ಉತ್ತರ ಪ್ರದೇಶದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗಾಗಿ ಭಾನುವಾರ ಬೆಳಗ್ಗೆ ಅಧಿಕಾರಿಗಳು ತೆರಳಿದ್ದ ವೇಳೆ, ಕಲ್ಲು ತೂರಾಟ ನಡೆದಿದೆ. ಪರಿಣಾಮ, ಸಂಭಾಲ್‌ನಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದ್ದು, ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಶಾಹಿ ಜಾಮಾ ಮಸೀದಿಯ ಜಾಗವು ಕೇಲಾ ದೇವಿ ದೇವಸ್ಥಾನಕ್ಕೆ ಸೇರಿದ್ದಾಗಿದೆ. ಶಾಹಿ ಜಾಮಾ ಮಸೀದಿಯು ಮೂಲತಃ ಹರಿಹರ ದೇವಸ್ಥಾನವಾಗಿತ್ತು. 1529ರಲ್ಲಿ ಬಾಬರ್ ಆಳ್ವಿಕೆಯಲ್ಲಿ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಸದಸ್ಯರು ಆರೋಪಿಸಿದ್ದಾರೆ. ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಚಂದೌಸಿಯ ಸಿವಿಲ್ ಹಿರಿಯ ವಿಭಾಗ ನ್ಯಾಯಾಲಯವು ಮಸೀದಿ ಅವರಣದಲ್ಲಿ ಸಮೀಕ್ಷೆ ನಡೆಸಲು ನವೆಂಬರ್ 19ರಂದು ಆದೇಶಿಸಿತ್ತು.
ಕೋರ್ಟ್ ಆದೇಶದ ಬಳಿಕ, ನವೆಂಬರ್ 24ರಂದು ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪನ್ಸಿಯಾ, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಬಿಷ್ಣೋಯ್ ಮೇಲ್ವಿಚಾರಣೆಯಲ್ಲಿ ಸಮೀಕ್ಷಾ ತಂಡವು ಸಂಭಾಲ್ ಮಸೀದಿಗೆ ತೆರಳಿತ್ತು. ಆದರೆ, ಈ ವೇಳೆ ಕಲ್ಲು ತೂರಾಟ ನಡೆದಿದೆ. ಸಂಘರ್ಷದ ಛಾಯೆ ಆವರಿಸಿದೆ.
ಸಮೀಕ್ಷೆ ಪ್ರಾರಂಭವಾದ ಸುಮಾರು ಎರಡು ಗಂಟೆಗಳ ನಂತರ, ಪ್ರತಿಭಟನಾಕಾರರ ಗುಂಪು ಮಸೀದಿಯ ಬಳಿ ಜಮಾಯಿಸಿದೆ. ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ಘರ್ಷಣೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲು ತೂರಾಟ ನಡೆಸಿದ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
VIDEO | Uttar Pradesh: Stones and slippers pelted in Sambhal when a survey team reached Shahi Jama Masjid to conduct a survey of the mosque.
— Press Trust of India (@PTI_News) November 24, 2024
(Full video available on PTI Videos – https://t.co/n147TvrpG7)#SambhalJamaMasjid pic.twitter.com/K4QGGpzlMK
ಜನಸಮೂಹಗಳ ನಡುವೆ ಕೆಲವರು ಗುಂಡು ಹಾರಿಸಿದ್ದಾರೆ. ಪೊಲೀಸ್ ಪಡೆಗಳ ಮೇಲೆ ಕಲ್ಲು ತೂರಿದ್ದಾರೆ. ನಮ್ಮ ವಾಹನಗಳಿಗೆ ದುಷ್ಕರ್ಮಿಗಳ ಗುಂಪು ಬೆಂಕಿ ಹಚ್ಚಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದ್ಧೇವೆ. ನೆರೆಯ ಜಿಲ್ಲೆಗಳಿಂದಲೂ ಪೊಲೀಸ್ ಪಡೆಗಳನ್ನು ಕರೆಸಿಕೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.