ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ, ಜಾರ್ಖಂಡ್‌ನಲ್ಲಿ ‘ಇಂಡಿಯಾ’ ಮೈತ್ರಿಕೂಟ ಗೆಲುವಿನತ್ತ ಸಾಗುತ್ತಿವೆ. ಇದೇ ಸಮಯದಲ್ಲಿ, ಕರ್ನಾಟಕವೂ ಸೇರಿದಂತೆ ದೇಶಾದ್ಯಂತ 48 ವಿಧಾನಸಭಾ ಕ್ಷೇತ್ರ ಮತ್ತು 2 ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಈ ಪೈಕಿ, 15 ವಿಧಾನಸಭಾ ಕ್ಷೇತ್ರ ಮತ್ತು 1 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, 9 ವಿಧಾನಸಭಾ ಕ್ಷೇತ್ರ ಮತ್ತು 1 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಉಳಿದಂತೆ 24 ಕ್ಷೇತ್ರಗಳಲ್ಲಿ ಆಯಾ ರಾಜ್ಯಗಳ ಸ್ಥಳೀಯ ಪಕ್ಷಗಳು ಮುನ್ನಡೆ ಸಾಧಿಸಿವೆ.
ಉಪಚುನಾವಣೆ ನಡೆದ ರಾಜ್ಯಗಳ ಪೈಕಿ ಅಸ್ಸಾಂನ ಐದು ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಅದರಲ್ಲಿ, ಎರಡರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಹಾಗೂ ಎರಡು ಕ್ಷೇತ್ರಗಳಲ್ಲಿ ಸ್ಥಳೀಯ ಪಕ್ಷಗಳು ಮುನ್ನಡೆ ಸಾಧಿಸಿವೆ.
ಬಿಹಾರದ ಐದು ಕ್ಷೇತ್ರಗಳ ಪೈಕಿ ಬಿಜೆಪಿ 2, ಬಿಜೆಪಿ ಮಿತ್ರ ಪಕ್ಷ ಜೆಡಿಯು 1 ಹಾಗೂ ಸ್ಥಳೀಯ ಪಕ್ಷಗಳು 2 ಕ್ಷೇತ್ರಗಳಲ್ಲಿ ಮುಂದಿವೆ.
ಛತ್ತಿಸ್‌ಗಢ ಮತ್ತು ಉತ್ತರಾಖಂಡ್‌ನಲ್ಲಿ ತಲಾ 1 ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಎರಡೂ ಕಡೆಯೂ ಬಿಜೆಪಿ ಗೆಲುವಿನ ಹಾದಿಯಲ್ಲಿದೆ. ಜೊತೆಗೆ, ಮಧ್ಯಪ್ರದೇಶದಲ್ಲಿ ಉಪಚುನಾವಣೆ ನಡೆದಿದ್ದ 2 ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆಯಲ್ಲಿದೆ
ಇನ್ನು, ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿಯೂ 1 ಕ್ಷೇತ್ರಕ್ಕೆ ಚುನಾವಣೆ ನಡೆದಿದೆ. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸೋತರೆ, ಮೋದಿ-ಅಮಿತ್ ಶಾ ಜೋಡಿಗೆ ಭಾರೀ ಮುಖಭಂಗವಾಗಲಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಈಗಾಗಲೇ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲುವು ಸಾಧಿಸಿದ್ದಾರೆ. ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿಯೂ ಕಾಂಗ್ರೆಸ್ ಮುನ್ನಡೆಯಲ್ಲಿದ್ದು, ಗೆಲುವಿನ ಸಮೀಪಿಸುತ್ತಿದೆ.
ಕೇರಳದಲ್ಲಿ ಉಪಚುನಾವಣೆ ನಡೆದ 2 ವಿಧಾನಸಭಾ ಮತ್ತು 1 ಲೋಕಸಭಾ ಕ್ಷೇತ್ರಗಳ ಪೈಕಿ, 1 ವಿಧಾನಸಭಾ ಮತ್ತು 1 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಬರೋಬ್ಬರಿ 3 ಲಕ್ಷ ಮತಗಳನ್ನು ಪಡೆದಿದ್ದು, 1.5 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ. ಗೆಲ್ಲುವ ನಗೆ ಬೀರುತ್ತಿದ್ದಾರೆ.
ಮೇಘಾಲಯದಲ್ಲಿ ಚುನಾವಣೆ ನಡೆದಿದ್ದ 1 ಕ್ಷೇತ್ರದಲ್ಲಿ ಸ್ಥಳೀಯ ಪಕ್ಷ ಮುನ್ನಡೆ ಸಾಧಿಸಿದ್ದರೆ, ಸಿಕ್ಕಿಂನಲ್ಲಿ 2 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಿಸಲಾಗಿತ್ತು. ಆದರೆ, ಎದುರಾಳಿಗಳೇ ಇಲ್ಲದೆ ಅಲ್ಲಿನ ಸ್ಥಳೀಯ ಪಕ್ಷ ಎಸ್‌ಕೆಎಂನ ಅಭ್ಯರ್ಥಿಗಳು ಅವರೋಧವಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಪಂಜಾಬ್‌ನಲ್ಲಿ ಉಪಚುನಾವಣೆ ಎದುರಿಸಿದ್ದ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಎಎಪಿ ಮತ್ತು ಒಂದರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿವೆ.
ರಾಜಸ್ಥಾನದಲ್ಲಿ 7 ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಬಿಜೆಪಿ, ಕಾಂಗ್ರೆಸ್ ತಲಾ 2 ಕ್ಷೇತ್ರಗಳಲ್ಲಿ ಮುಂದಿವೆ. ಇತರ ಸ್ಥಳೀಯ ಪಕ್ಷಗಳು ಮೂರು ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ 9 ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ. ಈ ಪೈಕಿ 5ರಲ್ಲಿ ಬಿಜೆಪಿ, 3ರಲ್ಲಿ ಎಸ್‌ಪಿ ಹಾಗೂ 1ರಲ್ಲಿ ಸ್ಥಳೀಯ ಪಕ್ಷ ಮುನ್ನಡೆ ಸಾಧಿಸಿವೆ.
ಪಶ್ಚಿಮ ಬಂಗಾಳದ ಆರು ಸ್ಥಾನಗಳಿಗೆ ಉಪಚುನಾವಣೆ ನಡೆದಿದ್ದು, ಆರರಲ್ಲಿಯೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೆಲುವಿನ ಹಾದಿಯಲ್ಲಿ ಮುನ್ನಡೆಯುತ್ತಿದೆ.
ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಜೊತೆಗೆ, ಒಂದು ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಆ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.