ಚಿತ್ರದುರ್ಗ | ಬೀದಿ ನಾಯಿಗಳ ದಾಳಿಗೆ ಹೈರಾಣಾದ ಜನ; ಸ್ಥಳೀಯ ಆಡಳಿತ ನಿರ್ಲಕ್ಷ್ಯ, ಆರೋಪ

Date:

Advertisements

ಹಿಂಡು ಹಿಂಡಾಗಿ ಐದರಿಂದ ಹತ್ತು ನಾಯಿಗಳು ಗುಂಪಾಗಿ ಮಲಗಿರುವ, ಓಡಾಡುವ ದೃಶ್ಯ ಇಲ್ಲಿ ಸರ್ವೇಸಾಮಾನ್ಯ. ಇಲ್ಲಿನ ಬೀದಿ ನಾಯಿಗಳ ದಾಳಿಗೆ ಹೆದರಿರುವ ಜನರು ರಸ್ತೆಗಳಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಟ ನಡೆಸುವ ಪರಿಸ್ಥಿತಿ ಎದುರಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಅಜ್ಜನ ಗುಡಿ ರಸ್ತೆ, ಸೋಮಗುದ್ಧು ರಸ್ತೆ, ಅಜ್ಜನ ಗುಡಿ ರಸ್ತೆಯ ಮಟನ್ ಮಾರ್ಕೆಟ್ ಸುತ್ತಮುತ್ತಲ ರಹೀಮ್ ನಗರ, ಕಾಟಪ್ಪನಹಟ್ಟಿ, ಗೊಲ್ಲರಹಟ್ಟಿ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ಚಳ್ಳಕೆರೆ ತಾಲೂಕಿನ ಗ್ರಾಮಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಮುಂಜಾನೆ, ಸಂಜೆ ಮತ್ತು ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಮಕ್ಕಳು, ಮಹಿಳೆಯರು, ಜನಗಳು ಜೀವಭಯದಿಂದ ಓಡಾಡುವಂತಾಗಿದೆ.

ಅಜ್ಜನ ಗುಡಿ ರಸ್ತೆಯ ಕೋಳಿ ಮತ್ತು ಮೀನಿನ ಅಂಗಡಿಗಳ ತ್ಯಾಜ್ಯಗಳಿಗಾಗಿ ಮತ್ತು ಇದೇ ರಸ್ತೆಯ ಕೊನೆಯ ಭಾಗದಲ್ಲಿರುವ ಮಟನ್ ಮಾರ್ಕೆಟ್‌ನ ಸುತ್ತಮುತ್ತಲ ಪ್ರದೇಶಗಳಲ್ಲಿ ಸೋಮಗುದ್ದು ರಸ್ತೆಯ ಮಾಂಸದ ಅಂಗಡಿಗಳ ಮುಂದೆ, ಮಾಕಂ ಶಾಲೆಯ ಬಳಿ ಕಸ ಸುರಿವ ಜಾಗಗಳಲ್ಲಿ ಹಿಂಡಾಗಿ ಇರುವ ನಾಯಿಗಳು ಅಕ್ಕಪಕ್ಕದ ಜನವಸತಿ ಪ್ರದೇಶಗಳಲ್ಲಿ ಬಂದು ಮಲಗುತ್ತವೆ. ಇವುಗಳು ಯಾವ ಸಮಯದಲ್ಲಿ ಯಾರ ಮೇಲೆ ದಾಳಿ ಮಾಡುತ್ತವೆಯೋ? ಎನ್ನುವ ಆತಂಕ ನಗರದ ನಿವಾಸಿಗಳಿಗೆ ಕೂಡ ಎದುರಾಗಿದೆ.

Advertisements

ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ತಿಂಗಳು ತಾನೇ ಮೊಳಕಾಲ್ಮುರು ತಾಲೂಕಿನ ರಾಂಪುರ ಗ್ರಾಮದಲ್ಲಿ 12 ವರ್ಷದ ಬಾಲಕ ಸಂಜೆ ವೇಳೆಯಲ್ಲಿ ತೆರಳುತ್ತಿದ್ದಾಗ ದಾಳಿ ಮಾಡಿದ ಬೀದಿ ನಾಯಿಗಳು ಗಂಭೀರವಾಗಿ ಗಾಯಗೊಳಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯುವ ಮಧ್ಯೆಯೇ ಬಾಲಕ ಅಸುನೀಗಿದ್ದನು. ಮೂರ್ನಾಲ್ಕು ತಿಂಗಳ ಹಿಂದೆ ಚಿತ್ರದುರ್ಗದ ಬಳಿ ಗ್ರಾಮ ಒಂದರಲ್ಲಿ ಯಶಸ್ ಎನ್ನುವ ಹನ್ನೊಂದು ವರ್ಷದ ಬಾಲಕ ಬೀದಿ ನಾಯಿಗಳಿಂದ ಗಂಭೀರ ಗಾಯಗೊಂಡಿದ್ದು, ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಎಲ್ಲರ ಮನಸಿನಲ್ಲಿ ಹಾಗೆ ಉಳಿದಿದೆ. 

ಇಂತಹ ಘಟನೆಗಳು ತಾಲೂಕಿನಲ್ಲಿ, ಅಕ್ಕಪಕ್ಕದ ತಾಲೂಕುಗಳಲ್ಲಿ, ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ನಮಗೂ ಅದಕ್ಕೂ ಸಂಬಂಧವಿಲ್ಲದಂತೆ ಕುಳಿತಿರುವುದು ಜನಾಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳ ದಿವ್ಯನಿರ್ಲಕ್ಷ್ಯ ಎದ್ದು ತೋರುತ್ತಿದೆ.

ಈ ಬಗ್ಗೆ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಾಗ ಅಕ್ಟೋಬರ್ ತಿಂಗಳಲ್ಲಿ ಸುಮಾರು 90ಕ್ಕೂ ಹೆಚ್ಚು ನಾಯಿ ಕಡಿದ ಪ್ರಕರಣಗಳು ದಾಖಲಾಗಿವೆ. ಇದೇ ವರ್ಷದ ಏಪ್ರಿಲ್ 1ರಿಂದ ಅಕ್ಟೋಬರ್ 31ರವರೆಗೆ ಒಟ್ಟು 873 ಪ್ರಕರಣಗಳು ಚಳ್ಳಕೆರೆ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿರುವುದು ಬೀದಿ ನಾಯಿಗಳ ದಾಳಿಯ ತೀವ್ರತೆಯನ್ನು ತೆರೆದಿಡುತ್ತದೆ. 

ಇಷ್ಟೆಲ್ಲಾ ಅವಾಂತರಗಳಾದರೂ ಪ್ರಕರಣಗಳು ದಾಖಲಾಗುತ್ತಿದ್ದರೂ ಈ ಬಗ್ಗೆ ಸ್ಥಳೀಯ ಆಡಳಿತ ಗಮನಹರಿಸಿಲ್ಲ ಎಂಬುದೇ ವಿಪರ್ಯಾಸ. ಈ ಅಂಕಿ ಅಂಶಗಳು ಅಧಿಕಾರಿಗಳಿಗೆ ತಿಳಿದಿಲ್ಲವೇ? ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲವೇ? ಎಂಬುದು ಪ್ರಶ್ನೆಯಾಗಿದೆ. ಇದೇ ಜಿಲ್ಲೆಯ ಪಕ್ಕದ ಮೊಳಕಾಲ್ಮೂರು ತಾಲೂಕು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಕಾರ್ಯರೂಪಕ್ಕೆ ತರಲಾಗಿದೆ. ಎರಡೇ ದಿನಗಳಲ್ಲಿ ಮೊಳಕಾಲ್ಮುರು ತಾಲೂಕಿನಲ್ಲಿ 600 ನಾಯಿಗಳ ನಿಯಂತ್ರಣ ಮಾಡಲಾಗಿದೆ. ಆದರೆ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

“ಮಾಂಸದ ಅಂಗಡಿಗಳಿಗಾಗಿ ಅಜ್ಜನ ಗುಡಿ ರಸ್ತೆಯ ಕೊನೆಯಲ್ಲಿ ಮಟನ್ ಮಾರ್ಕೆಟ್ ಪ್ರಾಂಗಣ ತೆರೆದಿದ್ದು, ಒಟ್ಟು 33 ಮಳಿಗೆಗಳಿವೆ.‌ ಅದರಲ್ಲಿ 7 ಮಳಿಗೆಗಳಲ್ಲಿ ಮಾತ್ರ ಅಂಗಡಿಗಳು ನೆಡೆಯುತ್ತಿದ್ದು, 26 ಮಳಿಗೆಗಳು ಖಾಲಿ ಬಿದ್ದಿದ್ದರೂ  ನಗರದ ಮಧ್ಯ ಭಾಗದಲ್ಲಿರುವ ಮಾಂಸ ಮಾರಾಟ ಅಂಗಡಿಗಳನ್ನು ಸ್ಥಳಾಂತರಿಸಲು ಕ್ರಮಕೈಗೊಂಡಿಲ್ಲ, ವ್ಯಾಪಾರಸ್ಥರೂ ಕೂಡ ಹೋಗುವ ಆಸಕ್ತಿ ತೋರಿಸುತ್ತಿಲ್ಲ” ಎಂದು ಸ್ಥಳೀಯ ನಿವಾಸಿ ಮುರಳಿ ಅಸಮಾಧಾನ ವ್ಯಕ್ತಪಡಿಸಿದರು.

ಈ ದಿನ.ಕಾಮ್‌ ಮಟನ್ ಮಾರ್ಕೆಟ್‌ಗೆ ಭೇಟಿ ನೀಡಿದಾಗ 26 ಮಳಿಗೆಗಳು ಖಾಲಿ ಬಿದ್ದಿರುವ ದೃಶ್ಯ ಕಂಡುಬಂದಿದೆ. ಜತೆಗೆ ಅಲ್ಲಿನ ಅನೈರ್ಮಲ್ಯ ಕಣ್ಣಿಗೆ ರಾಚುತ್ತಿತ್ತು. ಮಳಿಗೆಗಳಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಪ್ರಾಣಿಗಳ ಅವಶೇಷ, ದೇಹದ ತುಂಡುಗಳು, ವಧಾಸ್ಥಾನದಲ್ಲಿ ಅಲ್ಲಿಯೇ ನಿಂತಿದ್ದ ರಕ್ತದ ಮಡು, ಮಾಂಸ ತೊಳೆಯುವ ತೊಟ್ಟಿಯ ನೀರಿನಲ್ಲಿ ಕಂಡುಬಂದ ಹುಳುಗಳು, ಗಲೀಜು, ಇವುಗಳಿಂದ ನಾಯಿಗಳು ಪಕ್ಕಾ ಮಾಂಸಾಹಾರಿಗಳಾಗಿ ಬದಲಾಗಿವೆ. ಮಾಂಸದ ತ್ಯಾಜ್ಯ ಸಿಗದ ರಜಾ ದಿನಗಳಲ್ಲಿ ಮಕ್ಕಳ, ಒಂಟಿ ಮನುಷ್ಯನ ಮೇಲೆರಗುತ್ತವೆ ಎನ್ನುತ್ತಾರೆ ಸ್ಥಳೀಯರು.

“ಮಾಂಸದ ಅಂಗಡಿಗಳಲ್ಲಿ ಗ್ರಾಹಕರಿಗಿಂತ ನಾಯಿಗಳೇ ರಾಜಾರೋಷವಾಗಿ ಒಳಗೆ ಹೊರಗೆ ಓಡಾಡುವ, ಅವಶೇಷ ತಿಂದು ಹೊರಗೆ ಬರುವ ದೃಶ್ಯ ನಗರದೊಳಗಿನ ಮತ್ತು ಮಟನ್ ಮಾರ್ಕೆಟ್ ಪ್ರಾಂಗಣದ ಮಾಂಸದ ಅಂಗಡಿಗಳಲ್ಲಿ ಸಾಮಾನ್ಯವಾಗಿರುತ್ತದೆ. ಈ ಎಲ್ಲ ಕಾರಣದಿಂದಲೇ ಒಂಟಿಯಾಗಿ ಓಡಾಡುವ ವ್ಯಕ್ತಿಗಳಿಗೆ ಜೀವಭಯ ಕಾಡುತ್ತಿದೆ” ಎನ್ನುತ್ತಾರೆ ಸ್ಥಳೀಯರು. 

ಈ ದಿನ.ಕಾಮ್‌ ನೊಂದಿಗೆ ಮಾತನಾಡಿ, “ಅಜ್ಜನ ಗುಡಿ ರಸ್ತೆಯ ಸ್ಥಳೀಯ ನಿವಾಸಿ ಶಫೀವುಲ್ಲಾ, ಇಲ್ಲಿನ ಮಾಂಸದ ಮತ್ತು ಮೀನಿನ ಅಂಗಡಿಗಳಗೂ ಮೀನಿನ ತ್ಯಾಜ್ಯ, ಮಾಂಸದ ತ್ಯಾಜ್ಯಕ್ಕೆ ಜೋತು ಬಿದ್ದಿರುವ ನಾಯಿಗಳು ಈ ಬಯಲು ಪ್ರದೇಶದಲ್ಲಿ 30 ರಿಂದ 40 ನಾಯಿಗಳು ಹಿಂಡು ಹಿಂಡಾಗಿರುತ್ತವೆ. ಮುಂಜಾನೆ ಸಮಯದಲ್ಲಿ, ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಒಂಟಿ ಮನುಷ್ಯರ ಮೇಲೆ ದಾಳಿ ಮಾಡಿದ ಬಹಳ ಉದಾಹರಣೆಗಳಿವೆ.‌ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಬಿಟ್ಟು ಬೇರೆ ಏನನ್ನೂ ತಿನ್ನುವುದೇ ಇಲ್ಲ. ಇದು ನಗರದ ಮಧ್ಯ ಭಾಗವಾಗಿದ್ದು ಮಾರುಕಟ್ಟೆ, ಶಾಲೆಗಳಿಗೆ ಮಕ್ಕಳು, ಮಹಿಳೆಯರು ಓಡಾಡುತ್ತಾರೆ. ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಸ್ಥಳೀಯರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ” ಎಂದು ಅಳಲು ತೋಡಿಕೊಂಡರು.

“21ನೇ ವಾರ್ಡ್, ಕಾಟಪ್ಪನಹಟ್ಟಿ, ಗೊಲ್ಲರಹಟ್ಟಿ, ಚೆಳ್ಳಕೇರಮ್ಮ ಬೀಳು ದೇವಸ್ಥಾನ ಇಲ್ಲಿಯೂ ಬೀದಿ ನಾಯಿಗಳ ಹಾವಳಿ ಜಾಸ್ತಿ ಇದೆ. ಇಲ್ಲಿ ವಯಸ್ಸಾದವರು, ಶಾಲೆಗೆ ಹೋಗುವ ಮಕ್ಕಳು, ವಾಹನ ಸಂಚಾರಕರ ಮೇಲೆ ನಾಯಿಗಳ ಹಾವಳಿ ನಡೆದಿರುವ ಸನ್ನಿವೇಶಗಳು ಇವೆ. ದಯಮಾಡಿ ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಸ್ವಲ್ಪ ಗಮನ ಹರಿಸಬೇಕು” ಎಂದು ಸ್ಥಳೀಯ ಶಂಕರ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕರವೇ ಜಿಲ್ಲಾ ಮುಖಂಡ ಬೋಜರಾಜು “ಚಳ್ಳಕೆರೆ ನಗರ ಮತ್ತು ತಾಲೂಕಿನಾದ್ಯಂತ  ಬೀದಿನಾಯಿಗಳ ಹಾವಳಿ ಅತ್ಯಂತ ಹೆಚ್ಚಾಗಿದ್ದು, ಹಲವಾರು ಬಾರಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ, ನಗರಸಭೆ ಅಧಿಕಾರಿಗಳಾಗಲಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ ಈವರೆಗೆ ಕ್ರಮ ತೆಗೆದುಕೊಂಡಿಲ್ಲ. ಅವರಿಗೆ ಜನರ ಹಿತರಕ್ಷಣೆ ಬೇಡವಾಗಿದೆ. ಸ್ಪಷ್ಟವಾಗಿ ನಗರದ ಮಧ್ಯಭಾಗಗಳಿಂದ ಹೊರಭಾಗಕ್ಕೆ ಮಾಂಸ ಮಾರುಕಟ್ಟೆಗೆ ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸಬೇಕಾಗಿದ್ದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಜನರ ಜೀವದ ಜತೆ ಆಟವಾಡುತ್ತಿದ್ದಾರೆ. ಈಗಲಾದರೂ ಎಚ್ಚೆತ್ತು ಅಧಿಕಾರಿಗಳು ತಕ್ಷಣ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಅವರೇ ಹೊಣೆಯಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ನಗರ ಸಭೆಯ ಸದಸ್ಯ ಪ್ರಮೋದ್ “ಈ ಬಗ್ಗೆ ಸುಮಾರು ಎರಡು ತಿಂಗಳಿನಿಂದ ನಾವು ನಗರಸಭೆಯ ಆಯುಕ್ತರಿಗೆ ತಿಳಿಸುತ್ತಿದ್ದು, ಸಭೆಯಲ್ಲಿ ಎರಡು ಬಾರಿ ಚರ್ಚೆಯಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ತರುತ್ತೇವೆ ಎನ್ನುವ ನಗರಸಭೆ ಆಯುಕ್ತರು ಒಂದೂವರೆ ತಿಂಗಳಿನಿಂದ ಒತ್ತಾಯಿಸುತ್ತಿದ್ದರೂ ಕಾರ್ಯರೂಪಕ್ಕೆ ತಂದಿಲ್ಲ. ಈ ಬಗ್ಗೆ ಇತ್ತೀಚೆಗೆ ನಡೆದ ನಗರಸಭೆಯ ತುರ್ತು ಸಾಮಾನ್ಯ ಸಭೆಯಲ್ಲಿ ಮತ್ತೆ ಒತ್ತಾಯಿಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸರ್ವ ಸದಸ್ಯರೂ ಒತ್ತಾಯಿಸಿದ್ದೇವೆ. ಯಾವುದೇ ಅವಘಡ, ತೀವ್ರಸ್ವರೂಪದ ಪ್ರಕರಣಗಳು ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎನ್ನುವುದು ನಮ್ಮೆಲ್ಲರ ಒತ್ತಾಯವಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕ ಅಪಘಾತದಲ್ಲಿ ಸಾವು; ಮೇಲಧಿಕಾರಿಗಳ ನಿರ್ಲಕ್ಷ್ಯದ ಆರೋಪ

ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಚಳ್ಳಕೆರೆ ನಗರಸಭೆ ಆಯುಕ್ತ ಜಗರೆಡ್ಡಿ “ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಕಾರ್ಯ ನಿರ್ವಹಿಸುತ್ತಿದ್ದೇವೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಪರಿಸರ ಮತ್ತು ಇತರ ಇಲಾಖೆಗಳ ಮಾರ್ಗಸೂಚಿಯಿದ್ದು, ಅದರ ಪ್ರಕಾರ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಚರ್ಚಿಸಲಾಗುತ್ತಿದ್ದು, ನಿಯಂತ್ರಣಕ್ಕೆ ಸದ್ಯದಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.

ಅಜ್ಜನ ಗುಡಿ ಮತ್ತು ಚಳ್ಳಕೆರೆ ನಗರದೊಳಗಿನ ಕೋಳಿ ಮತ್ತು ಮೀನಿನ ಅಂಗಡಿಗಳ ತ್ಯಾಜ್ಯಗಳಿಂದ ಬೀದಿ ನಾಯಿಗಳು ಹೆಚ್ಚುತ್ತಿವೆ ಎನ್ನುವ ಸಾರ್ವಜನಿಕರ ಪ್ರಶ್ನೆಗೆ ಆಯುಕ್ತರು ಯಾವುದೇ ಸಮರ್ಪಕ ಉತ್ತರ ನೀಡಲಿಲ್ಲ.

“ಬೀದಿ ನಾಯಿಗಳ ಆಕ್ರಮಣ ಮತ್ತು ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ವರದಿಯ ಬೆನ್ನಲ್ಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಮತ್ತೆ ಪ್ರಕರಣಗಳು ವರದಿಯಾಗುವ ಮುನ್ನವೇ ಸ್ಥಳೀಯ ಆಡಳಿತಗಳು ಎಚ್ಚೆತ್ತುಕೊಂಡು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ ಮತ್ತು ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲಿ” ಎನ್ನುವುದು ಸ್ಥಳೀಯ ನಾಗರಿಕರ ಒತ್ತಾಯವಾಗಿದೆ.
 

ವಿನಾಯಕ್
ವಿನಾಯಕ್ ಚಿಕ್ಕಂದವಾಡಿ
+ posts

ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿನಾಯಕ್ ಚಿಕ್ಕಂದವಾಡಿ
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X