ತಮಿಳುನಾಡಿನ ವಕೀಲ ಹತ್ಯೆಯನ್ನು ಖಂಡಿಸಿ, ಮೃತನ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ರಾಯಚೂರು ಜಿಲ್ಲಾ ನ್ಯಾಯವಾದಿಗಳ ಸಂಘದಿಂದ ಜಿಲ್ಲಾಡಳಿತದ ಮೂಲಕ ತಮಿಳುನಾಡು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
“ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನ್ಯಾಯಾಲಯದ ಆವರಣದಲ್ಲಿ ನವೆಂಬರ್ 20ರಂದು ಆರೋಪಿ ಆನಂದ್ ಎಂಬಾತ ವಕೀಲ ಕೃಷ್ಣನ್ ಎಂಬುವವರನ್ನು ಕೊಲೆ ಮಾಡಿದ್ದಾನೆ. ನಿತ್ಯ ವಕೀಲರ ಮೇಲೆ ಹತ್ಯೆ, ಕೊಲೆಯಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ವಿಕ್ರಂ ಗೌಡ ಎನ್’ಕೌಂಟರ್ ; ಸೂಕ್ತ ತನಿಖೆಗೆ ಆಗ್ರಹಿಸಿ ದಸಂಸ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ
“ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳ ಆವಣದ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಹಾಗೂ ವಕೀಲರಿಗೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ವಕೀಲರು ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಪ್ಪ ಭಂಡಾರಿ, ವಕೀಲರಾದ ಹನುಮಂತ ಮೇಟಿ, ಸೈಯದ್ ನವಾಜ್ ಪಾಶ, ಜಹೀರ್ ಪಾಶ ಸೇರಿದಂತೆ ಇತರರು ಇದ್ದರು.
