ವಿಶೇಷಚೇತನರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ವಿಶೇಷಚೇತನರೇ ಆಗಿರುವ ಪುನರ್ವಸತಿ ಕಾರ್ಯಕರ್ತರು ಮೂಲ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ವಿವಿದೋದ್ದೇಶ(ಎಂಆರ್‌ಡಬ್ಲ್ಯೂ), ನಗರ(ಯುಆರ್‌ಡಬ್ಲ್ಯೂ) ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ(ವಿಆರ್‌ಡಬ್ಲ್ಯೂ) ಕಣ್ಣೊರೆಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮವಹಿಸಬೇಕಿದೆ.
ರಾಜ್ಯಾದ್ಯಂತ 6,422 ಮಂದಿ ಪುನರ್ವಸತಿ ಕಾರ್ಯಕರ್ತರು(ರಿಹ್ಯಾಬಿಲಿಟೇಷನ್ ವರ್ಕರ್ಸ್) ವಿಶೇಷಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಗೌರವಧನ ಆಧಾರದಲ್ಲಿ ನೇಮಕಾತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಟ್ಟಕಡೆಯ ವಿಶೇಷಚೇತನರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತಂದು ಅವರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಪುನರ್ವಸತಿ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯದ 225 ತಾಲೂಕುಗಳಿಗೆ 175 ಎಂಆರ್‌ಡಬ್ಲ್ಯೂಗಳು, 6,022 ಗ್ರಾಮ ಪಂಚಾಯಿತಿಗಳಿಗೆ 5,860 ವಿಆರ್‌ಡಬ್ಲ್ಯೂಗಳು ಹಾಗೂ 613 ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆಗಳಿಗೆ 380 ಯುಆರ್‌ಡಬ್ಲ್ಯೂಗಳು ನೇಮಕಗೊಂಡಿದ್ದಾರೆ. ಅಧಿಕಾರಿಗಳಿಗೆ ಸಮನಾಗಿ ಸುಮಾರು 17 ವರ್ಷಗಳಿಂದ ಗೌರವಧನ ಆಧಾರದಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪುನರ್ವಸತಿ ಕಾರ್ಯಕರ್ತರಿಗೆ ಕಾಯಮಾತಿ, ಕನಿಷ್ಠ ವೇತನ, ಸೇವಾ ಭದ್ರತೆಯಂತಹ ಮೂಲ ಸೌಕರ್ಯಗಳಿಲ್ಲದೆ ಕಂಗಾಲಾಗಿದ್ದಾರೆ.
ಕಾಯಂ ಆಗದ ಸೇವೆ
“ಪ್ರಸ್ತುತ ಎಂಆರ್‌ಡಬ್ಲ್ಯೂ, ಯುಆರ್‌ಡಬ್ಲ್ಯೂ ಮತ್ತು ವಿಆರ್‌ಡಬ್ಲ್ಯೂಗಳಿಗೆ ಸರ್ಕಾರ ಕ್ರಮವಾಗಿ ₹15,000 ಮತ್ತು ₹9,000 ಗೌರವ ಧನ ನೀಡುತ್ತಿದ್ದು, ಕನಿಷ್ಠ ಗೌರವಧನಕ್ಕೆ ಗರಿಷ್ಠ ದುಡಿಸಿಕೊಳ್ಳುತ್ತಿದೆ. ಯಾವುದೇ ಸರ್ಕಾರಿ, ಅನುದಾನಿತ ಸಂಸ್ಥೆ ಅಥವಾ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಒಳಗುತ್ತಿಗೆ ಆಧಾರದಲ್ಲಿ 10-15 ವರ್ಷಗಳ ಕಾಲ ಸೇವೆ ಸಲ್ಲಿಸಿದಲ್ಲಿ ಅಂತಹವರನ್ನು ಕಾಯಂಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ಹೇಳಿವೆ. ಆದರೆ, ಈವರೆಗೆ ರಾಜ್ಯ ಸರ್ಕಾರ ಕಾಯಂ ಮಾಡಿಲ್ಲ” ಎಂಬುದು ಪುನರ್ವಸತಿ ಕಾರ್ಯಕರ್ತರ ಅಳಲಾಗಿದೆ.
ಸೇವಾ ಭದ್ರತೆಯೂ ಇಲ್ಲ, ಕನಿಷ್ಠ ವೇತನವೂ ಇಲ್ಲ :
“ಪೌರಕಾರ್ಮಿಕರು, ಗ್ರಂಥಾಲಯ ಮೇಲ್ವಿಚಾರಕರು, ಕೆಪಿಟಿಸಿಎಲ್ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಲಾಗಿದೆ. ಆದರೆ, ಗ್ರಾಪಂ ಮತ್ತು ತಾಪಂಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಹ ವಿಶೇಷಚೇತನರು 17 ವರ್ಷಗಳಿಂದ ಸೇವಾ ಭದ್ರತೆಯಿಲ್ಲದೆ, ಕನಿಷ್ಠ ವೇತನವೂ ಇಲ್ಲದೆ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೂಡಲೇ ನಮ್ಮ ಸೇವೆಯನ್ನು ಪರಿಗಣಿಸಿ ಮಾನವೀಯತೆಯ ಆಧಾರದಲ್ಲಿ ಸೇವಾಭದ್ರತೆ ಮತ್ತು ಕನಿಷ್ಠವೇತನ ನಿಗದಿಪಡಿಸಬೇಕು” ಎಂಬುದು ಪುನರ್ವಸತಿ ಕಾರ್ಯಕರ್ತರ ಒತ್ತಾಸೆಯಾಗಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಒಕ್ಕಲಿಗರಿಗೆ ಪರ್ಯಾಯ ನಾಯಕತ್ವದ ಅಗತ್ಯವಿದೆಯೇ?
ಈ ಕುರಿತು ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ ಟಿ ರಾಮಚಂದ್ರ ಈ ದಿನ.ಕಾಮ್ ಜತೆಗೆ ಮಾತನಾಡಿ, “17 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುನರ್ವಸತಿ ಕಾರ್ಯಕರ್ತರನ್ನು ಸರ್ಕಾರ ನಿರ್ಲಕ್ಷಿಸಿದೆ. ರಾಜ್ಯ ಸರ್ಕಾರ ಇಲಾಖೆಯ ಇತರೆ ಸಿಬ್ಬಂದಿಗಳೊಂದಿಗೆ ವಿಕಲಚೇತನರನ್ನು ತಾಳೆ ಹಾಕಬಾರದು. ರಾಜ್ಯದಲ್ಲಿ ಸುಮಾರು 15,000ಕ್ಕೂ ಅಧಿಕ ವಿಶೇಷಚೇತನರ ಬ್ಯಾಕ್‌ಲಾಗ್ ಹುದ್ದೆಗಳು ಖಾಲಿಯಿವೆ. ಸುಮಾರು 17 ವರ್ಷಗಳಿಂದ ಪುನರ್ವಸತಿ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರನ್ನು ಮಾನವೀಯತೆ ಆಧಾರದಲ್ಲಿ ವಿಶೇಷ ಪ್ರಕರಣವೆಂದು ಘೋಷಿಸಿ ಒನ್‌ಟೈಮ್ ಸೆಟ್ಲ್‌ಮೆಂಟ್ ಯೋಜನೆಯಂತೆ ಕಾಯಂಗೊಳಿಸಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.