ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ನೈಜ್ಯ ಮತ್ತು ಜನರ ಅಭಿಪ್ರಾಯವಲ್ಲ. ಇದು ಕೇವಲ ಬಿಜೆಪಿ, ಆರ್.ಎಸ್. ಎಸ್ ಮತಯಂತ್ರಗಳ ದುರ್ಬಳಕೆಯ ಫಲಿತಾಂಶ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಸಂತ ಕುಮಾರ್ ಗಂಭೀರ ಆರೋಪ ಮಾಡಿದರು.
ರಾಯಚೂರು ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಭಾರೀ ಜನಮತ ನೀಡಿದ ಮಹಾರಾಷ್ಟ್ರ ಮತದಾರರು ಕೇವಲ ನಾಲ್ಕು ತಿಂಗಳಲ್ಲಿ ಬಿಜೆಪಿ ಮತ್ತು ಅವರ ಮಿತ್ರ ಪಕ್ಷಗಳಿಗೆ ಹೆಚ್ಚಿನ ಸ್ಥಾನ ನೀಡಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿದೆ” ಎಂದು ತಿಳಿಸಿದರು.
ಬಿಜೆಪಿ ದೇಶದಲ್ಲಿ ದೊಡ್ಡ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಮತಯಂತ್ರ ದುರ್ಬಳಕೆ ಮಾಡಿ, ಅಧಿಕಾರ ಚುಕ್ಕಾಣಿ ಹಿಡಿಯುವ ಕುತಂತ್ರದ ಭಾಗವಾಗಿ ಮಹಾರಾಷ್ಟ್ರದಲ್ಲಿಯೂ ಅಧಿಕಾರಕ್ಕೆ ಬರಲು ಸಾಧ್ಯ ಮಾಡಿಕೊಂಡಿದೆ. ಇದು ಜನಮತ ಅಭಿಪ್ರಾಯದ ವಿರುದ್ಧದ ಫಲಿತಾಂಶ ಎಂದು ದೂರಿದರು.
ನಾನು ಮಹಾರಾಷ್ಟ್ರದ ಎರಡು ಜಿಲ್ಲೆಗಳ ಉಸ್ತುವಾರಿ ವಹಿಸಿದ್ದೆ. ಈ ಚುನಾವಣಾ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಮತದಾರರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಿದ್ದೆ. ಈ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಅಧಿಕಾರಕ್ಕೆ ಬರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಫಲಿತಾಂಶ ಇದರ ವಿರುದ್ಧ ಇರುವುದು ಮತ ಯಂತ್ರಗಳ ದುರ್ಬಳಕೆ ಮಾಡಿರುವುದಕ್ಕೆ ಆಧಾರವಾಗಿದೆ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಬೇಕಾದರೆ ವಿರೋಧ ಪಕ್ಷಗಳ ಅಭಿಪ್ರಾಯ ಗಂಭೀರವಾಗಿ ಪರಿಗಣಿಸಬೇಕು ಮತ್ತು ಮತಯಂತ್ರ ದುರ್ಬಳಕೆ ಬಗ್ಗೆ ತನಿಖೆ ನಡೆಯಬೇಕು. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಬೇಕು. ಮತಯಂತ್ರ ದುರ್ಬಳಕೆ ಬಗ್ಗೆ ವಿರೋಧ ಪಕ್ಷಗಳು ನಿರಂತರ ಆರೋಪ ಮಾಡುತ್ತಿದ್ದರೂ ಅನೇಕ ಸಾಕ್ಷಿ ನೀಡುತ್ತಿದ್ದರೂ, ಚುನಾವಣಾ ಆಯೋಗ ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ಮುಂಬರುವ ಚುನಾವಣೆ ಮತ ಪತ್ರಗಳ ಮೂಲಕ ಚುನಾವಣೆ ನಡೆಸಿದರೆ ಮಾತ್ರ ನಿಷ್ಪಕ್ಷಪಾತ ಚುನಾವಣೆ ಸಾಧ್ಯ. ಈ ಬಗ್ಗೆ ನ್ಯಾಯಾಲಯದಲ್ಲೂ ನಾವು ಅರ್ಜಿ ಸಲ್ಲಿಸಿದ್ದೇವೆ. ಆದರೆ, ನ್ಯಾಯಾಲಯ ವಿರೋಧ ಪಕ್ಷಗಳ ಅರ್ಜಿ ತಿರಸ್ಕರಿಸಿದೆ. ನ್ಯಾಯಾಲಯದ ತೀರ್ಪು ಗೌರವಿಸುತ್ತಾ, ಚುನಾವಣೆಗಳಲ್ಲಿ ಮತಯಂತ್ರಗಳ ದುರ್ಬಳಕೆಯ ಆರೋಪದ ಬಗ್ಗೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವ ಅಗತ್ಯವಿದೆ ಎಂದರು.
ಉದ್ಧವ್ ಠಾಕ್ರೆ ಅವರ ಹೇಳಿಕೆ ಅನ್ವಯ ಮಹಾರಾಷ್ಟ್ರದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ಪ್ರಚಾರ ಸಭೆಗಳಲ್ಲಿ ಶೇ. 25 ರಷ್ಟು ಖಾಲಿ ಕುರ್ಚಿಗಳಿರುತ್ತಿದ್ದವು. ನಮ್ಮ ಸಭೆಗೆ ಸೇರುವ ಅರ್ಧದಷ್ಟು ಜನ ಬಿಜೆಪಿ ಸಭೆಯಲ್ಲಿ ಸೇರಿಸಲು ಸಾಧ್ಯವಿಲ್ಲದಿದ್ದಾಗ, ಖಾಲಿ ಕುರ್ಚಿಗಳೆ ಬಿಜೆಪಿಗೆ ಮತಗಳಾಗಿ ಪರಿವರ್ತನೆಗೊಂಡಿರುವುದು ಹೇಗೆ ಎನ್ನುವ ಪ್ರಶ್ನೆ ಅತ್ಯಂತ ಗಂಭೀರವಾಗಿದೆ. ಜಗತ್ತಿನ ಶೇ 90ರಷ್ಟು ದೇಶಗಳಲ್ಲಿ ಮತ ಪತ್ರಗಳ ಮೂಲಕ ಚುನಾವಣೆ ನಡೆಯುತ್ತದೆ. ನಮ್ಮ ದೇಶದಲ್ಲೂ, ಮತಪತ್ರಗಳ ಮೂಲಕ ಚುನಾವಣೆ ನಡೆದಾಗ ಚುನಾವಣೆ ಸಾಧ್ಯ. ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯನ್ನು ಮತ ಪತ್ರಗಳ ಆಧಾರವಾಗಿ ನಿರ್ವಹಿಸಬೇಕು ಎನ್ನುವುದು ಕಾಂಗ್ರೆಸ್ ಹಾದಿಯಾಗಿ ಎಲ್ಲಾ ವಿರೋಧ ಪಕ್ಷಗಳ ಒತ್ತಾಯವಾಗಿದೆ ಎಂದರು.
ರಾಜ್ಯದಲ್ಲಿ ಮೂರು ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ವಕ್ಫ್ ವಿವಾದ ಸೇರಿದಂತೆ ಮುಡಾ ವಿವಾದ ಮೂಲಕ ಬಿಜೆಪಿ, ಜೆಡಿಎಸ್ ಪಕ್ಷಗಳು ಏನೆಲ್ಲ ಗೊಂದಲಕ್ಕೆ ಎಡೆ ಮಾಡಿದರೂ ಮೂರೂ ಕ್ಷೇತ್ರದ ಜನ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಎತ್ತಂಗಡಿ ಭೀತಿಯಲ್ಲಿ ತಮಿಳು ಕಾಲೋನಿ ನಿವಾಸಿಗಳು: ‘ಜಾಗ ಬಿಟ್ಟು ಕದಲಲ್ಲ’ ಎಂದ ಜನ
ಹಿಂದೂ-ಮುಸ್ಲಿಂ ವಿವಾದದ ಮೂಲಕ ಜನರ ಮಧ್ಯೆ ವಿಭೇದ ತಂದು, ಕೋಮು ಭಾವನೆಗಳನ್ನು ಪ್ರಚೋದಿಸಿ, ಚುನಾವಣೆ ನಡೆಸುವುದಕ್ಕೆ ಕರ್ನಾಟಕದ ಮೂರು ಕ್ಷೇತ್ರ ಮತದಾರರು ಅಂತ್ಯ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮತಪತ್ರಗಳ ಮೂಲಕ ಚುನಾವಣೆ ತರುವ ಬದ್ಧತೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ್ ಪಾಟೀಲ್ ಇಟಗಿ, ಕೆ.ಶಾಂತಪ್ಪ, ಜಿ ಶಿವಮೂರ್ತಿ, ಅಬ್ದುಲ್ ಖರೀಂ, ಅಮರೇಗೌಡ,ರಜಾಕ್ ಉಸ್ತಾದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
