ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ ಉಲ್ಲಂಘನೆ ಆರೋಪದಡಿ ಹೈಕೋರ್ಟ್‌ನಲ್ಲಿ ಹೂಡಿದ್ದ ದಾವೆಯನ್ನು ವಜಾಗೊಳಿಸುವಂತೆ ಕೋರಿದ್ದ ಮೂರನೇ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಮತ್ತೆ ವಜಾಗೊಳಿಸಿದೆ.
ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ 2023 ಮೇ 10ರಂದು ನಡೆದ ಚುನಾವಣೆ ಸಮಯದಲ್ಲಿ ಬಾಗೇಪಲ್ಲಿಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಚುನಾವಣಾ ಅಯೋಗಕ್ಕೆ ಸಲ್ಲಿಸಿರುವ ನಾಮಪತ್ರ ದೋಷ ಪೂರಿತವಾಗಿದ್ದು, ಸದರಿ ನಾಮಪತ್ರದಲ್ಲಿ ಆಸ್ತಿ ವಿವರಗಳನ್ನು ಮುಚ್ಚಿಟ್ಟಿದ್ದಾರೆ. ಆಸ್ತಿಗಳ ತೆರಿಗೆ ಪಾವತಿ ಬಾಕಿ ಕುರಿತು ಮಾಹಿತಿ ನೀಡದೆ ಚುನಾವಣಾ ಅಕ್ರಮ ಎಸಗಿದ್ದು, ಪ್ರಜಾ ಪ್ರತಿನಿದಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಬೆಂಗಳೂರಿನ ಹೈಕೋರ್ಟ್‌ನಲ್ಲಿ 2023ರ ಜೂನ್ 24ರಂದು ಚುನಾವಣಾ ಅಕ್ರಮದ ಕುರಿತು ಅರ್ಜಿ ಸಲ್ಲಿಸಿದ್ದರು. ಅದರಂತೆ 2023ರ ಜುಲೈ 3ರಂದು ಪ್ರಕರಣ ದಾಖಲಾಗಿತ್ತು.

ವಿಧಾನಸಭಾ ಚುನಾವಣೆಯ ದೋಷಪೂರಿತ ನಾಮಪತ್ರ ಸಲ್ಲಿಕೆ ಅರ್ಜಿಯ ವಿಚಾರಣೆಯನ್ನು ವಜಾಗೊಳಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರ್ನಾಟಕ ಹೈಕೋರ್ಟಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರಿದ್ದ ಏಕಸದಸ್ಯ ಪೀಠ ಶಾಸಕ ಸುಬ್ಬಾರೆಡ್ಡಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿ ವಿಚಾರಣೆಯನ್ನು ಮುಂದುವರಿಸುವಂತೆ ಆದೇಶಿಸಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪುನರ್ವಸತಿ ಕಾರ್ಯಕರ್ತರ ಪ್ರತಿಭಟನೆ
ಇದಕ್ಕೂ ಮುನ್ನ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ದೆಹಲಿಯ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಕೋರ್ಟ್ ನ್ಯಾಯಾಧೀಶ ಜಸ್ಟೀಸ್ ಸೂರ್ಯಕಾಂತ್ ಹಾಗೂ ಜಸ್ಟೀಸ್ ಉಜ್ಜಲ್ ಬುಯ್ಯಾನ್ 2024 ಆಗಸ್ಟ್ 9ರಂದು ಶಾಸಕ ಸುಬ್ಬಾರೆಡ್ಡಿಯ ಮೇಲ್ಮನವಿಯ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಹೈಕೋರ್ಟಲ್ಲೇ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವಂತೆ ಆದೇಶಿಸಿದ್ದರು. ಆದರೆ ಇದೀಗ ಶಾಸಕ ಸುಬ್ಬಾರೆಡ್ಡಿ ಹೈಕೋರ್ಟಲ್ಲಿ ಮೂರನೇ ಬಾರಿಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯೂ ವಜಾಗೊಂಡಿದ್ದು, ಸದಸ್ಯತ್ವ ಅಸಿಂಧುವಾಗುತ್ತ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಮೂರು ಬಾರಿ ಅರ್ಜಿ ವಜಾ :
ಬೆಂಗಳೂರು ಹೈಕೋರ್ಟಲ್ಲಿ ದಾಖಲಾಗಿರುವ ಚುನಾವಣಾ ಅಸಿಂಧು ಅರ್ಜಿಯನ್ನು ವಜಾಗೊಳಿಸುವಂತೆ ಶಾಸಕ ಸುಬ್ಬಾರೆಡ್ಡಿ ಮೊದಲ ಬಾರಿಗೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ ತಿರಸ್ಕೃತಗೊಂಡಿತ್ತು. ಇದನ್ನು ಪ್ರಶ್ನಿಸಿ ಶಾಸಕ ಸುಬ್ಬಾರೆಡ್ಡಿ ಎರಡನೇ ಬಾರಿ ದೆಹಲಿಯ ಸುಪ್ರೀಂ ಕೋರ್ಟಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಎರಡನೇ ಅರ್ಜಿಯೂ ತಿರಸ್ಕೃತಗೊಂಡು ವಿಚಾರಣೆ ನಡೆಸುವಂತೆ ಅದೇಶ ಮಾಡಿತ್ತು. ಇದೀಗ ಕರ್ನಾಟಕ ಹೈಕೋರ್ಟಲ್ಲಿ ಮೂರನೇ ಬಾರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಾದ ಮತ್ತು ಪ್ರತಿವಾದವನ್ನು ಆಲಿಸಿರುವ ಹೈಕೋರ್ಟ್ ಏಕಸದಸ್ಯ ಪೀಠವು ನ.22ರಂದು ಅರ್ಜಿಯನ್ನು ವಜಾಗೊಳಿಸಿ ವಿಚಾರಣೆಗೆ ಆದೇಶಿಸಿದೆ.
ಮೂರು ಬಾರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗಳು ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಎಂಎಲ್‌ಎ ಸ್ಥಾನಕ್ಕೆ ಕಾನೂನು ಸಂಕಷ್ಟ ಎದುರಾಗಿದ್ದು, ಹೈಕೋರ್ಟ್ ಮುಂದಿನ ಆದೇಶದವರೆಗೂ ಕಾದು ನೋಡುವ ಪರಿಸ್ಥಿತಿ ಎದುರಾಗಿದೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಪರಾಜಿತ ಅರ್ಭರ್ಥಿ ಸಿ ಮುನಿರಾಜು, ಬಾಗೇಪಲ್ಲಿಯ ಶಾಸಕ ಸುಬ್ಬಾರೆಡ್ಡಿ ದೋಷಪೂರಿತ ನಾಮಪತ್ರ ಸಲ್ಲಿಸಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಅಯ್ಕೆಯಾಗಿದ್ದಾರೆ. ಚುನಾವಣಾ ಅಕ್ರಮಗಳ ಬಗ್ಗೆ ದಾಖಲೆ ಸಮೇತ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದೇನೆ. ಇಬ್ಬರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು, ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.
(ವರದಿ : ರಾ.ನ.ಗೋಪಾಲರೆಡ್ಡಿ, ಬಾಗೇಪಲ್ಲಿ)