ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಎರಡು ಸಮುದಾಯಗಳ ನಡುವೆ ಭಾರೀ ಘರ್ಷಣೆ ನಡೆದಿದ್ದು, ಕನಿಷ್ಠ 37 ಜನರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಸಾವನ್ನಪ್ಪಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯ ಪರಾಚಿನಾರ್ ಬಳಿ ಸಾರ್ವಜನಿಕರು ಪ್ರಯಾಣಿಸುತ್ತಿದ್ದ ವ್ಯಾನ್‌ಗಳ ಮೇಲೆ ಗುರುವಾರ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಸುಮಾರು 47 ಮಂದಿ ಹತರಾಗಿದ್ದರು. ಆ ಭೀಕರ ಘಟನೆಯ ಬಳಿಕ, ಅಲಿಜೈ ಮತ್ತು ಬಗಾನ್ ಬುಡಕಟ್ಟು ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿದೆ.
ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸರನ್ನು ಕುರ್ರಂ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಖೈಬರ್ ಪಖ್ತುಂಖ್ವಾ ಕಾನೂನು ಸಚಿವರು, ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರೀಕ್ಷಕರು ಸೇರಿದಂತೆ ಉನ್ನತ ಶ್ರೇಣಿಯ ಅಧಿಕಾರಿಗಳ ತಂಡವು ಜಿಲ್ಲೆಗೆ ತೆರಳಿದೆ. ಸಂಘರ್ಷ ಪೀಡಿತ ಪ್ರದೇಶದಲ್ಲಿ ಎರಡೂ ಬುಡಕಟ್ಟುಗಳ ನಡುವೆ ಸಂದಾನ ಮತ್ತು ಶಾಂತಿ ಮಾತುಕತೆಗಳನ್ನು ನಡೆಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಘರ್ಷಣೆಯ ತೀವ್ರತೆ ಹೆಚ್ಚಾಗಿದ್ದು, ಎರಡೂ ಸಮುದಾಯಗಳು ದಾಳಿಯಲ್ಲಿ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ. ಹಿಂಸಾಚಾರದಲ್ಲಿ ಮನೆಗಳು ಮತ್ತು ಅಂಗಡಿಗಳಿಗೆ ಹಾನಿಯಾಗಿದೆ. ಹಲವಾರು ಹಳ್ಳಿಗಳ ನಿವಾಸಿಗಳು ತಮ್ಮ ನಿವಾಸಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ಹೋಗುತ್ತಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಕುರ್ರಂ ಜಿಲ್ಲೆಯ ಬಲಿಶ್‌ಖೇಲ್, ಖಾರ್ ಕಲಿ, ಕುಂಜ್ ಅಲಿಜೈ ಹಾಗೂ ಮಕ್ಬಾಲ್‌ನಲ್ಲಿ ದಿನವಿಡೀ ಶನಿವಾರ ರಾತ್ರಿಯವರೆಗೂ ಗುಂಡಿನ ಚಕಮಕಿ ನಡೆದಿದೆ. ಮೂರು ಪ್ರದೇಶಗಳಲ್ಲಿ ಇನ್ನೂ ಘರ್ಷಣೆ, ಗುಂಡಿನ ದಾಳಿ ನಡೆಯುತ್ತಲೇ ಇದೆ. ಬುಡಕಟ್ಟು ಸಮುದಾಯಗಳ ಮುಖಂಡರು ಘರ್ಷಣೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶಾಂತಿ ನೆಲೆಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಅಂದಹಾಗೆ, ಇತ್ತೀಚೆಗೆ, ಪಾಕಿಸ್ತಾನದಲ್ಲಿ ಸಮುದಾಯಗಳ ನಡುವೆ ಆಗ್ಗಾಗ್ಗೆ ಘರ್ಷಣೆ, ಹಿಂಸಾಚಾರ ನಡೆಯುತ್ತಲೇ ಇದೆ. ಎರಡು ತಿಂಗಳ ಹಿಂದೆ, ಸೆಪ್ಟೆಂಬರ್‌ನಲ್ಲಿ ಇದೇ ಕುರ್ರಂ ಜಿಲ್ಲೆಯಲ್ಲಿಯೇ ಭೂ ವಿವಾದದ ಕಾರಣಕ್ಕಾಗಿ ಶಿಯಾ ಮತ್ತು ಸುನ್ನಿ ಬುಡಕಟ್ಟು ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದವು. 8 ದಿನ ನಡೆದ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಈ ವರದಿ ಓದಿದ್ದೀರಾ?: ದೇಶದಲ್ಲಿ ನಿಯಂತ್ರಣಕ್ಕೆ ಬಾರದ ಬೆಲೆ ಏರಿಕೆ ಮತ್ತು ಸಚಿವೆ ನಿರ್ಮಲಾ ಸೀತಾರಾಮನ್ ಸಿಟ್ಟು!
ಸಂಘರ್ಷದ ತೀವ್ರತೆಯಿಂದಾಗಿ ಪರಾಚಿನಾರ್-ಪೇಶಾವರ್ ಹೆದ್ದಾರಿ ಮತ್ತು ಪಾಕ್-ಆಫ್ಘಾನ್ ಖರ್ಲಾಚಿ ಗಡಿಯನ್ನು ಬಂದ್ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಸಾರಿಗೆ ಮತ್ತು ಸಂಪರ್ಕ ಕಡಿತಗೊಂಡಿತ್ತು. ರಸ್ತೆ ಬಂದ್ ಆಗಿದ್ದರಿಂದಾಗಿ ಅಲ್ಲಿನ ಸ್ಥಳೀಯ ಪ್ರದೇಶಗಳಿಗೆ ಆಹಾರ, ಇಂಧನ ಹಾಗೂ ಔಷಧಗಳು ಸೇರಿದಂತೆ ಅಗತ್ಯ ಸಾಮಗ್ರಿಗಳ ಪೂರೈಕೆಯೂ ಸ್ಥಗಿತಗೊಂಡಿತ್ತು. ಸ್ಥಳೀಯ ನಿವಾಸಿಗಳಿಗೆ ಜೀವನ ದೂಡುವುದೇ ಕಷ್ಟಕರವಾಗಿತ್ತು.
15 ದಿನಗಳ ಹಿಂದೆ, ರಸ್ತೆಯನ್ನು ಸಂಚಾರಕ್ಕೆ ತೆರೆಯುವಂತೆ ಆಗ್ರಹಿಸಿ ಲಕ್ಷಕ್ಕೂ ಹೆಚ್ಚು ಮಂದಿ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಪ್ರಯಾಣಿಕರಿಗೆ ಸುರಕ್ಷತಾ ಬೆಂಗಾವಲು ಒದಗಿಸುವ ಮೂಲಕ ರಸ್ತೆಯನ್ನು ತೆರೆಯುವುದಾಗಿ ಭರವಸೆ ನೀಡಿತ್ತು. ಬಳಿಕ ರಸ್ತೆಯನ್ನು ಸಂಚಾರಕ್ಕೆ ಒದಗಿಸಲಾಗಿತ್ತು. ಸರ್ಕಾರದ ಭದ್ರತೆಯ ಹೊರತಾಗಿಯೂ ಪ್ರಯಾಣಿಕರ ಮೇಲೆ ದಾಳಿ ನಡೆದಿದ್ದು, ಮತ್ತೆ ಸಂಘರ್ಷ ಭುಗಿಲೆದ್ದಿದೆ.