ : ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ವಾಗ್ದಾಳಿ
ಈ ವೇಳೆ ತಾಲೂಕು ಶಿಕ್ಷಣ ಸಮನ್ವಯ ಅಧಿಕಾರಿ ಆರ್.ವೆಂಕಟರಾಮ್, ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ, ಇಸಿಒಗಳಾದ ರವಿಕುಮಾರ್, ಆನಂದಬಾಬು, ಪಿ.ಎನ್ ನಾರಾಯಣಸ್ವಾಮಿ, ಪದ್ಮಾವತಿ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.