ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ ಅನ್ನಿಸುತ್ತಿದೆ. ತಂತ್ರ ಮಾಡುವುದರಲ್ಲೂ ನಾವು ವಿಫಲವಾಗಿದ್ದೇವೆ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮಹಾರಾಷ್ಟ್ರದಲ್ಲಿ ನಾವು ಕಾಂಗ್ರೆಸ್ ಒಕ್ಕೂಟ ಬರುತ್ತದೆ ಎಂದುಕೊಂಡಿದ್ದೆವು. ಆದರೆ ಎಲ್ಲವೂ ಉಲ್ಟಾ ಆಗಿದೆ. ಹಲವು ಹಿರಿಯ ಅನುಭವಿ ನಾಯಕರು ಸೇರಿ ಚರ್ಚೆ ಮಾಡಿದ್ದೇವೆ. ಬಹಳಷ್ಟು ಕಡೆ ಇವಿಎಂ ತಿರುಚಿದ್ದಾರೆ ಎಂದು ಚರ್ಚೆ ಆಗಿದೆ. ಆದರೆ ಜಾರ್ಖಂಡ್‌ನಲ್ಲಿ ಯಾಕೆ ಹಾಗಾಗಲಿಲ್ಲ ಎಂದರೆ ಬಿಜೆಪಿಯವರು ಪ್ಲ್ಯಾನ್ ಆಫ್ ಆಕ್ಷನ್ ತರಹ ಇದನ್ನು ಮಾಡುತ್ತಾರೆ. ಮತಪತ್ರ ಬರಬೇಕು ಅಂತ ನಾವು ಮೊದಲಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ಬಹಳಷ್ಟು ಕಡೆ ಇವಿಎಂ ತಿರುಚಿದ್ದಾರೆ ಅಂತ ಚರ್ಚೆಯಾಯಿತು. ಜಾರ್ಖಂಡ್‌ನಲ್ಲಿ ಯಾಕೆ ಮಾಡಿಲ್ಲವೆಂದರೆ, ಕೆಲವು ಕಡೆ ಬಿಟ್ಟು ಬಿಡ್ತಾರೆ. ರಾಜ್ಯದಲ್ಲಿ ಕೆಲವು ಗೆದ್ದೆ ಗೆಲ್ಲುತ್ತೇವೆ ಅನ್ನುವ ಕಡೆ ತಿರುಚುವುದಿಲ್ಲ. ಇದರೊಂದಿಗೆ ಲಾಡ್ಲಿ ಬೆಹೆನ್ ಯೋಜನೆ ಸಾಕಷ್ಟು ಪರಿಣಾಮ ಉಂಟುಮಾಡಿದೆ. ಅವರು 6 ತಿಂಗಳು ಮೊದಲು ಯೋಜನೆ ಕೊಟ್ಟರು. ಇದೆಲ್ಲವೂ ಅವರ ಕೈ ಹಿಡಿದಿದೆ. ನಾವು ಕೊನೆಗೆ ಟಿಕೆಟ್ ಘೋಷಣೆ ಮಾಡಿದೆವು. ಪಕ್ಷದಲ್ಲೂ ಗೊಂದಲ ಆಯಿತು. ಶರದ್ ಪವಾರ್ ಗುಂಪು, ಉದ್ದವ್ ಠಾಕ್ರೆ ಗುಂಪಿನ ನಡುವೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ. ವಿದರ್ಭದಲ್ಲಿ ಹೆಚ್ಚು ಸೀಟ್ ಬರಲಿಲ್ಲ. ಎಲ್ಲಿಯವರೆಗೆ ಇವಿಎಂ ಇರುತ್ತೆ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟ ಆಗುತ್ತೆ ಎಂದು ನುಡಿದರು.
ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಬಳಿಕ ದೊಡ್ಡ ನಾಯಕತ್ವ ಇರಲಿಲ್ಲ. ಅದಕ್ಕೆ ಬಿಟ್ಟರು, ಹ್ಯಾಕ್ ಮಾಡುವುದರಲ್ಲಿ ಬಿಜೆಪಿಗರು ನಿಪುಣರು. ಜಾರ್ಖಂಡ್‌ನಲ್ಲಿ ಜೆಎಂಎಂ ಬರುತ್ತೆ ಅಂತ ಬಿಟ್ಟರು. ಕಾಂಗ್ರೆಸ್ ಗೆಲ್ಲುತ್ತೆ ಅಂತಿದ್ರೆ ಅಲ್ಲೂ ಹ್ಯಾಕ್ ಮಾಡುತ್ತಿದ್ದರು. ಇವಿಎಂ ಬೇಡ ಅಂತ ನಾವು ಸುಪ್ರೀಂ ಕೋರ್ಟ್‌ಗೆ ಹೋದರೂ ಆಗಲಿಲ್ಲ. ಅವರು ಸಹ ಚುನಾವಣಾ ಆಯೋಗ ಹೇಳಿರುವುರನ್ನು ಒಪ್ಪಿಕೊಂಡರು ಎಂದು ಹೇಳಿದರು.
