ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೇಳಿ ಬರುವ ಸಣ್ಣಪುಟ್ಟ ಆರೋಪಗಳಿಗೂ ಸಿಬಿಐ, ಇಡಿ, ಐಟಿ ತನಿಖೆ ನಡೆಸಿ ಕಿರುಕುಳ ನೀಡುವ ಮೋದಿ ಸರಕಾರ, ರೂ. 2000 ಕೋಟಿಗಿಂತ ಹೆಚ್ಚು ಮೊತ್ತದ ಲಂಚ ಪ್ರಕರಣದಲ್ಲಿ ಈವರೆಗೆ ಯಾವುದೇ ತನಿಖೆಗೆ ಚಾಲನೆ ನೀಡಿಲ್ಲ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಗೌತಮ್ ಅದಾನಿಯನ್ನು ಸ್ವತಃ ಬಿಜೆಪಿಯೇ ಮುಂದೆ ನಿಂತು ಸಮರ್ಥಿಸಿಕೊಳ್ಳತೊಡಗಿದೆ. ಅಲ್ಲಿಗೆ ಮೋದಿ-ಅದಾನಿ ನಡುವಿನ ಸ್ನೇಹ ಅದೆಷ್ಟು ಗಾಢ ಎಂಬುದು ಯಾರಿಗಾದರೂ ಅರ್ಥವಾಗಬಲ್ಲದು.
‘ಮನುಷ್ಯನಿಗೆ ಗುರಿಯಷ್ಟೆ ಮಾರ್ಗವೂ ಮುಖ್ಯ’
-ಮಹಾತ್ಮ ಗಾಂಧಿ
ಗುಜರಾತ್ ರಾಜ್ಯದ ಸುಪುತ್ರರಾದ ಮಹಾತ್ಮ ಗಾಂಧೀಜಿಯ ಮೇಲಿನ ಕಿವಿಮಾತನ್ನು ಗುಜರಾತ್ ಜನರೇ ಮರೆತಿರುವುದರಿಂದಾಗಿಯೇ ನರೇಂದ್ರ ಮೋದಿ ಮತ್ತು ಗೌತಮ್ ಅದಾನಿಯಂಥ ದಾರಿ ತಪ್ಪಿದ ಮಕ್ಕಳನ್ನು ಹೊತ್ತು ಮೆರೆಸುತ್ತಿರುವುದು. ಒಬ್ಬರು ಅಧಿಕಾರಕ್ಕಾಗಿ ಕೋಮು ದಂಗೆ, ಸುಳ್ಳು ಪ್ರಚಾರಕ್ಕೂ ಹೇಸದ ರಾಜಕಾರಣಿಯಾಗಿದ್ದರೆ; ಮತ್ತೊಬ್ಬರು ತಮ್ಮ ಉದ್ಯಮ ಸಾಮ್ರಾಜ್ಯ ವಿಸ್ತರಣೆಗಾಗಿ ಯಾವ ಹಂತಕ್ಕೂ ತಲುಪಬಲ್ಲ ಧನದಾಹಿಯಾಗಿದ್ದಾರೆ. ಅದರ ಪರಿಣಾಮವೇ, ಭಾರತದ ಅತ್ಯಂತ ಪ್ರಭಾವಶಾಲಿ ಉದ್ಯಮಿಯಾಗಿ ಬೆಳೆದು ನಿಂತಿರುವ ಗೌತಮ್ ಅದಾನಿ ವಿರುದ್ಧದ ಲಂಚ ಪ್ರಕರಣದಲ್ಲಿ ಅಮೆರಿಕ ನ್ಯಾಯಾಲಯವೊಂದು ಬಂಧನದ ವಾರೆಂಟ್ ಜಾರಿಗೊಳಿಸಿದೆ.
ಒಂದು ಕಾಲದಲ್ಲಿ ಸಾಮಾನ್ಯ ವರ್ತಕರಾಗಿದ್ದ ಗೌತಮ್ ಅದಾನಿ, ಕಳೆದ ಒಂದು ದಶಕದಲ್ಲಿ ತಮ್ಮ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸಿರುವ ಪರಿಯೇ ದಿಗ್ಭ್ರಮೆ ಹುಟ್ಟಿಸುವಂತಿದೆ. ವರ್ತಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದ ಗೌತಮ್ ಅದಾನಿ, ಇದೀಗ ಬಂದರು, ವಿಮಾನ ನಿಲ್ದಾಣಗಳು, ಸೌರ ವಿದ್ಯುತ್, ಅನಿಲ– ಹೀಗೆ ಹತ್ತಾರು ವಲಯಗಳಲ್ಲಿ ಹೂಡಿಕೆ ಮಾಡಿದ್ದಾರೆ. ತಮ್ಮ ಉದ್ಯಮ ಸಾಮ್ರಾಜ್ಯವನ್ನು ಕೇವಲ ಭಾರತಕ್ಕಷ್ಟೇ ಸೀಮಿತಗೊಳಿಸದೆ, ಬಾಂಗ್ಲಾದೇಶ, ಚೀನಾ, ಅಮೆರಿಕವರೆಗೂ ವಿಸ್ತರಿಸಿದ್ದಾರೆ. ತಮ್ಮ ಉದ್ಯಮ ಸಾಮ್ರಾಜ್ಯವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಅಮೆರಿಕಕ್ಕೆ ಕಾಲಿಟ್ಟದ್ದೇ ಅವರ ಪಾಲಿಗೀಗ ಮುಳುವಾಗಿ ಪರಿಣಮಿಸಿದೆ.
ಏನಿದು ಪ್ರಕರಣ?
ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಕೇಂದ್ರ ಸರಕಾರಿ ಸ್ವಾಮ್ಯದ ಉದ್ಯಮವಾಗಿದ್ದು, ಭಾರತದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಅಭಿವೃದ್ಧಿ ಮತ್ತು ವಿಸ್ತರಣೆಯ ಹೊಣೆಗಾರಿಕೆಯನ್ನು ಹೊಂದಿದೆ. ಈ ಸಂಸ್ಥೆಯ ಅಂತರ್ಜಾಲ ತಾಣದ ಮಾಹಿತಿಯ ಪ್ರಕಾರ, ಸೋಲಾರ್ ಎನರ್ಜಿ ಕಾರ್ಪೊರೇಷನ್ ಇಂಡಿಯಾ ಸಂಸ್ಥೆಯು ಭಾರತದಲ್ಲಿನ ನವೀಕರಿಸಬಹುದಾದ ಇಂಧನ ಅನುಷ್ಠಾನ ಏಜೆನ್ಸಿಗಳ ಪೈಕಿ ಒಂದಾಗಿದೆ.
ಈ ಸಂಸ್ಥೆಯು ಸೌರ ವಿದ್ಯುತ್ ಉತ್ಪಾದನೆಯಲ್ಲಿ ತೊಡಗುವ ಕಂಪನಿಗಳಿಗೆ ಪ್ರೋತ್ಸಾಹಗಳನ್ನು ನೀಡುವುದಾಗಿ ಘೋಷಿಸಿತು. ಅಂತಹ ಕಂಪನಿಗಳು ಉತ್ಪಾದಿಸುವ ವಿದ್ಯುತ್ ಅನ್ನು ಖರೀದಿಸುವ ಖಾತರಿ ನೀಡುವ ಒಪ್ಪಂದವನ್ನು ಅವುಗಳೊಂದಿಗೆ ಮಾಡಿಕೊಳ್ಳುವ ಭರವಸೆಯನ್ನೂ ನೀಡಿತು. ಇದರ ಪ್ರಯೋಜನವನ್ನು ಅದಾನಿ ಗ್ರೀನ್ ಪಡೆದುಕೊಂಡಿತು.
ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾವೇನೋ ಅದಾನಿ ಗ್ರೀನ್ ಕೇಳಿದ ಬೆಲೆಗೆ ವಿದ್ಯುತ್ ಖರೀದಿಸಲು ಒಪ್ಪಿಕೊಂಡಿತಾದರೂ, ಇಂಥದೇ ವಿದ್ಯುತ್ ಖರೀದಿ ಒಪ್ಪಂದಗಳನ್ನು ರಾಜ್ಯ ವಿದ್ಯುತ್ ಪ್ರಸರಣ ಮಂಡಳಿಗಳೊಂದಿಗೂ ಮಾಡಿಕೊಳ್ಳಬೇಕಿತ್ತು. ಆದರೆ, ಅದಾನಿ ಗ್ರೀನ್ ಕಂಪನಿ ಪೂರೈಸುವ ವಿದ್ಯುತ್‌ಗೆ ಖರೀದಿದಾರರನ್ನು ಹುಡುಕುವಲ್ಲಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ವಿಫಲಗೊಂಡಿತ್ತು. ಇದಾದ ನಂತರ ರಂಗ ಪ್ರವೇಶಿಸಿದ್ದ ಗೌತಮ್ ಅದಾನಿ ಮತ್ತು ಅವರ ಕಂಪನಿಯ ಅಧಿಕಾರಿಗಳು ರಾಜ್ಯ ವಿದ್ಯುತ್ ಪ್ರಸರಣ ಸಂಸ್ಥೆಗಳ ಅಧಿಕಾರಿಗಳನ್ನು ವೈಯಕ್ತಿಕವಾಗಿ ಸಂಪರ್ಕಿಸಿದ್ದರು ಹಾಗೂ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ವಿದ್ಯುತ್ ಖರೀದಿಗೆ ಅವರ ಮನವೊಲಿಸಲು ರೂ. 2,000 ಕೋಟಿಗೂ ಹೆಚ್ಚು ಮೊತ್ತದ ಲಂಚದ ಆಮಿಷವೊಡ್ಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ?: ಅದಾನಿಯನ್ನು ತಕ್ಷಣ ಬಂಧಿಸಿ: ರಾಹುಲ್ ಗಾಂಧಿ ಆಗ್ರಹ
ಅದಾನಿ ಗ್ರೀನ್ ಕಂಪನಿಯು ವಿದ್ಯುತ್ ಖರೀದಿ ಒಪ್ಪಂದಗಳಿಗಾಗಿ ಭಾರತದಲ್ಲಿನ ಅಧಿಕಾರಿಗಳಿಗೆ ಲಂಚ ನೀಡಿದ್ದರೂ, ಅವೇ ಯೋಜನೆಗಳಿಗೆ ಅಮೆರಿಕದಲ್ಲಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ತಮ್ಮ ಕಂಪನಿಯು ಅಮೆರಿಕದ ಲಂಚ ನಿಗ್ರಹ ಕಾನೂನುಗಳನ್ನು ಪಾಲಿಸಿದೆ ಎಂಬ ಸುಳ್ಳು ಭರವಸೆಯನ್ನು ಅಮೆರಿಕ ಹೂಡಿಕೆದಾರರಿಗೆ ನೀಡಿ ವಂಚಿಸಿದ್ದಾರೆ ಎಂದೂ ಆರೋಪಿಸಲಾಗಿದೆ. ಈ ಆರೋಪಗಳನ್ನು ಆಧರಿಸಿ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಲಯವೊಂದು ಗೌತಮ್ ಅದಾನಿ, ಅವರ ಸಹೋದರನ ಪುತ್ರ ಸಾಗರ್ ಅದಾನಿ ಹಾಗೂ ಅದಾನಿ ಗ್ರೀನ್ ಕಂಪನಿಯ ಇತರ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು ಎಂಟು ಮಂದಿ ವಿರುದ್ಧ ಬಂಧನದ ವಾರೆಂಟ್ ಜಾರಿಗೊಳಿಸಿದೆ.
ಮೋದಿ-ಅದಾನಿ ಕುಚಿಕು ಸ್ನೇಹ
2001ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗುವುದರೊಂದಿಗೆ ಪ್ರಾರಂಭಗೊಂಡ ಮೋದಿ-ಅದಾನಿ ಕುಚುಕು ಸ್ನೇಹ ಎರಡು ದಶಕಗಳ ನಂತರವೂ ಬಲಿಷ್ಠವಾಗಿ ಉಳಿದಿದೆ ಮಾತ್ರವಲ್ಲ; ಮತ್ತಷ್ಟು ಗಾಢವಾಗಿದೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗುವವರೆಗೂ ಸಾಮಾನ್ಯ ಉದ್ಯಮಿಯಾಗಿದ್ದ ಗೌತಮ್ ಅದಾನಿ, ನಂತರ ಹಿಂದಿರುಗಿ ನೋಡಿದ್ದೇ ಇಲ್ಲ. ಗುಜರಾತ್ ಮಾಡೆಲ್, ವೈಬ್ರೆಂಟ್ ಗುಜರಾತ್ ಪರಿಕಲ್ಪನೆಯ ಹಿಂದೆ ಕೆಲಸ ಮಾಡಿದ್ದೂ ಕೂಡಾ ಇದೇ ಅದಾನಿ. ಹೀಗಾಗಿಯೇ, ಗುಜರಾತ್‌ನಲ್ಲಿ ನರಮೇಧ ನಡೆದರೂ, ನರೇಂದ್ರ ಮೋದಿಯ ರಾಜಕೀಯ ಬದುಕಿಗೆ ಹಿನ್ನಡೆಯಾಗಲಿಲ್ಲ. ಬದಲಿಗೆ ಅವರು ಹಿಂದೂ ಹೃದಯ ಸಾಮ್ರಾಟರಾಗಿ ವಿರಾಜಮಾನರಾದರು. ತಮ್ಮನ್ನು 56 ಇಂಚಿನ ನಾಯಕನನ್ನಾಗಿಸಲು ತನು, ಮನ, ಧನ ಧಾರೆಯೆರೆದ ಅದಾನಿಯನ್ನು ಮೋದಿ ಯಾವ ಹಂತದಲ್ಲೂ ಕೈಬಿಟ್ಟಿಲ್ಲ. ಬಿಡುವ ಸೂಚನೆಯೂ ಇಲ್ಲ. ಅದಕ್ಕೆ ಜ್ವಲಂತ ನಿದರ್ಶನವೇ ಅದಾನಿ ವಿರುದ್ಧ ಅಮೆರಿಕದಲ್ಲಿ ಸಲ್ಲಿಕೆಯಾಗಿರುವ ದೋಷಾರೋಪ.
ಅದಾನಿ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಅಮೆರಿಕ ತನಿಖಾ ಸಂಸ್ಥೆಗಳು ಮಾಡಿದ್ದರೂ, ಆ ಭ್ರಷ್ಟಾಚಾರಗಳು ನಡೆದಿದೆಯನ್ನಲಾಗಿರುವುದು ಭಾರತದಲ್ಲಿ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೇಳಿ ಬರುವ ಸಣ್ಣಪುಟ್ಟ ಆರೋಪಗಳಿಗೂ ಸಿಬಿಐ, ಇಡಿ, ಐಟಿ ತನಿಖೆ ನಡೆಸಿ ಕಿರುಕುಳ ನೀಡುವ ಮೋದಿ ಸರಕಾರ, ರೂ. 2000 ಕೋಟಿಗಿಂತ ಹೆಚ್ಚು ಮೊತ್ತದ ಲಂಚ ಪ್ರಕರಣದಲ್ಲಿ ಈವರೆಗೆ ಯಾವುದೇ ತನಿಖೆಗೆ ಚಾಲನೆ ನೀಡಿಲ್ಲ. ಇನ್ನೂ ಆಘಾತಕಾರಿ ಸಂಗತಿಯೆಂದರೆ, ಗೌತಮ್ ಅದಾನಿಯನ್ನು ಸ್ವತಃ ಬಿಜೆಪಿಯೇ ಮುಂದೆ ನಿಂತು ಸಮರ್ಥಿಸಿಕೊಳ್ಳತೊಡಗಿದೆ. ಅಲ್ಲಿಗೆ ಮೋದಿ-ಅದಾನಿ ನಡುವಿನ ಸ್ನೇಹ ಅದೆಷ್ಟು ಗಾಢ ಎಂಬುದು ಯಾರಿಗಾದರೂ ಅರ್ಥವಾಗಬಲ್ಲದು.
ಎಲ್ಲ ಪಕ್ಷಗಳ ನಾಯಕರೊಂದಿಗೂ ಸ್ನೇಹ ಸಂಬಂಧ
ಸಾಮಾನ್ಯ ವ್ಯಾಪಾರಿಯಾಗಿದ್ದ ಗೌತಮ್ ಅದಾನಿ, ಇಂದು ವಿಶ್ವದ ಪ್ರಭಾವಶಾಲಿ ಉದ್ಯಮಿಯಾಗುವ ಹಂತಕ್ಕೆ ಬೆಳೆಯುವಲ್ಲಿ ಅವರಿಗೆ ಪಕ್ಷಾತೀತವಾಗಿ ಇರುವ ಸ್ನೇಹ ಸಂಬಂಧಗಳು ಕಾರಣ. ಆರಂಭದ ದಿನಗಳಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ಕೃಪಾಕಟಾಕ್ಷಕ್ಕೊಳಗಾಗಿದ್ದ ಗೌತಮ್ ಅದಾನಿ, ಎನ್‌ಸಿಪಿ ವರಿಷ್ಠ ಶರದ್ ಪವಾರ್‍ರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಇನ್ನು ಬಿಜೆಪಿಯೊಂದಿಗಿನ ಅವರ ಸಂಬಂಧವಂತೂ ಗಳಸ್ಯ ಕಂಠಸ್ಯ. ಹೀಗಾಗಿಯೇ, ಒಂದು ಕಾಲದಲ್ಲಿ ಇಡೀ ಏಶ್ಯದಲ್ಲೇ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದ ಮುಕೇಶ್ ಅಂಬಾನಿಯನ್ನೂ ಹಿಂದಿಕ್ಕಿ, ಆ ಸ್ಥಾನಕ್ಕೆ ಗೌತಮ್ ಅದಾನಿ ಏರಿದ್ದಾರೆ.
ಜೆಪಿಸಿ ತನಿಖೆಗೆ ರಾಹುಲ್ ಗಾಂಧಿ ಪಟ್ಟು
ಗೌತಮ್ ಅದಾನಿಯೊಂದಿಗೆ ಮೊದಲಿನಿಂದಲೂ ಅಂತರ ಕಾಯ್ದುಕೊಂಡು ಬಂದಿರುವ ಏಕೈಕ ರಾಜಕಾರಣಿ ರಾಹುಲ್ ಗಾಂಧಿ. ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ನಾಶಪಡಿಸಲು ಗೌತಮ್ ಅದಾನಿ ತೆರೆಮರೆಯಲ್ಲಿ ಬಿಜೆಪಿಗೆ ನೆರವು ನೀಡುತ್ತಿದ್ದಾರೆ ಎಂಬ ಸಂಗತಿ ತಿಳಿದ ಮೇಲಂತೂ ರಾಹುಲ್ ಗಾಂಧಿ ಹೆಡೆ ಮೆಟ್ಟಿದ ಹಾವಿನಂತಾಗಿದ್ದಾರೆ. ಅಮೆರಿಕ ತನಿಖಾ ಸಂಸ್ಥೆಗಳು ಗೌತಮ್ ಅದಾನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುತ್ತಿದ್ದಂತೆಯೇ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಿರುವ ರಾಹುಲ್ ಗಾಂಧಿ, ಗೌತಮ್ ಅದಾನಿಯನ್ನು ಬಂಧಿಸಬೇಕು ಹಾಗೂ ಅದಾನಿ ಸಮೂಹದ ಅಕ್ರಮಗಳ ಕುರಿತು ಜಂಟಿ ಸದನ ಸಮಿತಿ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಗೌತಮ್ ಅದಾನಿಯೊಂದಿಗಿನ ನಂಟಿನ ಕಾರಣಕ್ಕೇ ನರೇಂದ್ರ ಮೋದಿ ಇದಕ್ಕೆ ಅವಕಾಶ ನೀಡುವ ಸಾಧ್ಯತೆ ಕಡಿಮೆ.
ಇದನ್ನು ಓದಿದ್ದೀರಾ?: ಮೋದಿ ಮಿತ್ರ ಅದಾನಿಗೆ ಮಹಾರಾಷ್ಟ್ರ-ರಾಜಸ್ಥಾನ ವಿದ್ಯುತ್ ಗುತ್ತಿಗೆ: ಇದು ಸಂಘಟಿತ ಭ್ರಷ್ಟಾಚಾರವಲ್ಲವೇ?
ತಮ್ಮ ಆಪ್ತ ಉದ್ಯಮಿ ಗೌತಮ್ ಅದಾನಿಯನ್ನು ರಾಜ ಮಾರ್ಗದಲ್ಲಿ ಬೆಳೆಸುವ ಬದಲು, ಅಡ್ಡ ದಾರಿಯಲ್ಲಿ ಬೆಳೆಸಲು ನರೇಂದ್ರ ಮೋದಿ ಮುಂದಾಗಿದ್ದರಿಂದ ದೇಶದ ಆರ್ಥಿಕತೆಗೆ ಭಾರಿ ನಷ್ಟವುಂಟಾಗಿರುವುದಕ್ಕೆ ಈಗಾಗಲೇ ಹಲವಾರು ಸಾಕ್ಷ್ಯಗಳು ದೊರೆಯತೊಡಗಿವೆ. ಹೀಗೆ ಅಡ್ಡ ದಾರಿಯಲ್ಲಿ ತನ್ನ ಸಾಮ್ರಾಜ್ಯವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಹವಣಿಸಿದ್ದ ಗೌತಮ್ ಅದಾನಿ ವಿರುದ್ಧ ಅಮೆರಿಕ ತನಿಖಾ ಸಂಸ್ಥೆಗಳು ದೋಷಾರೋಪ ಹೊರಿಸುತ್ತಿದ್ದಂತೆಯೆ, ಅವರಿಗೆ ಒಂದೇ ದಿನದಲ್ಲಾಗಿರುವ ನಷ್ಟ ಬರೋಬ್ಬರಿ ಎರಡು ಲಕ್ಷ ಕೋಟಿ ರೂಪಾಯಿ! ಹೀಗಾಗಿಯೇ ಗುರಿಯಷ್ಟೇ ಮಾರ್ಗವೂ ಮುಖ್ಯ ಎಂದು ಗಾಂಧೀಜಿ ಹೇಳಿದ್ದದ್ದು.
ಕೊನೆಯದಾಗಿ, ಗೌತಮ್ ಅದಾನಿ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಆಪ್ತರಾಗಿರುವುದರಿಂದ, ಇಲ್ಲಿನ ತನಿಖಾ ಸಂಸ್ಥೆಗಳು ಅವರ ಒಂದು ಕೂದಲೂ ಕೊಂಕಲು ಬಿಡುವುದಿಲ್ಲ ಎಂಬುದು ನಿಸ್ಸಂಶಯ. ಆದರೆ, ಗೌತಮ್ ಅದಾನಿ ವಿರುದ್ಧ ಲಂಚದ ದೋಷಾರೋಪ ಹೊರಿಸಿರುವುದು ಅಮೆರಿಕದ ಪ್ರತಿಷ್ಠಿತ ಎಫ್‌ಬಿಐ ತನಿಖಾ ಸಂಸ್ಥೆ. ಈ ತನಿಖಾ ಸಂಸ್ಥೆ ನಮ್ಮ ಸಿಬಿಐನಂತೆ ಪಂಜರದ ಗಿಳಿಯಲ್ಲ ಎಂಬ ಸತ್ಯವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೌತಮ್ ಅದಾನಿಯ ನಿದ್ದೆಗೆಡಿಸುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿಯ ಆಪ್ತ ಗೆಳೆಯರಾದ ಟ್ರಂಪಾಪತಿಗಳೂ ಅದಾನಿಯನ್ನು ರಕ್ಷಿಸಲು ಸಾಧ್ಯೌವಿಲ್ಲವೇನೊ? ಆ ಮೂಲಕ ನರೇಂದ್ರ ಮೋದಿಯನ್ನೂ?!

ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ