ದೇಶದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ.
ಹಾಗೆಯೇ ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಮತ್ತು ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಲಿದೆ.
ಜಾರ್ಖಂಡ್ : ಎರಡು ಹಂತದಲ್ಲಿ ಮತದಾನ ನಡೆದಿತ್ತು
ಜಾರ್ಖಂಡ್ ವಿಧಾನಸಭೆ ಚುನಾವಣೆ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎದುರಿಸಿದ ಆಘಾತದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಚೇತರಿಸಿಕೊಳ್ಳಲಿದೆಯೇ ಅಥವಾ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ತನ್ನ ಸಾಧನೆಯನ್ನು ಉತ್ತಮಪಡಿಸಿಕೊಳ್ಳಲಿದೆಯೇ ಎಂಬುದು ಈ ಫಲಿತಾಂಶದಿಂದ ಗೊತ್ತಾಗಲಿದೆ.
ಯಾವ ಪಾಳಯ ಸರಳ ಬಹುಮತದತ್ತ ಸಾಗುತ್ತಿದೆ ಎಂಬುದು ಮಧ್ಯಾಹ್ನದ ವೇಳೆಗೆ ಬಹುತೇಕ ನಿಚ್ಚಳವಾಗಲಿದೆ. ಜಾರ್ಖಂಡ್‌ನ ಮೊದಲ ಹಂತದ ಮತದಾನ ನ. 13ರಂದು ನಡೆದಿತ್ತು. ಜಾರ್ಖಂಡ್‌ನ ಎರಡನೇ ಹಂತದ 38 ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆದಿತ್ತು.
ಮಹಾರಾಷ್ಟ್ರದಲ್ಲಿ ತೀವ್ರ ಪೈಪೋಟಿ
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ ಅಘಾಡಿ (MVA) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನವೆಂಬರ್ 20 ರಂದು ಮತದಾನ ನಡೆದಿದ್ದು, ಫಲಿತಾಂಶ ಇಂದು (ನವೆಂಬರ್ 23) ಪ್ರಕಟವಾಗಲಿದೆ.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಬೆಳಿಗ್ಗೆ 9.30 ರ ಸುಮಾರಿಗೆ EVM ಮತಗಳ ಎಣಿಕೆ ಆರಂಭವಾಗುವ ನಿರೀಕ್ಷೆಯಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಮತ್ತೆ ಅಧಿಕಾರಕ್ಕೆ ಬರುವ ಗುರಿಯೊಂದಿಗೆ ಸ್ಪರ್ಧಿಸುತ್ತಿದೆ. ಮಹಾ ವಿಕಾಸ ಅಘಾಡಿ ಮಹಾಯುತಿಯನ್ನು ಸೋಲಿಸಲು ಪ್ರಯತ್ನಿಸುತ್ತಿದೆ. ಮಹಾಯುತಿಯಲ್ಲಿ ಬಿಜೆಪಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಿವೆ. ಮಹಾ ವಿಕಾಸ ಅಘಾಡಿಯಲ್ಲಿ ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (UBT) ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ (NCP-SP) ಸೇರಿವೆ.
ವಯನಾಡು: ಪ್ರಿಯಾಂಕಾ ಗಾಂಧಿ ಮುನ್ನಡೆ
ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಕಾಂಗ್ರೆಸ್ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು 2,750 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.