ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ಇಂದು (ಶನಿವಾರ) ನಡೆಯುತ್ತಿದೆ.
ಆಡಳಿತಾರೂಢ ಕಾಂಗ್ರೆಸ್, ಮೈತ್ರಿ ಪಕ್ಷಗಳಾದ ಬಿಜೆಪಿ-ಜೆಡಿಎಸ್‌ಗೆ ಪ್ರತಿಷ್ಠೆಯಾಗಿದ್ದ ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಯಾರು ಸಾಧಿಸಲಿದ್ದಾರೆ ಎಂಬುದಕ್ಕೆ 11 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಮೂರೂ ಕ್ಷೇತ್ರಗಳಿಗೆ ನವೆಂಬರ್ 13ರಂದು ಮತದಾನ ನಡೆದಿತ್ತು. ಆಯಾ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಬೆಳಿಗ್ಗೆ 8ರಿಂದ ಆರಂಭವಾಗಲಿದೆ. ಎಲ್ಲ ಕೇಂದ್ರಗಳಲ್ಲಿಯೂ ಮತ ಎಣಿಕೆಗೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇವಿಎಂ ಯಂತ್ರಗಳಲ್ಲಿ ಚಲಾವಣೆಯಾದ ಮತಗಳ ಎಣಿಕೆಗೂ ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ನೆರವೇರಲಿದೆ. ಕಡಿಮೆ ಅಭ್ಯರ್ಥಿಗಳಿರುವ ಸಂಡೂರು, ಶಿಗ್ಗಾವಿ ಕ್ಷೇತ್ರದ ಫಲಿತಾಂಶ ಬಹುಬೇಗ ದೊರಕಬಹುದು. ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದ ಚನ್ನಪಟ್ಟಣ ಕ್ಷೇತ್ರದ ಫಲಿತಾಂಶ ಮಧ್ಯಾಹ್ನದ ವೇಳೆಗೆ ಸಿಗುವ ನಿರೀಕ್ಷೆ ಇದೆ.
ಚನ್ನಪಟ್ಟಣ: ಎಣಿಕೆ ಕೇಂದ್ರದ ಹೊರಭಾಗದಲ್ಲಿ ಜನ
ರಾಮನಗರದ ಚನ್ನಪಟ್ಟಣ ಉಪ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹಾಗೂ ಚನ್ನಪಟ್ಟಣ ಚುನಾವಣಾಧಿಕಾರಿ ಬಿನೋಯ್ ಪಿ.ಕೆ ಸಮ್ಮುಖದಲ್ಲಿ ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂ ಅನ್ನು ಸಿಬ್ಬಂದಿ ತೆರೆದರು. ನಂತರ ಸ್ಟ್ರಾಂಗ್ ರೂಂನಲ್ಲಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ಎಣಿಕೆ ಕೊಠಡಿಗೆ ಸ್ಥಳಾಂತರಿಸಲಾಯಿತು. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯುತ್ತಿದೆ. ನಂತರ ಇವಿಎಂಗಳ ಎಣಿಕೆ ಶುರುವಾಗಲಿದೆ. ಕ್ಷೇತ್ರದ ಫಲಿತಾಂಶವು ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು ಎಣಿಕೆ ಕೇಂದ್ರದ ಹೊರಭಾಗದಲ್ಲಿ ಜಮಾಯಿಸಿದ್ದಾರೆ.
ಶಿಗ್ಗಾಂವಿ: ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಶಿಗ್ಗಾಂವಿ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ 8 ಗಂಟೆಗೆ ಆರಂಭವಾಗಿದೆ. ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ಆರಂಭವಾಗುತ್ತದೆ. ನಂತರ ಇವಿಎಂ ಮತಗಳ ಎಣಿಕೆ ಆರಂಭಾಗಲಿದೆ. ಮತ ಎಣಿಕೆಗೆ ಪ್ರತಿ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು ಹಾಗೂ ಒಬ್ಬರು ಎಣಿಕೆ ಸಹಾಯಕರು ನೇಮಕ ಮಾಡಿಲಾಗಿದೆ. ಹಾಗೇ ಒಬ್ಬರು ಎಣಿಕೆ ಮೈಕ್ರೋ ಅಬ್ಸರವರ್ ನೇಮಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬಂದೋಬಸ್ತ್ ಮಾಡಲಾಗಿದೆ.
ನಾಲ್ವರು ಡಿವೈಎಸ್ಪಿ ಹಾಗೂ 9 ಸಿಪಿಐ, 25 ಪಿಎಸ್ಐ, 29 ಎಎಸ್ಐ, 250 ಕಾನ್ಸ್ಟೇಬಲ್, ಹೆಡ್ಕಾನ್ಸ್ಟೇಬಲ್, ಕೆಎಸ್ಆರ್ಪಿಯ ಎರಡು ತುಕಡಿ ಮತ್ತು ಭದ್ರತೆಗೆ 4 ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಸಂಡೂರ ಕ್ಷೇತ್ರ- ಬಿಜೆಪಿ ಗೆಲ್ಲಲಿದೆ: ಬಂಗಾರಿ ಹನುಮಂತ ವಿಶ್ವಾಸ
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,348 ಮತದಾರರಿದ್ದು ಈ ಬಾರಿ 1,80,189 ಮತಗಳು ಚಲಾವಣೆಯಾಗಿವೆ. 1,17,885 ಪುರುಷರ ಪೈಕಿ 99,922 ಮತದಾನ ಮಾಡಿದ್ದಾರೆ. 1,18,435 ಮಹಿಳೆಯರ ಪೈಕಿ, ಮತದಾನದ ಮಾಡಿದವರು 88,255 ಮಾತ್ರ. ಈ ಅಂಶ ಕಾಂಗ್ರೆಸ್ ತಲೆ ಕೆಡಿಸಿದೆ.
“ಸಂಡೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ” ಎಂದು ಬಿಜೆಪಿ ಅಭ್ಯರ್ಥಿ ಬಂಗಾರಿ ಹನುಮಂತ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ ಎಣಿಕೆ ಕೇಂದ್ರದ ಬಳಿ ಮಾತನಾಡಿದ ಅವರು, “ಸಂಡೂರು ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಬಿಜೆಪಿ ನಾಯಕರು ಈ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿದ್ದೇವೆ. ಕಾಂಗ್ರೆಸ್ ಈ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನ ಕ್ಷೇತ್ರದಲ್ಲಿ ಇದ್ದರು. 14 ವರ್ಷಗಳ ಬಳಿಕ ಜನಾರ್ಧನರೆಡ್ಡಿ ಜಿಲ್ಲೆಗೆ ಬಂದಿರುವುದು ನಮಗೆ ಅನುಕೂಲ ಆಗಿದೆ” ಎಂದರು.